‘ಸಂಜು ವೆಡ್ಸ್ ಗೀತಾ-2’ ಗೀತೆಯಲ್ಲೊಂದು ಪ್ರೇಮಕಥೆ!

ಹೊರಬಂತು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಮತ್ತೊಂದು ಗೀತೆ
ಶ್ರೀಧರ್ ವಿ. ಸಂಭ್ರಮ್-ಕವಿರಾಜ್ ಜೋಡಿಯಲ್ಲಿ ಹಾಡಿನ ಮೋಡಿ
ನಿರ್ದೇಶಕ ನಾಗಶೇಖರ್ ಬರ್ತ್‌ಡೇಗೆ ಸಾಂಗ್ ಗಿಫ್ಟ್
ಕೆಲ ವರ್ಷಗಳ ಹಿಂದೆ ‘ಸಂಜು ವೆಡ್ಸ್ ಗೀತಾ’ ಚಿತ್ರ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದರ ಮುಂದುವರೆದ ಭಾಗ ಎಂಬಂತೆ ‘ಸಂಜು ವೆಡ್ಸ್ ಗೀತಾ 2’ ಚಿತ್ರ ತೆರೆಗೆ ಬರುತ್ತಿದೆ. ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ 2’ ಸಿನೆಮಾಕ್ಕೆ ನಿರ್ದೇಶನ ಮಾಡುತ್ತಿದ್ದು, ‘ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್’ ಅಡಿಯಲ್ಲಿ ಛಲವಾದಿ ಕುಮಾರ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ‘ಸಂಜು ವೆಡ್ಸ್ ಗೀತಾ 2’ ಸಿನೆಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇತ್ತೀಚೆಗೆ ನಿರ್ದೇಶಕ ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ… ’ ಎಂಬ ಹಾಡು ಬಿಡುಗಡೆ ಆಗಿದೆ.
ನಟ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್, ‘ಕನ್ನಡ ನಿರ್ಮಾಪಕರ ಸಂಘ’ದ ಅಧ್ಯಕ್ಷ ಉಮೇಶ್ ಬಣಕಾರ್ ಮೊದಲಾದ ಗಣ್ಯರು ಹಾಜರಿದ್ದು, ಈ ಹಾಡನ್ನು ಬಿಡುಗಡೆಗೊಳಿಸಿದರು. ಇನ್ನು ಕವಿರಾಜ್ ಸಾಹಿತ್ಯ ರಚನೆಯ ಈ ಹಾಡಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದು, ಸೋನು ನಿಗಮ್ ಮತ್ತು ಸಂಗೀತ ರವೀಂದ್ರನಾಥ್ ಧ್ವನಿಯಲ್ಲಿ ಈ ಗೀತೆ ಮೂಡಿಬಂದಿದೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ… ’ ಗೀತೆಯ ಲಿರಿಕಲ್ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು…
ಸ್ವಿಸ್ ಸೈನಿಕನ ಪ್ರೇಮಕಥೆಯ ಮೆಲೋಡಿ ಗೀತೆ…
‘ಸಂಜು ವೆಡ್ಸ್ ಗೀತಾ 2’ ಚಿತ್ರದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ… ’ ಗೀತೆಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್, ‘ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು 6 ಸುಂದರ ಹಾಡುಗಳು ಚಿತ್ರದಲ್ಲಿದೆ. ಈ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ. ಸ್ವಿಟ್ಜರ್ ಲ್ಯಾಂಡ್ ಸೈನಿಕನೊಬ್ಬ ತನ್ನ ರಾಣಿ ಸೆಲ್ವಿಕ್ ಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಪ್ರೀತಿ ಮಾಡ್ತಿರ್ತಾನೆ. ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಕ್ಕೆ ಆಗ್ತಿರಲಿಲ್ಲ, ಏಕೆಂದರೆ ಆಕೆ ಮಹಾರಾಣಿ. ಆತನದು ಒನ್ ವೇ ಲವ್, ಒಮ್ಮೆ ಜರ್ಮನ್ ಸೈನಿಕರು ಸ್ವಿಟ್ಜರ್ ಲ್ಯಾಂಡ್ ಮೇಲೆ ಅಟ್ಯಾಕ್ ಮಾಡ್ತಾರೆ. ಆಗ ವೀರಾವೇಶದಿಂದ ಹೋರಾಡಿದ ಆ ಸೈನಿಕ ಅವರನ್ನು ಸೋಲಿಸಿ ವೀರಮರಣವನ್ನಪ್ಪುತ್ತಾನೆ, ತನ್ನ ರಾಣಿಗೆ ಆಕೆಯ ಕಿರೀಟವನ್ನು ಮತ್ತೆ ತಂದುಕೊಡುತ್ತಾನೆ. ಸಾಯೋ ಸಮಯದಲ್ಲಿ ಆತ ರಾಣಿಗೆ ತನ್ನ ರಕ್ತದಲ್ಲಿ “ಐ ಲವ್ ಯು ಫಾರೆವರ್” ಅಂತ ಒಂದು ಪತ್ರ ಬರೆಯುತ್ತಾನೆ. ಈ ಹಾಡು ಚಿತ್ರಕಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುತ್ತದೆ. ಈ ಸಾಂಗ್ ನಲ್ಲಿ ಮೊದಲ ಬಾರಿಗೆ ಆಕ್ಷನ್ ಇಟ್ಟಿದ್ದೇನೆ’ ಎಂದು ಹಾಡಿನ ಹಿನ್ನೆಲೆಯ ಬಗ್ಗೆ ವಿವರಣೆ ನೀಡಿದರು.