Pop Corner

ಯುವ ರಾಜಕುಮಾರ್‌ ‘ಎಕ್ಕ’ ಚಿತ್ರೀಕರಣ ಶುರು

ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ’ಎಕ್ಕ’ ಚಿತ್ರದ ಮುಹೂರ್ತ

ಯುವ ರಾಜಕುಮಾರ್‌ ಅಭಿನಯದ ಮತ್ತೊಂದು ಚಿತ್ರಕ್ಕೆ ಚಾಲನೆ…

ಚಿತ್ರೀಕರಣಕ್ಕೆ ಹೊರಟ ಯುವ ರಾಜಕುಮಾರ್‌ ಹೊಸ ಚಿತ್ರ

‘ಪಿ.ಆರ್.ಕೆ ಪ್ರೊಡಕ್ಷನ್ಸ್‌’, ‘ಜಯಣ್ಣ ಫಿಲಂಸ್’ ಹಾಗೂ ‘ಕೆ.ಆರ್.ಜಿ.ಸ್ಟುಡಿಯೋಸ್‌’ ಜಂಟಿಯಾಗಿ ನಿರ್ಮಿಸುತ್ತಿರುವ ‘ಎಕ್ಕ’ ಸಿನೆಮಾದ ಟೈಟಲ್‌ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಘೋಷಣೆಯಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಈಗ ‘ಎಕ್ಕ’ ಸಿನೆಮಾದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಹೌದು, ಈಗಾಗಲೇ ‘ಎಕ್ಕ’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸದಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ‘ಎಕ್ಕ’ ಸಿನೆಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿದೆ.

ಬಂಡೆ ಮಾಕಾಳಮ್ಮ ಸನ್ನಿಧಿಯಲ್ಲಿ’ಎಕ್ಕ’ ಚಿತ್ರದ ಮುಹೂರ್ತ

ಬೆಂಗಳೂರಿನ ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರತಂಡ ‘ಎಕ್ಕ’ ಸಿನೆಮಾದ ಚಿತ್ರೀಕರಣವನ್ನು ಆರಂಭಿಸಿದೆ. ನಿರ್ಮಾಪಕ ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶ್ರೀಮತಿ ಶೈಲಜಾ ವಿಜಯ್‌ ‘ಎಕ್ಕ’ ಸಿನೆಮಾದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ‘ಎಕ್ಕ’ ಚಿತ್ರಕ್ಕೆ ನಾಂದಿ ಹಾಡಲಾಯಿತು, ಮೊದಲ ಶಾಟ್‌ ಅನ್ನು ನಟರಾಕ್ಷಸ ಡಾಲಿ ಧನಂಜಯ್‌ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ ‘ಎಕ್ಕ’ ಸಿನೆಮಾದ ಚಾಲನೆ ನೀಡಿದರು. ಇನ್ನು ಮೊದಲ ಹಂತದಲ್ಲಿ ‘ಎಕ್ಕ’ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು ಸುತ್ತಮುತ್ತ ನಡೆಯಲಿದ್ದು, ಎರಡನೇ ಹಂತದ ಚಿತ್ರೀಕರಣ ಕಾಶ್ಮೀರ, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ ನಡೆಯಲಿದೆ ಎಂದು ‘ಎಕ್ಕ’ ಚಿತ್ರತಂಡ ತಿಳಿಸಿದೆ.

‘ಎಕ್ಕ’ ಸಿನೆಮಾದಲ್ಲಿ ಏನಿದೆ..?

ಇನ್ನು ರೋಹಿತ್‌ ಪದಕಿ ನಿರ್ದೇಶನದ ‘ಎಕ್ಕ’ ಒಬ್ಬ ಯುವಕನ ಕಥೆಯನ್ನು ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ ‘ಎಕ್ಕ’ ‌ಎಂಬುದು ಚಿತ್ರತಂಡದ ಒಕ್ಕೊರಲ ಮಾತು. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ‌ ಮೈಲಿಗಲ್ಲನ್ನು ಸಾಧಿಸಲಿದೆ ಎಂಬ ಆಶ್ವಾಸನೆಯನ್ನು ಚಿತ್ರ ತಂಡ ನೀಡಿದೆ. ‘ಎಕ್ಕ’ ಸಿನೆಮಾದ ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರೋಹಿತ್‌ ಪದಕಿ, “ಎಕ್ಕ ಒಂದು ಮೆಗಾ ಚಿತ್ರವಾಗಿದ್ದು, ಇದರ ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜಕುಮಾರ್‌ ಮತ್ತು ಅವರ ಅಭಿಮಾನಿಗಳ ಎಲ್ಲರ ನಂಬಿಕೆಯನ್ನು ಈ ಚಿತ್ರ ಉಳಿಸಲಿದೆ, ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ’ ಎಂದು ತಿಳಿಸಿದರು.

ಅಪ್ಪು ಆಶಿರ್ವಾದದೊಂದಿಗೆ ‘ಎಕ್ಕ’ ಆಟ ಆರಂಭ!

ಚಿತ್ರದ ನಾಯಕ ನಟ ಯುವ ರಾಜಕುಮಾರ್‌ ಮಾತನಾಡಿ, ‘ತಾಯಿ ಆಶಿರ್ವಾದದೊಂದಿಗೆ, ಅಪ್ಪು ಚಿಕ್ಕಪ್ಪನ ಆಶಿರ್ವಾದದೊಂದಿಗೆ ಇವತ್ತು ‘ಎಕ್ಕ’ ಚಿತ್ರವನ್ನು ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳೊಡನೆ, ರೋಹಿತ್ ಪದಕಿ ಅಂತಹ ದೊಡ್ಡ ನಿರ್ದೇಶಕರೊಡನೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಖುಷಿ ಇದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಎಕ್ಕ’ ಚಿತ್ರದಲ್ಲಿ ಯುವ ರಾಜಕುಮಾರ್‌ ಅವರಿಗೆ ಸಂಪದಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ‘ಎಕ್ಕ’ ಚಿತ್ರದ ಬಗ್ಗೆ ಮಾತನಾಡಿರುವ ನಾಯಕಿ ಸಂಪದಾ, ”ಎಕ್ಕ’ ಚಿತ್ರದ ಆರಂಭ ಬಹಳ ಮಂಗಳಕರವಾಗಿ ನೆರವೇರಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಚಿತ್ರೀಕರಣವನ್ನು ನಾನು ಕಾತುರವಾಗಿ ಎದುರು ನೋಡುತ್ತಿದೇನೆ’ ಎಂದು ತಿಳಿಸಿದರು.

‘ಎಕ್ಕ’ ಚಿತ್ರದಲ್ಲಿ ಯುವ ರಾಜಕುಮಾರ್‌, ಸಂಪದಾ, ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ, ರಾಹುಲ್‌ ದೇವ್‌ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಎಕ್ಕ’ ಚಿತ್ರಕ್ಕೆ ರೋಹಿತ್‌ ಪದಕಿ ಮತ್ತು ವಿಕ್ರಮ್‌ ಹತ್ವಾರ್‌ ಚಿತ್ರಕಥೆ ರಚಿಸಿದ್ದು, ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ‘ಎಕ್ಕ’ ಚಿತ್ರದ ಹಾಡುಗಳಿಗೆ  ವಿ. ನಾಗೇಂದ್ರ ಪ್ರಸಾದ್‌, ನಾಗಾರ್ಜುನ ಶರ್ಮ, ನಟರಾಕ್ಷಸ ಡಾಲಿ ಧನಂಜಯ, ರೋಹಿತ್‌ ಪದಕಿ ಸಾಹಿತ್ಯವನ್ನು ರಚಿಸಲಿದ್ದಾರೆ.

ಜೂನ್ 6, 2025ಕ್ಕೆ ‘ಎಕ್ಕ’ ಚಿತ್ರ ತೆರೆಗೆ

‘ಎಕ್ಕ’ ಚಿತ್ರಕ್ಕೆ ಸತ್ಯ ಹೆಗಡೆ ಮುಖ್ಯ ಛಾಯಾಗ್ರಹಕರಾಗಿದ್ದು, ದೀಪು ಎಸ್‌. ಕುಮಾರ್‌ ಸಂಕಲನಕಾರರಾಗಲಿದ್ದಾರೆ ಮತ್ತು ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸವನ್ನು ಮಾಡಲಿದ್ದಾರೆ. ಚಿತ್ರದ ಫೈಟ್ಸ್‌ ಗಳನ್ನು ಅರ್ಜುನ್‌ ರಾಜ್‌ ಮತ್ತು ಚೇತನ್‌ ಡಿʼಸೋಜಾ ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ‘ಪಿ.ಆರ್.ಕೆ ಪ್ರೊಡಕ್ಷನ್ಸ್‌’ ಲಾಂಛನದಡಿಯಲ್ಲಿ, ಜಯಣ್ಣ ಮತ್ತು ಭೋಗೇಂದ್ರ ‘ಜಯಣ್ಣ ಫಿಲಂಸ್‌’ ಲಾಂಛನದಡಿಯಲ್ಲಿ‌ ಹಾಗು ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ‘ಕೆ.ಆರ್.ಜಿ.ಸ್ಟುಡಿಯೋಸ್‌’ ಲಾಂಛನದಡಿಯಲ್ಲಿ ನಿರ್ಮಿಸಲ್ಲಿದ್ದಾರೆ. ‘ಎಕ್ಕ’ ಚಿತ್ರವು ಜೂನ್ 6 , 2025 ರಂದು ತೆರೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ.

 

Related Posts

error: Content is protected !!