ಸಿ. ಎಂ. ಸಿದ್ಧು ಕೈಗೆ ಡಾಲಿ ʼಮದುವೆಯ ಕರೆಯೋಲೆ…ʼ

ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ
ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ
ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ
ನಟ ಡಾಲಿ ಧನಂಜಯ್ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಡಾಲಿ ಧನಂಜಯ್, ಈಗ ತಮ್ಮ ಮದುವೆಯ ತಯಾರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧನಂಜಯ್ ವಿವಾಹ ಆಮಂತ್ರಣ ಪತ್ರಿಕೆ ಮುದ್ರಣಗೊಂಡು ಡಾಲಿ ಕೈ ಸೇರಿದ್ದು, ಇದೀಗ ಧನಂಜಯ್ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡಿ ಅತಿಥಿ-ಅಭ್ಯಾಗತರನ್ನು ಆಹ್ವಾನಿಸುವ ಕೆಲಸ ಶುರು ಮಾಡಿದ್ದಾರೆ.
ಸಿದ್ದುಗೆ ಡಾಲಿ ಮದುವೆಯ ಮೊದಲ ಆಹ್ವಾನ
ಇನ್ನು ಡಾಲಿ ಧನಂಜಯ್, ತಮ್ಮ ಮದುವೆಯ ಮೊದಲ ಆಹ್ವಾನ ಪತ್ರಿಕೆಯನ್ನು ಸಿ. ಎಂ. ಸಿದ್ಧರಾಮಯ್ಯ ಅವರಿಗೆ ನೀಡುವ ಮೂಲಕ ಮೊದಲ ಗಣ್ಯ ವ್ಯಕ್ತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ. ತಮ್ಮ ಭಾವಿ ಪತ್ನಿ ಧನ್ಯತಾ ಅವರ ಜೊತೆಗೆ ಸಿ. ಎಂ. ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದ್ದ ಧನಂಜಯ್, ಸಿ. ಎಂ ಅವರ ಆಶೀರ್ವಾದವನ್ನು ಪಡೆದು ತಮ್ಮ ಮದುವೆಗೆ ಆಹ್ವಾನಿಸಿದರು. ಧನಂಜಯ್ – ಧನ್ಯತಾ ವಿವಾಹ ಆಹ್ವಾನವನ್ನು ಸ್ವೀಕರಿಸಿದ ಸಿ. ಎಂ. ಸಿದ್ಧರಾಮಯ್ಯ ಮದುವೆಗೆ ಆಗಮಿಸುವುದಾಗಿ ತಿಳಿಸಿ, ಹಸೆಮಣೆ ಏರಲಿರುವ ನವ ಜೋಡಿಗೆ ಶುಭ ಹಾರೈಸಿದರು.
ಹೊಸವರ್ಷದಲ್ಲಿ ಡಾಲಿ ಹೊಸಜೀವನಕ್ಕೆ…
2025ನೇ ಫೆಬ್ರವರಿ 16ನೇ ತಾರೀಖು ಭಾನುವಾರ ಧನಂಜಯ್ ಬೆಳಿಗ್ಗೆ 8.20 ರಿಂದ 10.00 ಸಲ್ಲುವ ಮೀನ ಲಗ್ನದಲ್ಲಿ ಧನಂಜಯ್ ಅವರು ಧನ್ಯತಾ ಅವರನ್ನು ವರಿಸಲಿದ್ದಾರೆ. ಮೈಸೂರಿನ ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಲಿದೆ. 2025ನೇ ಫೆ. 15ರ ಶನಿವಾರ ಸಂಜೆ 6.00 ಗಂಟೆಗೆ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.