Street Beat

‘ಗೋವಿಂದಾಯ ನಮಃ’ ಆಯ್ತು.., ಈಗ ‘ವೆಂಕಟೇಶಾಯ ನಮಃ’!

ಹರೀಶ್‌ ರಾಜ್‌ ಹೊಸ ಸಿನೆಮಾ ‘ವೆಂಕಟೇಶಾಯ ನಮಃ’ 

ಸದ್ದಿಲ್ಲದೆ ಮತ್ತೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರಕ್ಕೆ ತಯಾರಿ…

ಸರಳವಾಗಿ ‘ವೆಂಕಟೇಶಾಯ ನಮಃ’ ಚಿತ್ರಕ್ಕೆ ಮುಹೂರ್ತ

ಕೆಲ ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ‘ಗೋವಿಂದಾಯ ನಮಃ’ ಎಂಬ ಸಿನೆಮಾ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದೇ ಥರದ ದೇವರ ನಾಮವನ್ನೇ ಟೈಟಲ್ ಆಗಿಟ್ಟುಕೊಂಡು ‘ವೆಂಕಟೇಶಾಯ ನಮಃ’ ಎಂಬ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಈ ಸಿನೆಮಾದ ಹೆಸರು ‘ವೆಂಕಟೇಶಾಯ ನಮಃ’ ಅಂತಿದ್ದರೂ, ಇದು ಯಾವುದೇ ಪೌರಾಣಿಕ ಸಿನೆಮಾವಾಗಲಿ, ಅಥವಾ ಭಕ್ತಿ ಪ್ರಧಾನ ಸಿನೆಮಾವಾಗಲೀ ಅಲ್ಲ. ಸಿನೆಮಾದ ಕಥಾಹಂದರಕ್ಕೆ ಸೂಕ್ತವಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನೆಮಾಕ್ಕೆ ‘ವೆಂಕಟೇಶಾಯ ನಮಃ’ ಎಂದು ಟೈಟಲ್‌ ಇಟ್ಟುಕೊಂಡಿದೆ.

ಇನ್ನು ಸ್ಯಾಂಡಲ್‌ವುಡ್‌ನಲ್ಲಿ ತನ್ನನ್ನು ‘ಕಲಾಕಾರ್‌’ ಎಂದೇ ಕರೆದುಕೊಳ್ಳುವ ನಟ ಹರೀಶ್ ರಾಜ್ ಈ ಹಿಂದೆ ‘ಪ್ರೇತ’ ಎಂಬ ಹಾರರ್‌ ಸಿನೆಮಾವನ್ನು ನಿರ್ದೇಶಿಸಿ, ಅದರಲ್ಲಿ ನಾಯಕನಾಗಿ ಅಭಿನಯಿಸಿದ್ದು ಅನೇಕರಿಗೆ ಗೊತ್ತಿರಬಹುದು. ಆ ಸಿನೆಮಾದ ಬಳಿಕ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದ ಹರೀಶ್‌ ರಾಜ್‌ ‘ವೆಂಕಟೇಶಾಯ ನಮಃ’ ಸಿನೆಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವುದರ ಜೊತೆಗೆ, ಸಿನೆಮಾಕ್ಕೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ‘ಶ್ರೀಲಕ್ಷ್ಮೀ ಜನಾರ್ಧನ ಮೂವೀಸ್‌’ ಬ್ಯಾನರಿನಲ್ಲಿ ‘ವೆಂಕಟೇಶಾಯ ನಮಃ’ ಸಿನೆಮಾ ನಿರ್ಮಾಣವಾಗುತ್ತಿದೆ.

‘ವೆಂಕಟೇಶಾಯ ನಮಃ’ ಚಿತ್ರಕ್ಕೆ ನೆರವೇರಿದ ಮಹೂರ್ತ

ಇತ್ತೀಚೆಗೆ ಹರೀಶ್‌ ರಾಜ್‌ ನಾಯಕನಾಗಿ ಅಭಿನಯಿಸಿ ಮತ್ತು ನಿರ್ದೇಶಿಸುತ್ತಿರುವ ‘ವೆಂಕಟೇಶಾಯ ನಮಃ’ ಸಿನೆಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಆನಂದ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ‘ವೆಂಕಟೇಶಾಯ ನಮಃ’ ಚಿತ್ರಕ್ಕೆ ಜನಾರ್ದನ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಆದಂತಹ ಸುಧೀರ್ಘ ಅನುಭವವನ್ನು ಹೊಂದಿದಂತಹ ಹರೀಶ್ ರಾಜ್ ನಿರಂತರವಾಗಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ನಿರ್ದೇಶನವನ್ನು ಸಹ ಮಾಡುತ್ತಿರುವ ಎಲ್ಲರಿಗೂ ಗೊತ್ತಿದೆ. ಇನ್ನು ತಮ್ಮ ಹೊಸ ಸಿನೆಮಾದ ಬಗ್ಗೆ ಮಾತನಾಡುವ ಹರೀಶ್‌ ರಾಜ್‌, ”ವೆಂಕಟೇಶಾಯ ನಮಃ’ ಚಿತ್ರವು ರೋಮ್ಯಾಂಟಿಕ್ ಕಾಮಿಡಿ ಅಂಶವನ್ನು ಹೊಂದಿದ್ದು ಇದರಲ್ಲಿ ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶವೂ ಇರುತ್ತದೆ’ ಎಂಬ ವಿವರಣೆ ನೀಡುತ್ತಾರೆ.

ಒಂದೇ ಹಂತದಲ್ಲಿ ಶೂಟಿಂಗ್‌ ಪ್ಲಾನ್‌!

‘ವೆಂಕಟೇಶಾಯ ನಮಃ’ ಸಿನೆಮಾದ ಚಿತ್ರೀಕರಣವನ್ನು ಸುಮಾರು 45 ದಿನಗಳ ಕಾಲ ಒಂದೇ ಷೆಡ್ಯೂಲ್ ನಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನುಚಿತ್ರತಂಡ ಹಾಕಿಕೊಂಡಿದೆ. ‘ವೆಂಕಟೇಶಾಯ ನಮಃ’  ಚಿತ್ರದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಉಮಾಶ್ರೀ, ತಬಲಾ ನಾಣಿ ಯಂತಹ ಹಿರಿಯ ಕಲಾವಿದರ ಜೊತೆಗೆ ಬಹಳಷ್ಟು ಹೊಸ ಕಲಾವಿದರು ಇರುತ್ತಾರೆ. ‘ವೆಂಕಟೇಶಾಯ ನಮಃ’ ಸಿನೆಮಾಕ್ಕೆ ಭರ್ಜರಿ ಚೇತನ್, ಪ್ರಮೋದ ಮರವಂತೆ ಸಾಹಿತ್ಯವಿರಲಿದ್ದು, ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜಿಸುತ್ತಿದ್ದಾರೆ. ‘ವೆಂಕಟೇಶಾಯ ನಮಃ’ ಸಿನೆಮಾಕ್ಕೆ ಶಿವಶಂಕರ್‌ ಛಾಯಾಗ್ರಹಣವಿದೆ. ಉಳಿದಂತೆ ಮುಂದಿನ ದಿನಗಳಲ್ಲಿ ‘ವೆಂಕಟೇಶಾಯ ನಮಃ’ ಸಿನೆಮಾದ ಮತ್ತಷ್ಟು ಅಪ್ಡೇಟ್ ಗಳನ್ನ ಹರೀಶ್ ರಾಜ್ ನೀಡಲಿದ್ದಾರಂತೆ.

Related Posts

error: Content is protected !!