ಟೀಸರ್ ನಲ್ಲಿ’ನಿದ್ರಾದೇವಿ’ ಕಂಡಳು!

ಪ್ರವೀರ್ ಶೆಟ್ಟಿ ಹೊಸ ಸಿನೆಮಾ ‘ನಿದ್ರಾದೇವಿ Next door’ ಟೀಸರ್ ರಿಲೀಸ್
‘ನಿದ್ರಾದೇವಿ Next door’ ಸಿನೆಮಾಗೆ ಶ್ರೀಮುರಳಿ ಸಾಥ್
‘ಬಘೀರ’ನ ಕೈಯಲ್ಲಿ ‘ನಿದ್ರಾದೇವಿ Next door’ ಟೀಸರ್
ಕನ್ನಡಪರ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ‘ನಿದ್ರಾದೇವಿ Next door’ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ‘ನಿದ್ರಾದೇವಿ Next door’ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ‘ನಿದ್ರಾದೇವಿ Next door’ ಸಿನೆಮಾದ ಟೀಸರ್ ಬಿಡುಗಡೆ ಸಮಾರಂಭ ಬೆಂಗಳೂರಿನ ‘ಚಾಮುಂಡೇಶ್ವರಿ ಸ್ಟುಡಿಯೋ’ದಲ್ಲಿ ನಡೆಯಿತು. ‘ಬಘೀರ ‘ ಸಿನೆಮಾದ ಗೆಲುವಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ‘ನಿದ್ರಾದೇವಿ Next door’ ಟೀಸರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.
ಶ್ರೀಮುರಳಿ ಮಾತನಾಡಿ, ‘ನಿರ್ಮಾಪಕರಾದ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನೆಮಾ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಅವರಿಗೆ ಒಳ್ಳೆಯದು ಆಗಲಿ. ನಿಮ್ಮಂತಹ ನಿರ್ಮಾಪಕರು ಇರುವವರೆಗೂ ನಮ್ಮಂತಹ ಕಲಾವಿದರಿಗೆ, ಚಿತ್ರರಂಗ ಎದುರಿಕೊಳ್ಳುವ ಅವಕಾಶವಿಲ್ಲ. ಪ್ರಯತ್ನಪಡಬೇಕು. ಪ್ರಯತ್ನಪಡುವುದರಲ್ಲಿ ತಪ್ಪಿಲ್ಲ. ನಿಮ್ಮ ದಯೆಯಿಂದ ಕಲಾವಿದರೆ, ನಿರ್ದೇಶಕರಿಗೆ ಚಿತ್ರತಂಡಕ್ಕೆ ಒಳ್ಳೆಯದಾಗುತ್ತದೆ. ನಾನು ಪ್ರವೀರ್ ಜಿಮ್ ಮೇಟ್ಸ್. ವರ್ಕೌಟ್ ಮಾಡುವಾಗ ಪ್ರವೀರ್ ಅದು ಮಾಡಿ ಇದು ಮಾಡಿ ಎನ್ನುತ್ತಾರೆ. ಅವರಿಗೆ ಒಳ್ಳೆಯದು ಆಗುತ್ತದೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದೆ. ಶೈನ್ ಫ್ಯಾನ್ ನಾನು. ನೀವು ಚಿತ್ರದಲ್ಲಿ ಚೆನ್ನಾಗಿ ಕಾಣ್ತಿದ್ದೀರಾ. ರಿಷಿಕಾಗೂ ಒಳ್ಳೆಯದು ಆಗಲಿ. ಹಣ ಖರ್ಚು ಮಾಡುವುದು ಅಲ್ಲ. ಸಿನಿಮಾ ಸುಮ್ಮನೇ ಮಾಡುವುದು ಅಲ್ಲ. ಇದನ್ನು ಕ್ಯಾಪ್ಟನ್ ಆಗಿ ಸುರಾಗ್ ಏನೋ ವಿಷ್ಯ ಹೇಳುತ್ತಿರುವುದು ಗೊತ್ತಾಗುತ್ತಿದೆ. ಮ್ಯೂಸಿಕ್ ಕೂಡ ಟೀಸರ್ ನಲ್ಲಿ ಚೆನ್ನಾಗಿದೆ’ ಎಂದರು.
ನಟ ಪ್ರವೀರ್ ಶೆಟ್ಟಿ ಮಾತನಾಡಿ, ‘ಸುರಾಗ್ ನನಗೂ ಎರಡು ವರ್ಷದ ಜರ್ನಿ ಇದೆ. ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಆದ್ರೆ ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರು ರಿಸೀವ್ ಮಾಡಲಿಲ್ಲ. ಥ್ಯಾಂಕೂ ಸರ್. ಇದು ನಿಮ್ಮಿಂದ ಆಗಿರೋದು. ಬ್ಯೂಟಿಫುಲ್ ವಿಷ್ಯುವಲ್ಸ್ ಶೂಟ್ ಮಾಡಿದ್ದಾರೆ ನಮ್ಮ ಛಾಯಾಗ್ರಹಕರು, ಮ್ಯೂಸಿಕ್ ಕೂಡ ತುಂಬಾ ಚೆನ್ನಾಗಿದೆ. ರಿಷಿಕಾ ಅವರಿಂದ ತುಂಬಾ ಕಲಿಯುತ್ತಿದ್ದೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ’ ಎಂದು ಹೇಳಿದರು.
ನಿರ್ದೇಶಕ ಸುರಾಗ್ ಮಾತನಾಡಿ, ‘ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನು ಏನು ಕಥೆ , ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್ ಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಂ ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಜಯರಾಮ್ ಸರ್ ಒಳಗಡೆ ಒಬ್ಬ ನಿರ್ದೇಶಕರಾಗಿದ್ದಾರೆ. ಅವರಿಗೆ ಸಿನಿಮಾ ಟೆಸ್ಟ್ ತುಂಬಾ ಚೆನ್ನಾಗಿದೆ’ ಎಂದರು.
ಹುಡುಗನನ್ನು ಆವರಿಸಿಕೊಂಡಳು ‘ನಿದ್ರಾದೇವಿ’
‘ನಿದ್ರಾದೇವಿ Next door’ ಟೀಸರ್ ಬಹಳ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ ಕಥೆ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ ಲವ್ ಸ್ಟೋರಿ, ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ. ಎಸ್. ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ‘ನಿದ್ರಾದೇವಿ Next door’ ಸಿನೆಮಾ ‘ಸುರಾಮ್ ಮೂವೀಸ್ ‘ ಬ್ಯಾನರಿನಲ್ಲಿ ತಯಾರಾಗಿದು, ಚಿತ್ರದ ಟೀಸರ್ ‘ಸುರಾಮ್ ಮೂವೀಸ್’ ಯು-ಟ್ಯೂಬ್ ಚಾನೆಲ್‌ನಲ್ಲಿ ಅನಾವರಣಗೊಂಡಿದೆ.
‘ನಿದ್ರಾದೇವಿ Next door’ ಸಿನೆಮಾದ ಟೀಸರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಈ ಚಿತ್ರಕ್ಕೆ ನಿರ್ಮಾಪಕರಾದ ಜಯರಾಮ್ ದೇವಸಮುದ್ರ ರವರು ತಮ್ಮ ‘ಸುರಮ್ ಮೂವೀಸ್’ ಬ್ಯಾನರ್ನಡಿಯಲ್ಲಿ ನಿರ್ಮಿಸಿದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ‘ರೇವ್ ಪಾರ್ಟಿ’ ಮತ್ತು ‘ಎಂಗೇಜ್ಮೆಂಟ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ‘ನಿದ್ರಾದೇವಿ Next Door’ ಚಿತ್ರವೂ, ಅವರ ಬ್ಯಾನರ್ನಲ್ಲಿ ಬರುತಿರುವ ಒಂದು ವಿಭಿನ್ನ ಚಿತ್ರ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ (ಯುವ ಸಿನಿಮಾ ಖ್ಯಾತಿ) ಮತ್ತು ಹೇಮಂತ್ ಕುಮಾರ್ ಡಿ. ಸಂಕಲನವಿದೆ.