ಪ್ರಸಿದ್ದ ‘ನೀಲವಂತಿ’ ಗ್ರಂಥಕ್ಕೆ ಚಿತ್ರರೂಪ

ಸಿನೆಮಾವಾಗುತ್ತಿದೆ ಕುತೂಹಲಭರಿತ ‘ನೀಲವಂತಿ’ ಗ್ರಂಥ
‘ನೀಲವಂತಿ’ ಸಿನೆಮಾದ ಟೈಟಲ್ ರಿಲೀಸ್ ಮಾಡಿದ ನಟ ಡಾರ್ಲಿಂಗ್ ಕೃಷ್ಣ
ತೆರೆಮೇಲೆ ನವ ಪ್ರತಿಭೆಗಳ ವಿಭಿನ್ನ ಪ್ರಯತ್ನ
ಅನೇಕರು ‘ನೀಲವಂತಿ’ ಎಂಬ ಗ್ರಂಥದ ಹೆಸರು ಕೇಳಿರಬಹುದು. ಮಾಂತ್ರಿಕ ವಿದ್ಯೆ, ಕುಂಡಲಿನಿ ವಿಷಯ ಸೇರಿದಂತೆ ಅನೇಕ ಕುತೂಹಲ ಸಂಗತಿಗಳನ್ನು ಒಳಗೊಂಡಿರುವ ಈ ಗ್ರಂಥದ ಬಗ್ಗೆ ಈಗಲೂ ಹತ್ತಾರು ಅಂತೆ-ಕಂತೆ ವಿಷಯಗಳು ಹರಿದಾಡುತ್ತಲೇ ಇರುತ್ತದೆ. ಈಗ ಇದೇ ‘ನೀಲವಂತಿ’ ಗ್ರಂಥ ಸಿನೆಮಾ ರೂಪದಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿದೆ. ಹೌದು, ‘ನೀಲವಂತಿ’ ಎಂಬ ಗ್ರಂಥ ಈಗ ಅದೇ ‘ನೀಲವಂತಿ’ ಎಂಬ ಹೆಸರಿನಲ್ಲೇ ಸಿನೆಮಾವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ‘ನೀಲವಂತಿ’ ಸಿನೆಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗೆ ‘ನೀಲವಂತಿ’ ಸಿನೆಮಾದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಹೊಸ ಪ್ರತಿಭೆಗಳ ಹೊಸ ಕನಸು
‘ನೀಲವಂತಿ’ ಸಿನೆಮಾವನ್ನು ಶ್ರೀಮುರಳಿ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಅವರೀಗ ‘ನೀಲವಂತಿ’ ಸಿನೆಮಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ಮ್ಯಾಕ್ಸ್’ ಮತ್ತು ‘ಉತ್ತರಕಾಂಡ’ ಸೇರಿದಂತೆ ಕೆಲವೊಂದಿಷ್ಟು ಚಿತ್ರಗಳಲ್ಲಿ ಖಳನಾಯಕ ಬಣ್ಣ ಹಚ್ಚಿರುವ ಕರಣ್ ಆರ್ಯನ್ ‘ನೀಲವಂತಿ’ ಸಿನೆಮಾದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಮಲಯಾಳಂ ನಟಿ ಮೋಕ್ಷಾ ‘ನೀಲವಂತಿ’ ಸಿನೆಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಕಾರ್ತಿಕ್ ಸುಂದರಂ, ದೀಪಿಕಾ, ಕಾವ್ಯ ಗೌಡ, ವಿರಾಟ್, ಭಾರ್ಗವ್, ಭಾಸ್ಕರ್ ಗೌಡ, ಆನಂದ ಕೆಂಗೇರಿ , ವಂಶಿ ಗೌಡ, ಕ್ಯಾಂಡಿ ದಾಸ್, ಧನಿ ಬೋಸ್ ತಾರಾಬಳಗ ‘ನೀಲವಂತಿ’ ಸಿನೆಮಾದಲ್ಲಿದೆ.
‘ನೀಲವಂತಿ’ ಸಿನೆಮಾಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್ ಕೃಷ್ಣ ‘ನೀಲವಂತಿ’ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ‘ನೀಲವಂತಿ’ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ‘ಈ ಸಿನೆಮಾದ ಟೈಟಲ್, ಪುಸ್ತಕದ ಬಗ್ಗೆ ಹೇಳಿರುವುದು, ಹಾಗೇಯೇ ಅದಕ್ಕೆ ಹಾರರ್ ಟಚ್ ಕೊಟ್ಟಿರುವುದು ನೋಡಿದರೆ ಬಹಳ ಅದ್ಭುತವಾಗಿ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತಿದೆ. ನನಗೆ ಹಾರರ್ ಸಬ್ಜೆಕ್ಟ್ ಇಷ್ಟ. ಸಿನೆಮಾ ತುಂಬಾ ಡಿಮ್ಯಾಂಡ್ ಮಾಡುತ್ತದೆ. ಮೇಕಿಂಗ್ , ಬಜೆಟ್ , ಎಕ್ಸಿಬ್ಯೂಷನ್ ಇರಬಹುದು. ತುಂಬಾ ಡಿಮ್ಯಾಂಡ್ ಮಾಡುವ ಸಬ್ಜೆಕ್ಟ್. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಚಿತ್ರ ತುಂಬಾ ಶ್ರಮ ಕೇಳುತ್ತದೆ. ಅದರಂತೆ ಶ್ರಮ ಹಾಕಿ ಮಾಡಿ. ಇದು ಕನ್ನಡಕ್ಕೆ ಬೇರೆ ರೀತಿಯ ಸಿನೆಮಾವಾಗುತ್ತದೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ’ ಎಂದರು.
ನೈಜ ಘಟನೆಯಾಧಾರಿತ ಚಿತ್ರ..!
ನಾಯಕ ಕರಣ್ ಆರ್ಯನ್ ಮಾತನಾಡಿ, ‘ಒಂದಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸುತ್ತಿದ್ದೆ. ನಾನು ಮೊದಲು ಹಾರರ್ ಚಿತ್ರದ ಮೂಲಕವೇ ಇಂಡಸ್ಟ್ರೀಗೆ ಬಂದಿದ್ದು. ಆದರೆ ಅಷ್ಟು ಸಕ್ಸಸ್ ಸಿಗಲಿಲ್ಲ. ಹೀಗಾಗಿ ಖಳನಾಯಕನಾಗಿ ಸಿನಿಮಾ ಮಾಡೋಣಾ. ಆ ಬಳಿಕ ಹೀರೋ ಆಗಬೇಕು ಎಂದುಕೊಂಡಿದ್ದೆ. ಒಂದಷ್ಟು ದೊಡ್ಡ ದೊಡ್ಡ ಪ್ರೊಡಕ್ಷನ್ ನಲ್ಲಿ ವಿಲನ್ ಆಗಿ ನಟಿಸಿದ್ದೇನೆ. ಈಗ ಹೀರೋ ಆಗಿ ಲವ್ ಹಾಗೂ ಮಾಸ್ ಸಬ್ಜೆಕ್ಟ್ ಮಾಡುತ್ತಿದ್ದೇನೆ. ‘ನೀಲವಂತಿ’ ಹಾರರ್ ಸಿನಿಮಾ. ಕಥೆ ಬಹಳ ವಿಭಿನ್ನ ಎನಿಸಿತು. ಇದು ನೈಜ ಘಟನೆಯಾಧಾರಿತ ಚಿತ್ರ. ಯಾರು ಟಚ್ ಮಾಡದ ಕಥೆಯನ್ನು ಟಚ್ ಮಾಡಿದ್ದೇವೆ. ರಿಸ್ಕ್ ಇಲ್ಲದೇ ಯಾವುದು ಆಗಲ್ಲ ಅಂತರಲ್ಲ. ಹಾಗೇ ನಾವು ರಿಸ್ಕ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇವೆ’ ಎಂದರು.
ನಿರ್ದೇಶಕ ಶ್ರೀಮುರಳಿ ಪ್ರಸಾದ್ ಮಾತನಾಡಿ, ”ನೀಲವಂತಿ’ ಸಿನಿಮಾ ಟಾಕ್ ಕ್ರಿಯೇಟ್ ಮಾಡಲಿದೆ ಎಂಬ ಭರವಸೆ ಇದೆ. ತಂತ್ರಜ್ಞನರನ್ನು ಹೊರಗಡೆ ಕರೆಸಿ ಮಾಡಿಸುತ್ತಿದ್ದೇವೆ. ನನ್ನ ಸ್ನೇಹಿತ ಕಥೆ ಇಷ್ಟಪಟ್ಟು ಚಿತ್ರ ನಿರ್ಮಾಣ ಮಾಡಿದ್ದಾರೆ. ನೀಲವಂತಿ ಅನ್ನೋದು ಒಂದು ಗ್ರಂಥ. ಅದನ್ನು ಇಟ್ಕೊಂಡು ಫಿಕ್ಷನಲ್ ಸಿನಿಮಾ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಮುಂದಿನ ವರ್ಷ ‘ನೀಲವಂತಿ’ ತೆರೆಗೆ..?
‘ಕೋಗರ ಸಿನಿ ಕ್ರಿಯೇಷನ್’ ಬ್ಯಾನರ್ ನಡಿ ಮುಕುಂದ್ ಕೋಗರ ‘ನೀಲವಂತಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ನೀಲವಂತಿ’ ಚಿತ್ರಕ್ಕೆ ಗಗನ್ ಗೌಡ ಕ್ಯಾಮೆರಾ ಹಿಡಿಯುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕಾಶ್ ಸಂಕಲನ ಈ ಚಿತ್ರಕ್ಕಿದೆ. ಹಾರರ್ ಜೊತೆ ಫ್ಯಾಂಟಸಿ ಕಥೆಯ ಆಧರಿತ ‘ನೀಲವಂತಿ’ ಚಿತ್ರ ಚಿತ್ರೀಕರಣ ಈಗಾಗಲೇ 30%ರಷ್ಟು ಮುಗಿದಿದೆ. ಎರಡನೇ ಹಂತದ ಚಿತ್ರೀಕರಣವನ್ನು ಸಕಲೇಶಪುರ, ಕಳಸ ಸುತ್ತಮುತ್ತ ಚಿತ್ರೀಕರಿಸಲು ಚಿತ್ರತಂಡ ಸಜ್ಜಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ 2025ರ ಮಧ್ಯ ಭಾಗದಲ್ಲಿ ‘ನೀಲವಂತಿ’ ಸಿನೆಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.