‘ಗೀತಾ ಪಿಕ್ಚರ್ಸ್’ನಲ್ಲಿ ಧೀರನ್ ರಾಮಕುಮಾರ್ ಹೊಸಚಿತ್ರ

‘ಗೀತಾ ಪಿಕ್ಚರ್ಸ್’ ಬ್ಯಾನರಿನ 4ನೇ ಸಿನೆಮಾ ಘೋಷಣೆ
ಧೀರನ್ ಹೊಸಚಿತ್ರಕ್ಕೆ ಗೀತಾ ಶಿವರಾಜಕುಮಾರ್ ಬಂಡವಾಳ
ಧೀರನ್ ಹೊಸಚಿತ್ರಕ್ಕೆ ಸಂದೀಪ್ ಸುಂಕದ್ ನಿರ್ದೇಶನ
ಇತ್ತೀಚೆಗಷ್ಟೇ ‘ಗೀತಾ ಪಿಕ್ಚರ್ಸ್’ ಬ್ಯಾನರಿನಲ್ಲಿ ಶ್ರೀಮತಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದ ‘ಭೈರತಿ ರಣಗಲ್’ ಸಿನೆಮಾ ಭರ್ಜರಿ ಯಶಸ್ಸುಕಂಡಿದ್ದು ನಿಮಗೆ ಗೊತ್ತಿರಬಹುದು. ‘ಭೈರತಿ ರಣಗಲ್’ ಸಿನೆಮಾದ ನಂತರ, ‘ಗೀತಾ ಪಿಕ್ಚರ್ಸ್’ ನವೆಂಬರ್ 14ರಂದು ‘A For Anand’ ಎಂಬ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಹೊಸ ಚಿತ್ರವನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ ಹಿರಿಯ ನಿರ್ಮಾಪಕಿ ದಿವಂಗತ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನದ ನಿಮಿತ್ತ ಈಗ ‘ಗೀತಾ ಪಿಕ್ಚರ್ಸ್’ ತಮ್ಮ ಸಂಸ್ಥೆಯ 4ನೇ ಚಿತ್ರವನ್ನು ಘೋಷಿಸಿದೆ.
ಇನ್ನು ಹೆಸರಿಡದ ಈ ಹೊಸ ಚಿತ್ರದಲ್ಲಿ ಧೀರನ್ ರಾಮಕುಮಾರ್ ನಾಯಕನಾಗಿ ನಟಿಸಲಿದ್ದಾರೆ. ಈ ಹಿಂದೆ ‘ಶಾಖಾಹಾರಿ’ ಚಿತ್ರವನ್ನು ನಿರ್ದೇಶಿಸಿ ಮೊದಲ ಸಿನೆಮಾದಲ್ಲೇ ಭರವಸೆ ಮೂಡಿಸಿದ್ದ ಯುವ ನಿರ್ದೇಶಕ ಸಂದೀಪ್ ಸುಂಕದ ಅವರ ನಿರ್ದೇಶನದಲ್ಲಿ ಈ ಹೊಸ ಸಿನೆಮಾ ಮೂಡಿಬರುತ್ತಿದೆ. ಈ ಹಿಂದೆ ‘ಗೀತಾ ಪಿಕ್ಚರ್ಸ್’ ಹೊಸ ಪ್ರತಿಭೆಗಳನ್ನು ಬೆಳೆಸಲು ಇಚ್ಛೆ ವ್ಯಕ್ತಪಡಿಸಿದ್ದು, ಈ ಸಿನೆಮಾದ ಮೂಲಕ ಶಿವಣ್ಣನ ಹೊರತಾದ ಬೇರೆ ನಾಯಕನನ್ನು ಕಾಸ್ಟ್ ಮಾಡುವ ಮೊದಲ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ಸಿನೆಮಾದ ಬಗ್ಗೆ ಡೈರೆಕ್ಟರ್ ಸಂದೀಪ್ ಸುಂಕದ ಏನಂತಾರೆ?
‘ಕಳೆದ ಕೆಲ ತಿಂಗಳುಗಳಿಂದ ಈ ಕಥೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಅವರಿಗೆ ಹೇಳಿದಾಗ, ಅವರಿಗೆ ತುಂಬಾ ಇಷ್ಟವಾಯಿತು. ಕೇವಲ ಕೆಲ ದಿನಗಳಲ್ಲೇ ಅವರು ಈ ಚಿತ್ರವನ್ನು ನಿರ್ಮಿಸಲು ಮುಂದಾದರು. ಇಂಥಾ ದೊಡ್ಡ ಬ್ಯಾನರ್ ಜೊತೆ ಎಷ್ಟೋ ಡೈರೆಕ್ಟರ್‌ಗಳಿಗೆ ಕೆಲಸ ಮಾಡುವ ಆಸೆಯಿರುತ್ತದೆ. ನನ್ನ ಎರಡನೇ ಸಿನೆಮಾಗೆ ಈ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಿದೆ’ ಎಂಬುದು ಈ ಹೊಸಚಿತ್ರದ ಬಗ್ಗೆ ನಿರ್ದೇಶಕ ಸಂದೀಪ್ ಸುಂಕದ ಮಾತು.
ಹೊಸ ಸಿನೆಮಾದ ಮೇಲೆ ಧೀರನ್ ನಿರೀಕ್ಷೆ
‘ನನ್ನ ಮೊದಲ ಸಿನೆಮಾದ ನಂತರ, ನನಗೆ ನನ್ನ ಪರ್ಫಾರ್ಮೆನ್ಸ್ ಆಧರಿಸಿಕೊಳ್ಳುವ ಚಿತ್ರ ಬೇಕೆಂಬ ಕನಸು ಇತ್ತು. ಹಲವಾರು ಆಫರ್‌ಗಳು ಬಂದರೂ, ನಾನು ಧೈರ್ಯವಾಗಿ ನಿರಾಕರಿಸಿ, ನನ್ನ ಮೇಲೆ ಕೆಲಸ ಮಾಡಲು ಸಮಯ ತೆಗೆದುಕೊಂಡೆ. ನನ್ನ ಎರಡನೇ ಸಿನೆಮಾದಲ್ಲಿ ನನ್ನ ಪಾತ್ರ ಕರ್ತೃತೆಯನ್ನು ತೋರಿಸುವ ಅವಕಾಶವಾಗಬೇಕು ಅನ್ನೋ ಆಸೆ ಇತ್ತು. ಸಂದೀಪ್ ಸರ್ ಕಥೆಯನ್ನು ಹೇಳಿದಾಗ, ತುಂಬಾ ಸಂತಸವಾಯ್ತು. ‘ಶಾಖಾಹಾರಿ’ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ OTT ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂಥಾ ತಂಡದ ಜೊತೆಗೆ ಕೆಲಸ ಮಾಡುವುದು ನನಗೆ ಸಂತೋಷ’ ಎಂದು ತಮ್ಮ ಹೊಸ ಸಿನೆಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಾರೆ ನಾಯಕ ನಟ ಧೀರನ್ ರಾಮಕುಮಾರ್.
ಸದ್ಯ ತಮ್ಮ ಸಂಸ್ಥೆಯ 4ನೇ ಚಿತ್ರವನ್ನು ಘೋಷಿಸಿರುವ ‘ಗೀತಾ ಪಿಕ್ಚರ್ಸ್’ ಈ ಸಿನೆಮಾದ ಇತರ ಕಲಾವಿದರು, ತಾರಾಗಣ, ಕಥಾಹಂದರದ ಬಗ್ತಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಅಂದುಕೊಂಡಂತೆ ನಡೆದರೆ, ಈ ಹೊಸ ಸಿನೆಮಾದ ಚಿತ್ರೀಕರಣ 2025ರ ಆರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.