ಸೆಟ್ಟೇರಿತು ‘ಸೂರ್ಯ 45’ ಸಿನೆಮಾ

‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಬ್ಯಾನರ್ ನಲ್ಲಿ ‘ಸೂರ್ಯ 45’ ಚಿತ್ರ
ಸೂರ್ಯ ಹೊಸ ಸಿನೆಮಾಕ್ಕೆ ಅದ್ಧೂರಿ ಚಾಲನೆ…
ಸಸ್ಪೆನ್ಸ್ ಕಂ ಆಕ್ಷನ್-ಥ್ರಿಲ್ಲರ್ ಚಿತ್ರಕ್ಕೆ ತಯಾರಿ
ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆ ತಮಿಳಿನ ಖ್ಯಾತ ನಟ ಸೂರ್ಯ ಅವರ ಅಭಿನಯದ 45ನೇ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈಗ ಈ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಇತ್ತೀಚೆಗೆ ಸೂರ್ಯ ಅಭಿನಯದ 45ನೇ ಸಿನೆಮಾದ ಮುಹೂರ್ತ ಸಮಾರಂಭ ತಮಿಳುನಾಡಿನ ಅನೈಮಲೈನಲ್ಲಿರುವ ಅರುಲ್ಮಿಗು ಮಾಸಾನಿ ಅಮ್ಮನ್ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೇರವೇರಿದೆ. ಈ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಕೊಯಮತ್ತೂರಿನಲ್ಲಿ ನಡೆಯಲಿದ್ದು, ಮೊದಲ ಹಂತದ ಚಿತ್ರೀಕರಣದಲ್ಲಿ ಸೂರ್ಯ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಮೊದಲ ಬಾರಿಗೆ ಸೂರ್ಯ ಚಿತ್ರಕ್ಕೆ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಬಂಡವಾಳ
‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳ ಪೈಕಿ ಒಂದಾಗಿದೆ. ಈಗಾಗಲೇ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಯಡಿ ‘ಧೀರನ್’, ‘ಅರುವಿ’, ‘ಎನ್‌ಜಿಕೆ’, ‘ರಾಕ್ಷಸಿ’, ‘ಖೈದಿ’, ‘ಭೋಲಾ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ನಿರ್ಮಾಣಗೊಂಡಿವೆ. ಇದೀಗ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಮೊದಲ ಬಾರಿಗೆ ತಮಿಳಿನ ಸೂಪರ್ ಸ್ಟಾರ್ ಸೂರ್ಯ ಜೊತೆ ಈ ಹೊಸ ಸಿನೆಮಾದ ನಿರ್ಮಾಣಕ್ಕೆ ಕೈ ಜೋಡಿಸಿದೆ. ಬಿಗ್ ಬಜೆಟ್‌ನಲ್ಲಿ ಈ ಸಿನೆಮಾ ಮೂಡಿಬರುತ್ತಿದ್ದು, ಈ ಸಿನೆಮಾದ ಹೆಸರು ಇನ್ನಷ್ಟೇ ಘೋಷಣೆ ಆಗಬೇಕಿದೆ.
ಸೂರ್ಯ 45ನೇ ಚಿತ್ರಕ್ಕೆ ಆರ್. ಜೆ ಬಾಲಾಜಿ ಆಕ್ಷನ್-ಕಟ್
‘ಮೂಕುತಿ ಅಮ್ಮನ್’ ಮತ್ತು ‘ವೀಟ್ಲ ವಿಶೇಷಂ’ನಂತಹ ಸಾಮಾಜಿಕ ಜವಾಬ್ದಾರಿಯುತ ಚಿತ್ರಗಳನ್ನು ನಿರ್ದೇಶಿಸಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಆರ್. ಜೆ ಬಾಲಾಜಿ. ತಮಿಳಿನ ಹೊಸ ತಲೆಮಾರಿನ ಭರವಸೆಯ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಆರ್. ಜೆ ಬಾಲಾಜಿ ಅವರೀಗ ಸೂರ್ಯ ಅವರ 45ನೇ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಇನ್ನು ಆರ್. ಜೆ ಬಾಲಾಜಿ ಮತ್ತು ಸೂರ್ಯ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನೆಮಾಕ್ಕೆ ‘ಆಸ್ಕರ್’ ವಿಜೇತ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸೂರ್ಯ ಹಾಗೂ ರೆಹಮಾನ್ ‘ಸಿಲ್ಲುನು ಒರು ಕಾದಲ್’, ‘ಆಯುಧ ಎಳುತ್ತು’ ಮತ್ತು ’24’ ನಂತಹ ಕ್ಲಾಸಿಕ್ ಚಿತ್ರಗಳಲ್ಲಿ ಸೂರ್ಯ ಮತ್ತು ಎ. ಆರ್. ರೆಹಮಾನ್ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಬಳಿಕ ಮತ್ತೊಮ್ಮೆ ಇವರಿಬ್ಬರ ಕಾಂಬೋ ತೆರೆಗೆ ಬರುತ್ತಿದೆ. ಆರ್. ಜೆ ಬಾಲಾಜಿ ಮತ್ತು ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಪ್ರತಿಷ್ಠಿತ ಪ್ರಾಜೆಕ್ಟ್ ಗೆ ಸೂರ್ಯ ಜೊತೆಗೆ ಹಲವು ದೊಡ್ಡ ತಾರಾಬಳಗ ಸೇರ್ಪಡೆಯಾಗಲಿದೆ. ಚಿತ್ರತಂಡ 2025 ರ ದ್ವಿತೀಯಾರ್ಧದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.