‘ಗಜರಾಮ’ನ ಬಿಡುಗಡೆಗೆ ಮುಹೂರ್ತ ಫಿಕ್ಸ್

ರಾಜವರ್ಧನ್ ‘ಗಜರಾಮ’ ಡಿಸೆಂಬರ್ 27ಕ್ಕೆ ತೆರೆಗೆ
ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ರಾಜವರ್ಧನ್ ರೆಡಿ…
ಭರದಿಂದ ಸಾಗಿದ ‘ಗಜರಾಮ’ನ ಪ್ರಚಾರ
‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ನಾಯಕ ನಟ ರಾಜವರ್ಧನ್ ಈಗ ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನ್ಮೆಂಟ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಸದ್ಯ ರಾಜವರ್ಧನ್ ನಾಯಕ ನಟನಾಗಿ ಅಬಿನಯಿಸಿರುವ ‘ಗಜರಾಮ’ ಸಿನೆಮಾದ ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಈಗ ‘ಗಜರಾಮ’ ಚಿತ್ರತಂಡ ಅಧಿಕೃತವಾಗಿ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ.
ಡಿಸೆಂಬರ್ ಅಂತ್ಯಕ್ಕೆ ‘ಗಜರಾಮ’ ನ ದರ್ಶನ
ಹೌದು, ಸದ್ಯ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ‘ಗಜರಾಮ’ ಚಿತ್ರವನ್ನು ಇದೇ ಡಿಸೆಂಬರ್ 27ಕ್ಕೆ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ‘ಗಜರಾಮ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚಿಗೆ ‘ಸಾರಾಯಿ ಶಾಂತಮ್ಮ…’ ಎಂಬ ಐಟಂ ನಂಬರ್ ಹಾಡನ್ನು ಬಿಡುಗಡೆ ಮಾಡಿತ್ತು. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ಇದೀಗ ‘ಗಜರಾಮ’ನ ಬಿಡುಗಡೆಯ ದಿನಾಂಕವನ್ನು ಘೋಷಿಸಿರುವ ಚಿತ್ರತಂಡ, ಸಿನೆಮಾದ ಟೈಟಲ್ ಟ್ರ್ಯಾಕ್ ಹಾಡನ್ನು ಕೂಡ ಬಿಡುಗಡೆ ಮಾಡಿದೆ.
ಲವ್ ಕಂ ಆಕ್ಷನ್ ಕಥಾಹಂದರದ ‘ಗಜರಾಮ’
ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್ ವಿ. ಎ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ‘ಶಿಷ್ಯ’ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ‘ಪೈಲ್ವಾನ್’ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ನಟಿ ರಾಗಿಣಿ ದ್ವಿವೇದಿ ಸಿನೆಮಾದ ವಿಶೇಷ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸಂತು, ‘ಮಜಾ ಟಾಕೀಸ್’ ಪವನ್, ವಿಜಯ್ ಚೆಂಡೂರು ಒಳಗೊಂಡ ತಾರಾಬಳಗ ಸಿನೆಮಾದಲ್ಲಿದೆ.
ನುರಿ ತಂತ್ರಜ್ಞರ ಕೈಯಲ್ಲಿ ಅರಳಿದ ಚಿತ್ರ
ಈ ಹಿಂದೆ ‘ಬಾಂಡ್ ರವಿ’ ಸಿನೆಮಾವನ್ನು ನಿರ್ಮಾಣ ಮಾಡಿದ್ದ ‘ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್’ ನಡಿ ನರಸಿಂಹಮೂರ್ತಿ ‘ಗಜರಾಮ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ‘ಗಜರಾಮ’ ಸಿನೆಮಾದ ಗೀತೆಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಹಿಸುತ್ತಿದ್ದಾರೆ. ಉಳಿದಂತೆ ‘ಗಜರಾಮ’ ಚಿತ್ರಕ್ಕೆ ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ‘ಗಜರಾಮ’ ಸಿನೆಮಾದ ಹಾಡುಗಳು ಮೂಡಿ ಬಂದಿವೆ. ಒಟ್ಟಾರೆ ಒಂದಷ್ಟು ಬಿಡುಗಡೆಗೂ ಮೊದಲೇ ಒಂದಷ್ಟು ಸೌಂಡ್ ಮಾಡುತ್ತಿರುವ ‘ಗಜರಾಮ’ನ ಅಬ್ಬರ ಥಿಯೇಟರ್‌ನಲ್ಲಿ ಹೇಗಿರಲಿದೆ ಎಂಬುದು ಇದೇ ಡಿಸೆಂಬರ್ ಅಂತ್ಯಕ್ಕೆ ಗೊತ್ತಾಗಲಿದೆ.