Pop Corner

ಶ್ರೀ ಮುರಳಿ ಕೈಯಲ್ಲಿ ‘ಪುಣ್ಯಪಾದ’ ಪೋಸ್ಟರ್

‘ಈ ಪಾದ ಪುಣ್ಯಪಾದ’ ಚಿತ್ರಕ್ಕೆ ‘ಬಘೀರ’ನ ಬೆಂಬಲ

ಆನೆಕಾಲು ರೋಗಿಯ ಸುತ್ತ ಒಂದು ಚಿತ್ರ…

ಸಿದ್ದು ಪೂರ್ಣಚಂದ್ರ ಹೊಸಚಿತ್ರ ಬಿಡುಗಡೆಗೆ ಸಿದ್ದ

ಈಗಾಗಲೇ ಕನ್ನಡದಲ್ಲಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ‘ಬ್ರಹ್ಮ ಕಮಲ’ ಮತ್ತು ‘ತಾರಿಣಿ’ ಚಿತ್ರಗಳನ್ನು ನಿರ್ದೇಶಿಸಿ ಸದಭಿರುಚಿ ಚಿತ್ರಗಳ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಮ್ಮ ಪ್ರತೀ ಚಿತ್ರದಲ್ಲೂ ಒಂದೊಂದು ವಿಭಿನ್ನ ವಿಷಯಗಳು ಮತ್ತು ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ಚಿತ್ರಗಳನ್ನು ಮಾಡುತ್ತ ಬಂದಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಈ ಬಾರಿ ತಮ್ಮಹೊಸಚಿತ್ರ ‘ಈ ಪಾದ ಪುಣ್ಯಪಾದ’ ಚಿತ್ರದಲ್ಲಿ ಆನೆಕಾಲು ರೋಗಿಯ ಕಥೆಯನ್ನು ತೆರೆಮೇಲೆ ಹೇಳುವುದಕ್ಕೆ ಹೊರಟಿದ್ದಾರೆ.

‘ಪುಣ್ಯಪಾದ’ಕ್ಕೆ ಶ್ರೀಮುರಳಿ ಶುಭ ಹಾರೈಕೆ

ಈಗಾಗಲೇ ಸದ್ದಿಲ್ಲದೆ ‘ಈ ಪಾದ ಪುಣ್ಯಪಾದ’ ಸಿನೆಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತವರ ತಂಡ ಇತ್ತೀಚೆಗೆ ‘ಈ ಪಾದ ಪುಣ್ಯಪಾದ’ ಸಿನೆಮಾದ ಪೋಸ್ಟರ್‌ ಅನ್ನು ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಕೈಯಿಂದ ಬಿಡುಗಡೆ ಮಾಡಿಸಿದೆ. ‘ಈ ಪಾದ ಪುಣ್ಯಪಾದ’ ಸಿನೆಮಾದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದ ನಟ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ನಮ್ಮ ನಡುವಿನ ಮನಮುಟ್ಟುವ ಕಥೆ

‘ಈ ಪಾದ ಪುಣ್ಯಪಾದ’ ಚಿತ್ರದ ಕುರಿತು ಮಾತನಾಡುವ ಸಿದ್ದು ಪೂರ್ಣಚಂದ್ರ, ‘ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಈ ಚಿತ್ರ ಹೊಸ ಆಯಾಮದಲ್ಲಿ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಖಾಯಿಲೆಗಳು ಸಂಭವಿಸಿದಾಗ ಆ ರೋಗಕ್ಕಿಂತ ಮಾನಸಿಕವಾಗಿಯೇ ಯಾತನೆ ಪಡುವುದು ಜಾಸ್ತಿ ಆಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂಬುದೇ ಈ ಚಿತ್ರದ ಕಥೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ನೀಡುತ್ತಾರೆ. ಅಂದಹಾಗೆ ನಿರ್ದೇಶಕ ಸಿದ್ದು ಪೂರ್ಣಚಂದ್ರ ಹಲವು ವರ್ಷಗಳಿಂದ ಅಧ್ಯಯನ ಮಾಡಿ ಈ ಕಥೆಯನ್ನು  ಚಿತ್ರಕಥೆ ಮಾಡಿದ್ದಾರಂತೆ. ‘ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದು ಈ ಚಿತ್ರದ ಆಶಯ’ ಎನ್ನುವುದು ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಮಾತು.

ಸೆನ್ಸಾರ್‌ನಲ್ಲಿ ‘ಈ ಪಾದ ಪುಣ್ಯಪಾದ’ ಪಾಸ್‌…

ಕಳೆದ 18 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನೆಮಾಗಳ ಆಟೋ ಪ್ರಚಾರ ಮಾಡುತ್ತಾ ಬಂದಿರುವ ನಾಗರಾಜ್‌ ಉರೂಫ್‌ ಆಟೋ ನಾಗರಾಜ್, ಮೊದಲ ಬಾರಿಗೆ ಈ ಸಿನೆಮಾದಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನಂತ ಆರ್ಯನ್ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ‘ಈ ಪಾದ ಪುಣ್ಯಪಾದ’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಪಡೆದುಕೊಂಡಿದ್ದು, ವಿವಿಧ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸ್ಪರ್ಧಿಸುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ‘ಈ ಪಾದ ಪುಣ್ಯಪಾದ’ ಸಿನೆಮಾವನ್ನು ಥಿಯೇಟರಿಗೆ ತರುವ ಯೋಚನೆ ಹಾಕಿಕೊಂಡಿದೆ ಚಿತ್ರತಂಡ.

Related Posts

error: Content is protected !!