‘ಕಾಲೋನಿ’ ಹುಡ್ಗರ ಹೊಸ ಕಥೆ ಶುರು…

ರಾಜೀವ್ ಹನು ನಟನೆಯ ‘ಬೇಗೂರು ಕಾಲೋನಿ’ ಟೀಸರ್ ರಿಲೀಸ್
‘ಕಾಲೋನಿ’ ಹುಡುಗರ ಬೆನ್ನುತಟ್ಟಿದ ತರುಣ್ ಸುಧೀರ್ – ಸತೀಶ್ ರೆಡ್ಡಿ
ಬೆಂಗಳೂರು ಹುಟ್ಕೋ ಮುಂಚೆನೇ ‘ಬೇಗೂರು’ ಹುಟ್ಟಿತ್ತಂತೆ!
ಕನ್ನಡ ಕಿರುತೆರೆಯ ‘ಬಿಗ್‌ಬಾಸ್ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರಿಗೆ ಪರಿಚಯವಾಗಿ ಆ ನಂತರ ‘ಉಸಿರೇ ಉಸಿರೇʼ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟ ರಾಜೀವ್ ಹನು ಈ ಬಾರಿ ‘ಬೇಗೂರು ಕಾಲೋನಿ’ ಎಂಬ ಹೊಸ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಇತ್ತೀಚೆಗಷ್ಟೇ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ’ಬೇಗೂರು ಕಾಲೋನಿ’ ಸಿನೆಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ರಾಜೀವ್ ಹನುಗೆ ಬ್ರೇಕ್ ಸಿಗುವ ವಿಶ್ವಾಸದಲ್ಲಿ ತರುಣ್…
‘ಬೇಗೂರು ಕಾಲೋನಿ’ ಸಿನೆಮಾದ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ‘ಒಂದು ಸಿನೆಮಾಗೆ ಟೀಸರ್ ಆಮಂತ್ರಣ ಪತ್ರಿಕೆಯಂತೆ. ಆ ಸಿನೆಮಾದಲ್ಲಿ ಏನಿದೆ ಅನ್ನೋದನ್ನು ಟೀಸರ್ ಜನರಿಗೆ ತಲುಪಿಸುತ್ತದೆ. ಅಷ್ಟರಮಟ್ಟಿಗೆ ಟೀಸರ್ ಹಾಗೂ ಟ್ರೇಲರ್ ಸಿನೆಮಾಗೆ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಕಾಲೋನಿ ಟೀಸರ್ ಚೆನ್ನಾಗಿ ಕಟ್ ಮಾಡಲಾಗಿದೆ. ನಮ್ಮ ಮಣ್ಣಿನ ಕಥೆಗಳು ಅಂತೀವಲ್ಲ, ಅಂಥ ಕಥೆ ಈ ಸಿನೆಮಾದಲ್ಲಿದೆ. ನಾಯಕ ನಟ ರಾಜೀವ್ ಕೂಡ ಆ ತರ ಫೇಸ್ ಇರುವ ಹುಡ್ಗ. ಅವನಿಗೆ ಬೇಕಿರುವ ಬ್ರೇಕ್ ಬೇಗೂರು ಕಾಲೋನಿ ಸಿನೆಮಾ ಮೂಲಕ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದರು.
ಶಾಸಕ ಸತೀಶ್ ಶೆಡ್ಡಿ ಮಾತನಾಡಿ, ‘ಮಂಜು ನಿರ್ದೇಶನದಲ್ಲಿ ಅದ್ಭುತ ಸಿನೆಮಾ ಮೂಡಿಬಂದಿದೆ. ಅನೇಕ ಸಿನೆಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೆ ಈ ಚಿತ್ರ ನೋಡಿದಾಗ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ ಅನಿಸುತ್ತದೆ. ಈ ಸಿನೆಮಾದ ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
‘ಬೇಗೂರು ಕಾಲೋನಿ’ಯಲ್ಲಿ ನಮ್ಮೂರ ಕಥೆ
ನಟ ರಾಜೀವ್ ಮಾತನಾಡಿ, ‘ನಮ್ಮ ಸಿನೆಮಾಗೆ ಯಾವುದೇ ಪೂಜೆ ಮಾಡಿಲ್ಲ. ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಈ ರೀತಿ ಸಿನೆಮಾ ಮಾಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ಮಾಪಕರಿಗೆ ಒಳ್ಳೆದು ಆಗಬೇಕು. ಈ ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಆದರೆ ಸಿನೆಮಾ ನೋಡಿ ಹೊರಬಂದರೆ ಹೊಸಬರು ಅನಿಸುವುದಿಲ್ಲ. ಎಲ್ಲರೂ ಅದ್ಭುತ ಪಾತ್ರ ಮಾಡಿದ್ದಾರೆ. ಕಾಲೋನಿಯಲ್ಲಿ ಬೆಳೆಯುವ ಮಕ್ಕಳು ಅಲ್ಲೇ ಬೆಳೆಯುತ್ತಾರೆ. ಅಲ್ಲೇ ಸಾಯುತ್ತಾರೆ. ಆದರೆ ಅದರ ಎದುರು ಇರುವ ದೊಡ್ಡ ಜಾಗ ಕಮ್ಮಿಯಾಗುತ್ತಾ ಬರುತ್ತದೆ. ಎಲ್ಲಾ ಬೆಳೆಯುತ್ತಿದ್ದಾರೆ. ಆದರೆ ಕಾಲೋನಿ ಹಾಗೆಯೇ ಇರುತ್ತದೆ. ಅಲ್ಲಿ ಬೆಳೆಯುವ ಕಾಲೋನಿ ಹುಡ್ಗನಿಗೆ ಆಡಲು ಜಾಗ ಇರುವುದಿಲ್ಲ. ಇರುವ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ‘ಬೇಗೂರು ಕಾಲೋನಿ” ಎಂದು ‘ಬೇಗೂರು ಕಾಲೋನಿ’ ಸಿನೆಮಾದ ಕಥಾಹಂದರ ವಿವರಿಸಿದರು.
‘ಬೇಗೂರು ಕಾಲೋನಿ’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಏನಿದು ‘ಕಾಲೋನಿ’ ಹುಡ್ಗರ ವರಸೆ?
‘ಬೆಂಗಳೂರು ಹುಟ್ಟುವ ಮೊದಲೇ ಹುಟ್ಟಿದ್ದು ಬೇಗೂರು…’ ಎಂಬ ಡೈಲಾಗ್ ಮೂಲಕ ಶುರುವಾಗುವ ‘ಬೇಗೂರು ಕಾಲೋನಿ’ ಟೀಸರ್ ನಲ್ಲಿ ಆಕ್ಷನ್, ಎಮೋಷನ್, ಪ್ರೀತಿ, ನೋವು-ನಲಿವುಗಳನ್ನು ಬ್ಲೆಂಡ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ‘ಶ್ರೀಮಾ ಸಿನಿಮಾಸ್’ ಬ್ಯಾನರ್ ಅಡಿ ಎಂ. ಶ್ರೀನಿವಾಸ್ ಬಾಬು ‘ಬೇಗೂರು ಕಾಲೋನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ‘ಬೇಗೂರು ಕಾಲೋನಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ರಾಜೀವ್ ಹನು ‘ಬೇಗೂರು ಕಾಲೋನಿ’ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ನಿರ್ದೇಶಕ ಮಂಜು ಕೂಡ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ‘ಬೇಗೂರು ಕಾಲೋನಿ’ ಚಿತ್ರದಲ್ಲಿ
ಹೊಸವರ್ಷಕ್ಕೆ ‘ಬೇಗೂರು ಕಾಲೋನಿ’ ತೆರೆಗೆ ಬರುವ ಯೋಚನೆ!
ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ತೆಲುಗು ನಟ ಪೊಸಾನಿ ಕೃಷ್ಣ ಮುರಳಿ, ಬಲರಾಜ್‌ವಾಡಿ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ‘ಬೇಗೂರು ಕಾಲೋನಿ’ ಚಿತ್ರದಲ್ಲಿ ನಟಿಸಿದ್ದಾರೆ. ‘ಬೇಗೂರು ಕಾಲೋನಿ’ ಚಿತ್ರದ ಹಾಡುಗಳಿಗೆ ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಪ್ರಮೋದ್ ತಲ್ವಾರ್ ಸಂಕಲನವಿದೆ. ಭರ್ಜರಿ ಮೇಕಿಂಗ್ ಹಾಗೂ ಆಕ್ಷನ್ ಸನ್ನಿವೇಶ ‘ಬೇಗೂರು ಕಾಲೋನಿ’ ಚಿತ್ರದ ಟೀಸರಿನಲ್ಲಿದೆ. ಒಟ್ಟಾರೆ ಮಾಸ್ ಸಿನಿಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ‘ಬೇಗೂರು ಕಾಲೋನಿ’ ಸಿನೆಮಾವನ್ನು ಮುಂಬರುವ ಹೊಸವರ್ಷದ ಆರಂಭದಲ್ಲಿ ಜನವರಿ ವೇಳೆಗೆ ಕರ್ನಾಟಕದ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.