Telewalk

‘ಕಲರ್ಸ್ ಕನ್ನಡ’ದಲ್ಲಿ ‘ನೂರು ಜನ್ಮಕೂ’ ಆರಂಭ

ಡಿ. 23ರಿಂದ ‘ಕಲರ್ಸ್ ಕನ್ನಡ’ದಲ್ಲಿ ಹೊಸ ಧಾರವಾಹಿ

ಅತಿಮಾನುಷ ತಿರುವಿನ ಪ್ರೇಮಕಥೆ ‘ನೂರು ಜನ್ಮಕೂ’ ಆರಂಭ

ಸೋಮವಾರದಿಂದ ಶನಿವಾರ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ

ಒಂದಾದ ಮೇಲೊಂದು ಕೌಟುಂಬಿಕ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ನಿರಂತರ ಪ್ರಯತ್ನಿಸುತ್ತಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಈಗ ‘ನೂರು ಜನ್ಮಕೂ’ ಎಂಬ ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. ಇದೇ ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರವಾಗಲಿದೆ.

ವಿಭಿನ್ನವಾದ ರೋಚಕ ಕಥಾಹಂದರವನ್ನು ಹೊಂದಿರುವ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಒಂದು ಉತ್ಕಟ ಪ್ರೇಮಕಥೆಯೂ ಅಡಗಿದೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆ ಈ ಧಾರಾವಾಹಿಯಲ್ಲಿ ತೆರೆದುಕೊಳ್ಳಲಿದೆ. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ, ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುತ್ತಾಳೆ.

‘ನೂರು ಜನ್ಮಕೂ’ ಧಾರಾವಾಹಿಯ ಕಥೆಯನ್ನು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಜೊತೆಗೆ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ ಎಂಬುದು ‘ಕಲರ್ಸ್ ಕನ್ನಡ’ ವಾಹಿನಿಯ ವಿಶ್ವಾಸದ ಮಾತು.

ಶ್ರವಂತ್ ರಾಧಿಕಾ ನಿರ್ದೇಶನದ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಹೆಸರಾಂತ ನಟ-ನಟಿಯರ ದಂಡೇ ಇದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ. ಎಂ. ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ‘ಮಜಾ ಟಾಕೀಸ್’ ಖ್ಯಾತಿಯ ರೆಮೋ ಕೂಡ ಇದ್ದಾರೆ. ಚಿತ್ರಾ ಶೆಣೈ ತಮ್ಮ ‘ಗುಡ್ ಕಂಪನಿ’ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

Related Posts

error: Content is protected !!