‘ಪರಸಂಗದ ಗೆಂಡೆ ತಿಮ್ಮ’ನ ನಾಯಕಿ ರೀಟಾ ಅಂಚನ್ ನಿಧನ

ಹಿರಿಯ ನಟಿ ರೀಟಾ ಅಂಚನ್ ಆಸ್ಪತ್ರೆಯಲ್ಲಿ ಕೊನೆಯುಸಿರು!
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟಿ
ನ. 13, ಬೆಂಗಳೂರು: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನೆಮಾಗಳ ಪೈಕಿ ಒಂದಾಗಿರುವ ‘ಪರಸಂಗದ ಗೆಂಡೆ ತಿಮ್ಮ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಹಿರಿಯ ನಟಿ ರೀಟಾ ಅಂಚನ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 66 ವರ್ಷ ವಯಸ್ಸಿನ ರೀಟಾ ಅಂಚನ್ ಕಳೆದ ಕೆಲ ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
1970-80ರ ದಶಕದ ಜನಪ್ರಿಯ ನಟಿ
ಪುಣೆಯ ಪ್ರತಿಷ್ಟಿತ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ ದಿಂದ 1971- 72 ಸಾಲಿನಲ್ಲಿ ಅಭಿನಯದಲ್ಲಿ ಪದವಿ ಪಡೆದು ಹೊರಬಂದ ರೀಟಾ ಅಂಚನ್, 1975-80ರ ದಶಕದ ಜನಪ್ರಿಯ ನಾಯಕ ನಟಿಯರ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕನ್ನಡ, ಹಿಂದಿ, ಬೆಂಗಾಳಿ, ಮರಾಠಿ ಹೀಗೆ ಭಾರತದ ಹಲವು ಭಾಷೆಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ರೀಟಾ ಅಂಚನ್ ಹಲವು ಬೆಳ್ಳಿತೆರೆಯಲ್ಲಿ ಹಲವು ವೈವಿಧ್ಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಹೆಸರು ತಂದುಕೊಟ್ಟಿದ್ದ ‘ಪರಸಂಗದ ಗೆಂಡೆ ತಿಮ್ಮ’ ಚಿತ್ರ
ಕನ್ನಡದ ಸೂಪರ್ ಹಿಟ್ ಸಿನೆಮಾಗಳಲ್ಲಿ ಒಂದಾಗಿರುವ ‘ಪರಸಂಗದ ಗೆಂಡೆ ತಿಮ್ಮ’ ಚಿತ್ರ ರೀಟಾ ಅಂಚನ್ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮತ್ತು ಜನಪ್ರಿಯತೆ ಎರಡನ್ನೂ ತಂದುಕೊಟ್ಟಿತ್ತು. ಅದಾದ ಬಳಿಕ ಹಿರಿಯ ನಟ ಮತ್ತು ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಡರ ‘ಕನಕಾಂಬರ’ ಚಿತ್ರದಲ್ಲೂ ರೀಟಾ ಅಂಚನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಉತ್ತರದತ್ತ ಮುಖ ಮಾಡಿದ್ದ ರೀಟಾ ಅಂಚನ್ ಬಳಿಕ ಹಿಂದಿ, ಬೆಂಗಾಳಿ, ಮರಾಠಿ ಸೇರಿದಂತೆ ಸಾಕಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದರು.
ಕ್ಷೀಣಿಸಿದ್ದ ಆರೋಗ್ಯ, ಐಸಿಯುನಲ್ಲಿ ಚಿಕಿತ್ಸೆ
ಕಳೆದ ಕೆಲ ವರ್ಷಗಳಿಂದ ಸಿನೆಮಾ ಮತ್ತು ನಟನೆಯಿಂದ ದೂರ ಉಳಿದಿದ್ದ ಹಿರಿಯ ನಟಿ ರೀಟಾ ಅಂಚನ್, ಬೆಂಗಳೂರಿನಲ್ಲಿ ವಾಸವಿದ್ದರು ಪುತ್ರಿ ಡಾ. ಐಶ್ವರ್ಯ ರಾಧಾಕೃಷ್ಣ ರೀಟಾ ಅಂಚನ್ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ರೀಟಾ ಅಂಚನ್ ಅವರ ಆರೋಗ್ಯ ಸಾಕಷ್ಟು ಹದಗೆಡುತ್ತಿದ್ದು, ಗಂಭೀರವಾಗುತ್ತಿದ್ದಂತೆ, ಎರಡು ದಿನಗಳ ಹಿಂದೆ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ರೀಟಾ ಅಂಚನ್ ಅವರನ್ನು ದಾಖಲಿಸಲಾಗಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 13ರ ಮಧ್ಯಾಹ್ನ 3.00 ಗಂಟೆಯ ಹೊತ್ತಿಗೆ ರೀಟಾ ಅಂಚನ್ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.