ಹೊಸ ಸಿನೆಮಾಕ್ಕೆ ಶ್ರೀಮುರಳಿ ಬಹು’ಪರಾಕ್’!

ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್
ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ
ರೋರಿಂಗ್ ಸ್ಟಾರ್ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್ ಪೋಸ್ಟರ್ ರಿಲೀಸ್
‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಇನ್ನು ‘ಬಘೀರʼ ಸಿನೆಮಾದ ನಂತರ ಶ್ರೀಮುರಳಿ ಯಾವ ಸಿನೆಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ? ಶ್ರೀಮುರಳಿ ಹೊಸ ಸಿನೆಮಾದ ಹೆಸರೇನು? ಅದನ್ನು ಯಾರು ನಿರ್ದೇಶನ ಮಾಡಲಿದ್ದಾರೆ? ಎಂಬ ಹಲವು ಪ್ರಶ್ನೆಗಳಿಗೆ ಅಭಿಮಾನಿಗಳ ನಿರೀಕ್ಷೆಯಂತೆಯೇ, ಶ್ರೀಮುರಳಿ ಅವರ ಜನ್ಮದಿನದಂದೇ ಉತ್ತರ ಸಿಕ್ಕಿದೆ.
ಜನ್ಮದಿನದಂದೇ ‘ಪರಾಕ್’ ಘೋಷಣೆ
ಸಾಮಾನ್ಯವಾಗಿ ಯಾವುದೇ ನಾಯಕ ನಟರ ಜನ್ಮದಿನದಂದು ಅವರ ಮುಂಬರಲಿರುವ ಸಿನೆಮಾಗಳ ಟೈಟಲ್, ಟೀಸರ್, ಟ್ರೇಲರ್ ಬಿಡುಗಡೆಯಾಗುವುದು ಚಿತ್ರರಂಗದಲ್ಲಿರುವ ವಾಡಿಕೆ. ಅದರಂತೆ ಜನ್ಮದಿನದ ಸಂಭ್ರಮದಲ್ಲಿರುವ ಶ್ರೀಮುರಳಿ ಅವರ ಮುಂಬರುವ ಸಿನೆಮಾದ ಬಗ್ಗೆಯೂ ಒಂದಷ್ಟು ಅಪ್ಡೇಟ್ ಅವರ ಬರ್ತಡೇ ಯಂದೇ ಸಿಕ್ಕಿದೆ. ಅಂದಹಾಗೆ, ಶ್ರೀಮುರಳಿ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ಪರಾಕ್’ ಎಂಬ ಟೈಟಲ್ ಇಡಲಾಗಿದೆ. ಶ್ರೀಮುರಳಿ ಬರ್ತ್‌ಡೇ ಪ್ರಯುಕ್ತ ‘ಪರಾಕ್’ ಸಿನೆಮಾದ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ಬಿಡುಗಡೆಯಾಗಿರುವ ‘ಪರಾಕ್’ ಸಿನೆಮಾದ ಟೈಟಲ್ ಪೋಸ್ಟರ್‌ನಲ್ಲಿ ಒಂದು ಕೈಯಲ್ಲಿ ಗನ್ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಕವಚ ಹಿಡಿದುಕೊಂಡು, ಬೆನ್ನಿಗೆ ಪಿಸ್ತೂಲ್ ಹಾಕಿಕೊಂಡು ಹೋರಾಟಕ್ಕೆ ಹೊರಟ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಪರಾಕ್’ ಸಿನೆಮಾದ ಟೈಟಲ್ ಪೋಸ್ಟರ್ ನೋಡಿದವರಿಗೆ ಇದು ಶ್ರೀಮುರಳಿ ಅವರ ಮತ್ತೊಂದು ವಿಭಿನ್ನ ಆಕ್ಷನ್ ಸಿನೆಮಾ ಎಂಬಂತೆ ಕಾಣುತ್ತಿದ್ದರೂ, ‘ಪರಾಕ್’ ಸಿನೆಮಾದಲ್ಲಿ ಶ್ರೀಮುರಳಿ ಅವರ ಪಾತ್ರದ ಬಗ್ಗೆಯಾಗಲಿ, ‘ಪರಾಕ್’ ಕಥಾಹಂದರದ ಬಗ್ಗೆಯಾಗಲೀ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.
‘ಪರಾಕ್’ ಚಿತ್ರಕ್ಕೆ ಯುವ ಪ್ರತಿಭೆ ಹಾಲೇಶ್ ನಿರ್ದೇಶನ
ಶ್ರೀಮುರಳಿ ಅಬಿನಯದ ಹೊಸ ಸಿನೆಮಾ ‘ಪರಾಕ್’ಗೆ ಯುವ ನಿರ್ದೇಶಕ ಹಾಲೇಶ್ ಕೋಗುಂಡಿ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದ ಸಕ್ರಿಯರಾಗಿರುವ, ಈಗಾಗಲೇ ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್, ‘ಪರಾಕ್’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಪರಾಕ್’ ಮೂಲಕ ಹಾಲೇಶ್ ಕೋಗುಂಡಿ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಮುಂದಿನ ವರ್ಷ ‘ಪರಾಕ್’ ಚಿತ್ರೀಕರಣ ಅಖಾಡಕ್ಕೆ
ಮೂಲಗಳ ಪ್ರಕಾರ ಈಗಾಗಲೇ ‘ಪರಾಕ್’ ಸಿನೆಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಮುಂದಿನ ಮಾರ್ಚ್ ನಲ್ಲಿ ‘ಪರಾಕ್’ ಚಿತ್ರದ ಶೂಟಿಂಗ್ ಶುರುವಾಗಲಿದೆ. ‘ಪರಾಕ್’ ಸಿನೆಮಾವನ್ನು ‘ಬ್ರ್ಯಾಂಡ್ ಸ್ಟುಡಿಯೋಸ್’ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ ‘ಪರಾಕ್’ ಸಿನೆಮಾ ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿದ್ದು, ಆಕ್ಷನ್-ಥ್ರಿಲ್ಲರ್ ಕಥಾಹಂದರದ ಈ ಸಿನೆಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.