ಕಲಾತ್ಮಕ ಕನ್ನಡಿಯೊಳಗೆ ʼಗುಂಮ್ಟಿʼ ಎಂಬ ಭಾವನಾತ್ಮಕ ಚೌಕಟ್ಟು!

ಜನಪದ ಕಲೆ ‘ಗುಂಮ್ಟಿ’ಯ ಹಿಂದೊಂದು ಮನಮುಟ್ಟುವ ಕಥೆ
ಚಿತ್ರ: ಗುಂಮ್ಟಿ
ನಿರ್ಮಾಣ: ವಿಕಾಸ್ ಎಸ್. ಶೆಟ್ಟಿ
ನಿರ್ದೇಶನ: ಸಂದೇಶ ಶೆಟ್ಟಿ ಆಜ್ರಿ
ತಾರಾಗಣ: ಸಂದೇಶ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು.
ರೇಟಿಂಗ್: 5/4
———————————-
ಕೆಲವೊಂದು ಸಿನೆಮಾಗಳು ತನ್ನ ಬಜೆಟ್, ಕಾಸ್ಟಿಂಗ್ ಮೂಲಕ ಸಿನಿಪ್ರಿಯರ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತನ್ನ ಟೈಟಲ್, ಮೇಕಿಂಗ್ ಮೂಲಕ ಗಮನ ಸೆಳೆಯುತ್ತವೆ. ಇನ್ನೂ ಕೆಲವು ಸಿನೆಮಾಗಳು ಇದ್ಯಾವುದೂ ಇಲ್ಲದೇ ಕೇವಲ ತನ್ನ ಕಂಟೆಂಟ್ ಮತ್ತು ಸಬ್ಜೆಕ್ಟ್ ಮೂಲಕವೇ ನೋಡುಗರ ಮನಗೆಲ್ಲಲು ಯಶಸ್ವಿಯಾಗಿ ಬಿಡುತ್ತವೆ. ಥಿಯೇಟರಿನಲ್ಲಿ ಸದ್ದು, ಗದ್ದಲವಿಲ್ಲದೆ ನೋಡುಗರನ್ನು ನಿಧಾನವಾಗಿ ತನ್ನತ್ತ ಆವರಿಸಿಕೊಂಡುಬಿಡುತ್ತವೆ. ಅಂಥದ್ದೇ ಒಂದು ಸಿನೆಮಾ ‘ಗುಂಮ್ಟಿ’.
ಇದೇ ಡಿ. 04 (ಬುಧವಾರ) ರಂದು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತೆರೆಕಂಡ ‘ಗುಂಮ್ಟಿ’ ಸಿನೆಮಾ ಡಿ. 06 (ಶುಕ್ರವಾರ) ರಂದು ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಬಿಡುಗಡೆಯಾಗಿದೆ. ತೆಲುಗಿನ ಬಹುನಿರೀಕ್ಷಿತ ‘ಪುಷ್ಪ-2’ ಸಿನೆಮಾದ ಎದುರಿಗೆ ಬಿಡುಗಡೆಯಾಗಿ ತೆರೆಗೆ ಬಂದ ‘ಗುಂಮ್ಟಿ’ ಗೆ ನಿರೀಕ್ಷಿತ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಲಭ್ಯವಾಗದಿದ್ದರೂ, ಬಿಡುಗಡೆಯಾದ ಬಹುತೇಕ ಎಲ್ಲ ಕಡೆಗಳಲ್ಲಿ ಪ್ರೇಕ್ಷಕರ ಮನ-ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಏನು ಈ ‘ಗುಂಮ್ಟಿ’..?
ಸಿನೆಮಾದ ಬಿಡುಗಡೆಗೂ ಮೊದಲೇ ಚಿತ್ರತಂಡ ಹೇಳಿಕೊಂಡಿರುವಂತೆ ‘ಗುಂಮ್ಟಿ’ ಒಂದು ಅಪ್ಪಟ ದೇಸಿ ಶೈಲಿಯ ಸಿನೆಮಾ. ‘ಗುಂಮ್ಟಿ’ ಎಂಬುದು ಒಂದು ಜಾನಪದ ಕಲೆ ಅಥವಾ ವಾದ್ಯ ಪ್ರಕಾರ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಹರಿದು-ಹಂಚಿ ಹೋಗಿರುವ ಕುಡುಬಿ ಸಮುದಾಯ, ಅವರ ಜೀವನ ಮತ್ತು ಆಚರಣೆಗಳನ್ನು ‘ಗುಂಮ್ಟಿ’ ಸಿನೆಮಾದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಸಾಮಾಜಿಕ ವಿಷಯ, ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಯೊಂದನ್ನು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರುವ ಚಿತ್ರತಂಡದ ಪ್ರಯತ್ನ ಪ್ರಶಂಸನಾರ್ಹ. ನಿರ್ದೇಶಕ ಸಂದೇಶ್ ಶೆಟ್ಟಿ ಇಂಥದ್ದೊಂದು ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಬಹುದು.
‘ಗುಂಮ್ಟಿ’ಯ ಕಥಾಹಂದರದಲ್ಲಿ ಏನಿದೆ?
ಆತ ಕರ್ನಾಟಕದ ದಕ್ಷಿಣ ಕರಾವಳಿಯ ಕುಡುಬಿ ಸಮುದಾಯದ ಯುವಕ ಕಾಶಿ. ಕುಡುಬಿ ಸಮುದಾಯದಕ್ಕೆ ಹಿರಿಯರಾಗಿರುವ ಕಾಶಿಯ ತಂದೆಗೆ, ತಮ್ಮ ಸಮುದಾಯದಲ್ಲಿ ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ‘ಗುಂಮ್ಟಿ’ ಎಂಬ ಸಾಂಸ್ಕೃತಿಕ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂಬ ಉತ್ಕಟ ಬಯಕೆ. ಆದರೆ ತಂದೆಯ ಆಶಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಕಾಶಿ, ತನ್ನ ಸಮುದಾಯದ ‘ಗುಂಮ್ಟಿ’ ಆಚರಣೆಯನ್ನು ಹೀಗಳೆಯುತ್ತ, ಕೆಲಸವನ್ನು ಅರಸಿಕೊಂಡು ಸೋಲಾಪುರದ ಹೋಟೆಲ್ ನತ್ತ ಮುಖ ಮಾಡುತ್ತಾನೆ. ಹೀಗೆ ಕಾಲ ಕಳೆದು ನಾಲ್ಕೈದು ವರ್ಷಗಳ ಬಳಿಕ, ನಡೆಯುವ ಘಟನೆಯೊಂದು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕಾಶಿಯನ್ನು ಮತ್ತೆ ತನ್ನ ತವರೂರಿನತ್ತ ತೆರಳುವಂತೆ ಮಾಡುತ್ತದೆ.
ಹೀಗೆ ಸೋಲಾಪುರದಿಂದ ತನ್ನ ಹುಟ್ಟೂರಿಗೆ ಮರಳುವ ಕಾಶಿ ನಿಂತು ಹೋಗಿದ್ದ ಕುಡುಬಿ ಸಮುದಾಯದ ‘ಗುಂಮ್ಟಿ’ ಆಚರಣೆಯನ್ನು ಮತ್ತೆ ಮುಂದಕ್ಕೆ ಕೊಂಡೊಯ್ಯುವ ಸಾಹಸಕ್ಕೆ ಕೈ ಹಾಕುತ್ತಾನೆ. ಹಾಗಾದರೆ, ‘ಗುಂಮ್ಟಿ’ ಆಚರಣೆಯನ್ನು ಹೀಗಳೆದು ಹೋಗಿದ್ದ ಕಾಶಿಗೆ ಅದನ್ನು ಮತ್ತೆ ಮುಂದುವರೆಸಲು ಪ್ರೇರಣೆ ಬಂದಿದ್ದು ಹೇಗೆ? ‘ಗುಂಮ್ಟಿ’ ಆಚರಣೆಯನ್ನು ಕಾಶಿ ಮುಂದುವರೆಸಿಕೊಂಡು ಹೋಗುತ್ತಾನಾ? ತನ್ನ ಪ್ರಯತ್ನದಲ್ಲಿ ಕಾಶಿ ಯಶಸ್ವಿಯಾಗುತ್ತಾನಾ? ಕುಡುಬಿ ಸಮುದಾಯದ ಸಾಂಸ್ಕೃತಿಕ ಕಲೆಯನ್ನು ಉಳಿಸಿಕೊಳ್ಳಲು ಕಾಶಿಯ ಹೋರಾಟ ಹೇಗಿರುತ್ತದೆ ಎಂಬುದೇ ಡಿಸೆಂಬರ್ ಮೊದಲ ವಾರ ತೆರೆಗೆ ಬಂದಿರುವ ‘ಗುಂಮ್ಟಿ’ ಸಿನೆಮಾದ ಕಥಾಹಂದರ. ಅದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ, ನೀವು ಒಮ್ಮೆ ‘ಗುಂಮ್ಟಿ’ ನೋಡಲು ಥಿಯೇಟರಿನತ್ತ ಮುಖ ಮಾಡಬಹುದು.
‘ಗುಂಮ್ಟಿ’ಯಲ್ಲಿ ಕಲಾವಿದರು, ತಂತ್ರಜ್ಞರ ಕೆಲಸ ಹೇಗಿದೆ?
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಜೊತೆಗೆ ‘ಗುಂಮ್ಟಿ’ ಸಿನೆಮಾದಲ್ಲಿ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಕಾಶಿ ಎಂಬ ಕುಡುಬಿ ಸಮುದಾಯದ ಹುಡುಗನಾಗಿ ಸಂದೇಶ್ ಶೆಟ್ಟಿ ಉತ್ತಮ ಅಭಿನಯ ನೀಡಿದ್ದಾರೆ. ‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ‘ಗುಂಮ್ಟಿ’ ಸಿನೆಮಾದ ಬಹುತೇಕ ತಾಂತ್ರಿಕ ಕೆಲಸಗಳು ಕೂಡ ತೆರೆಮೇಲೆ ಗಮನ ಸೆಳೆಯುತ್ತವೆ. ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸಿದ್ದಾರೆ.
ಕರ್ನಾಟಕದ ಕರಾವಳಿ ಪ್ರದೇಶವಾದ ಕುಂದಾಪುರದ ಸುತ್ತಮುತ್ತ ಕಂಡುಬರುವ ಜಾನಪದ ಕಲೆಯೊಂದನ್ನು ಈ ಸಿನೆಮಾದಲ್ಲಿ ತೆರೆಗೆ ತರುವ ಪ್ರಯತ್ನ ಈ ಸಿನೆಮಾದಲ್ಲಿ ಆಗಿದೆ. ಚಿತ್ರದ ಕಥೆ, ಪಾತ್ರಗಳು, ಸನ್ನಿವೇಶಗಳು ನೈಜತೆಗೆ ಹತ್ತಿರವಾಗಿದ್ದು, ಕುಂದಾಪುರ ಭಾಗದ ಕನ್ನಡವನ್ನು ಪರಿಣಾಮಕಾರಿಯಾಗಿ ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಅನಾವರಣವಾಗಿದೆ. ಅಪ್ಟಟ ಕನ್ನಡ ಸೊಗಡಿನ ಸಿನೆಮಾವನ್ನು ನೋಡಲು ಬಯಸುವವರು ಖಂಡಿತವಾಗಿಯೂ ಒಮ್ಮೆ‘ಗುಂಮ್ಟಿ’ ಸಿನಿಮಾವನ್ನು ನೋಡಿ ಬರಬಹುದು.
- ಜಿ. ಎಸ್. ಕಾರ್ತಿಕ ಸುಧನ್,