‘ನೋಡಿದವರು ಏನಂತಾರೆ’ ಅಂಥ ಕೇಳ್ತಿದ್ದಾರೆ ನವೀನ್ ಶಂಕರ್!

ನವೀನ್ ಶಂಕರ್ ಹೊಸಚಿತ್ರ ‘ನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ…
ಜ. 31ಕ್ಕೆ ನವೀನ್ ಶಂಕರ್ ಸಿನೆಮಾ ಬಿಡುಗಡೆ
ಮತ್ತೊಂದು ಹೊಸಥರದ ಇಂಟೆನ್ಸ್ ಪಾತ್ರದಲ್ಲಿ ನವೀನ್ ಶಂಕರ್ 
ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ.
‘ನೋಡಿದವರು ಏನಂತಾರೆ’ ಸಿನೆಮಾಕ್ಕೆ ಕುಲದೀಪ್ ಕಾರಿಯಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಸಿನೆಮಾ ಸದ್ಯ ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂಬರುವ 2025ರ ಜನವರಿ 31ಕ್ಕೆ ‘ನೋಡಿದವರು ಏನಂತಾರೆ’ ಸಿನೆಮಾವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.
ವಿಭಿನ್ನ ಪಾತ್ರದಲ್ಲಿ ನವೀನ್ ಮಿಂಚು
‘ನೋಡಿದವರು ಏನಂತಾರೆ’ ಸಿನೆಮಾದಲ್ಲಿ ಪ್ರತಿಭಾತ್ವಿತ ನಟ ನವೀನ್ ಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನೋಡಿದವರು ಏನಂತಾರೆ’ ಚಿತ್ರದಲ್ಲಿ ನಾಯಕ ನಟ ನವೀನ್ ಶಂಕರ್ ಅವರಿಗೆ ಅಪೂರ್ವಾ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ ‘ಹೊಯ್ಸಳ’, ‘ಕ್ಷೇತ್ರಪತಿ’ ಮತ್ತು ‘ಸಲಾರ್’ ಸಿನೆಮಾಗಳಲ್ಲಿ ರಗಡ್ ಹಾಗೂ ಇಂಟೆನ್ಸ್ ಪಾತ್ರಗಳ ಮೂಲಕ ಎಲ್ಲರ ಗಮನಸೆಳೆದಿದ್ದ ನವೀನ್ ಶಂಕರ್ ಅವರು ‘ನೋಡಿದವರು ಏನಂತಾರೆ’ ಸಿನೆಮಾದಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನೋಡಿದವರು ಏನಂತಾರೆ’ ನಿರ್ದೇಶಕ ಕುಲದೀಪ್ ಕಾರಿಯಪ್ಪ ಹೇಳುವಂತೆ, ‘ನವೀನ್ ಶಂಕರ್ ಅವರ ಪಾತ್ರ ನಮ್ಮೆಲ್ಲರ ಒಳಗಿರುವ ಒಬ್ಬ ಮನುಷ್ಯನ ಕಥೆ ಹಾಗು ಭಾವನೆಗಳನ್ನು ಹೇಳುತ್ತದೆ. ಜೀವನದಲ್ಲಿ ನಮ್ಮ ಅಸ್ತ್ವಿತ್ವದ ಬಗ್ಗೆಯೇ ನಮಗೆ ಕಾಡುವ ಪ್ರಶ್ನೆಗಳು, ಪ್ರೀತಿ, ಆತ್ಮಾವಲೋಕನ ಹಾಗೂ ಬಾಂಧವ್ಯಗಳ ಸುತ್ತ ಈ ಸಿನೆಮಾ ಸಾಗುತ್ತದೆ’ ಎಂಬ ವಿವರಣೆ ನೀಡುತ್ತಾರೆ.
ಕರ್ನಾಟಕದ ರಮಣೀಯ ತಾಣಗಳ ದೃಶ್ಯ
ಕರ್ನಾಟಕದ ಪ್ರೇಕ್ಷಣೀಯ ಹಾಗೂ ಯಾರೂ ಕಂಡಿರದ ಸುಂದರ ತಾಣಗಳಲ್ಲಿ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂಬುದು ಚಿತ್ರತಂಡ ಮಾತು. ‘ನೋಡಿದವರು ಏನಂತಾರೆ’ ಸಿನೆಮಾಕ್ಕೆ ಅಶ್ವಿನ್ ಕೆನೆಡಿ ಛಾಯಾಗ್ರಹಕರಾಗಿ ಆಕರ್ಷಕ ದೃಶ್ಯಗಳ ಮೂಲಕ ಕಥೆಯನ್ನು ಜೀವಂತವಾಗಿಸಿದ್ದಾರೆ. ಮಯೂರೇಶ್ ಅಧಿಕಾರಿ ‘ನೋಡಿದವರು ಏನಂತಾರೆ’ ಸಿನೆಮಾದ ಸುಂದರ ಹಾಡುಗಳಿಗೆ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದಾರೆ. ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ‘ನೋಡಿದವರು ಏನಂತಾರೆ’ ಸಿನೆಮಾಕ್ಕೆ ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಜೊತೆಯಾಗಿ ಸಂಭಾಷಣೆ ಬರೆದಿದ್ದಾರೆ.
ಹೊಸವರ್ಷಕ್ಕೆ ‘ನೋಡಿದವರು ಏನಂತಾರೆ’ ಅನ್ನೋದು ಗೊತ್ತಾಗಲಿದೆ!
ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ‘ನೋಡಿದವರು ಏನಂತಾರೆ’ ಸಿನೆಮಾದ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಇನ್ನೊಂದು ಹಾಡಿಗೆ ಲೈಲಾ ಪದ ಸಾಹಿತ್ಯ ರಚಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ‘ನೋಡಿದವರು ಏನಂತಾರೆ’ ಸಿನೆಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಒಟ್ಟಾರೆ ತನ್ನ ಟೈಟಲ್ ಮತ್ತು ಕಥಾಹಂದರದ ಮೂಲಕ ಒಂದಷ್ಟು ಗಮನ ಸೆಳೆಯುತ್ತಿರುವ ‘ನೋಡಿದವರು ಏನಂತಾರೆ’ ಸಿನೆಮಾ ಮುಂಬರುವ 2025ನೇ ಜನವರಿ 31 ರಂದು ಬಿಡುಗಡೆಯಾಗುತ್ತಿದ್ದು, ಸಿನೆಮಾವನ್ನು ಥಿಯೇಟರಿನಲ್ಲಿ ‘ನೋಡಿದವರು ಏನಂತಾರೆ’ ಅನ್ನೋದು ಹೊಸವರ್ಷದ ಆರಂಭದಲ್ಲೇ ಗೊತ್ತಾಗಲಿದೆ.