Street Beat

ಮತ್ತೊಬ್ಬಳು ‘ತಾಯವ್ವ’ ತೆರೆಗೆ ಬರುತ್ತಿದ್ದಾಳೆ…

‘ತಾಯವ್ವ’ ಹೆಸರಿನ ಮತ್ತೊಂದು ಚಿತ್ರ ತೆರೆಗೆ

ಹೊರಬಂತು ‘ತಾಯವ್ವ’ ಸಿನೆಮಾದ ಟೈಟಲ್‌ ಪೋಸ್ಟರ್‌

ಚಿತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್…

ಸುಮಾರು ಎರಡು ದಶಕದ ಹಿಂದೆ ಕಿಚ್ಚ ಸುದೀಪ್‌ ಮತ್ತು ಹಿರಿಯ ನಟಿ ಉಮಾಶ್ರೀ ಅಭಿನಯದಲ್ಲಿ ‘ತಾಯವ್ವ’ ಎಂಬ ಹೆಸರಿನ ಸಿನೆಮಾ ತೆರೆಗೆ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಎರಡು ದಶಕದ ಹಿಂದೆ ತೆರೆಗೆ ಬಂದಿದ್ದ ‘ತಾಯವ್ವ’ ಸಿನೆಮಾಕ್ಕೂ, ಈಗ ತೆರೆಗೆ ಬರುತ್ತಿರುವ ‘ತಾಯವ್ವ’ ಸಿನೆಮಾಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥಾಹಂದರಕ್ಕೆ ಸೂಕ್ತ ಎಂಬ ಕಾರಣಕ್ಕೆ ‘ತಾಯವ್ವ’ ಎಂಬ ಟೈಟಲ್‌ ಅನ್ನು ಮತ್ತೊಮ್ಮೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಹೊಸದಾಗಿ ತೆರೆಗೆ ಬರುತ್ತಿರುವ ‘ತಾಯವ್ವ’ ಚಿತ್ರತಂಡದ ಮಾತು.

‘ತಾಯವ್ವ’ನನ್ನು ಪರಿಚಯಿಸಿದ ಚಿತ್ರತಂಡ

ಅಂದಹಾಗೆ, ಹೊಸದಾಗಿ ತೆರೆಗೆ ಬರುತ್ತಿರುವ ‘ತಾಯವ್ವ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಈ ಸಿನೆಮಾ ಸೆನ್ಸಾರ್‌ ಮುಂದಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ತಾಯವ್ವ’ನ ಒಂದಷ್ಟು ವಿಶೇಷತೆಗಳನ್ನು ಪರಿಚಯಿಸಿತು. ಇನ್ನು ಚಿತ್ರತಂಡ ಹೇಳುವಂತೆ, ‘ತಾಯವ್ವ’ ಸೂಲಗಿತ್ತಿ ಮಹಿಳೆಯೊಬ್ಬಳ ಸುತ್ತ ಸಾಗುವ ಕಥೆಯನ್ನು ಆಧರಿಸಿದ ಚಿತ್ರ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹಿರಿಯ ನಟಿ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ‘ತಾಯವ್ವ’ ಸಿನೆಮಾದ ಟೈಟಲ್ ಮತ್ತು ಪೋಸ್ಟರ್‌ ಬಿಡುಗಡೆ ಮಾಡಿ ಹೊಸಬರ ಚಿತ್ರತಂಡಕ್ಕೆ ಬೆನ್ನುತಟ್ಟಿದರು.

‘ತಾಯವ್ವ’ನಿಗೆ ಗಣ್ಯರ ಶುಭ ಹಾರೈಕೆ

‘ತಾಯವ್ವ’ ಸಿನೆಮಾದ ಟೈಟಲ್ ಮತ್ತು ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ”ತಾಯವ್ವ’ ಮನಸ್ಸಿಗೆ ಮುಟ್ಟು ಪದ. ತಾಯಿ ಅನ್ನೋ ಪದವೇ ಹಾಗೇ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ತಯಾರಾಗಿರುವ ಸಿನೆಮಾ ಇದು. ಮಕ್ಕಳನ್ನು ಹೊರಲು ತಾಯಿಬೇಕು. ಹೆಂಡ್ತಿಯಾಗಿ ನಮ್ಮ ಎಲ್ಲಾ ಕಷ್ಟ-ಸುಖಗಳಲ್ಲಿ ನಿಲ್ಲಲು ಹೆಣ್ಣು ಬೇಕು. ಆದರೆ ಮಗಳಾಗಿ ಬೇಡ ಅನ್ನುವುದು ಬಂದಿದೆ. ಈಗ ಜನಕ್ಕೆ ಒಂದು ಜಾಗೃತಿ ಬಂದಿದೆ. ಜನ ಗಂಡು-ಹೆಣ್ಣು ಎರಡನ್ನು ಸ್ವೀಕಾರ ಮಾಡುವ ಮನಸ್ಸು ಬಂದಿದೆ. ಹೆಣ್ಣು ವಿಚಾರ ಬಂದಾಗ ತಾಯಿ ಭಾವನೆ ಇವೆಲ್ಲಾ ಪ್ರಮುಖವಾಗುತ್ತದೆ. ಈ ದೃಷ್ಟಿಯಿಂದ ‘ತಾಯವ್ವ’ ಸಿನೆಮಾ ಮೂಡಿಬಂದಿದೆ. ಜನರನ್ನು ಮುಟ್ಟುವಂತ ಸಿನಿಮಾ ಆಗಿ ಹೊರಹೊಮ್ಮಲಿ’ ಎಂದು ಶುಭ ಹಾರೈಸಿದರು.

ಹಿರಿಯ ನಟಿ ಉಮಾಶ್ರೀ ಮಾತನಾಡಿ, ‘ಸುದೀಪ್ ಮೊದಲ ಸಿನೆಮಾ ‘ತಾಯವ್ವ’ ಅನ್ನೋ ಟೈಟಲ್ ಮೇಲೆಯೇ ಆಗಿದ್ದು. ನಾನು ಆ ಚಿತ್ರದಲ್ಲಿ ನಾನು ಪಾತ್ರ ಮಾಡಿದ್ದೆ. ಅದೇ ಟೈಟಲ್ ಈಗ ಕನ್ನಡ ಚಿತ್ರರಂಗದಲ್ಲಿ ರೀಪೀಟ್ ಆಗ್ತಿದೆ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿರುವ ಪ್ರಯತ್ನ ಇದಾಗಿದೆ. ಸಮಾಜಕ್ಕೆ ಅರಿವು ಮೂಡಿಸುವಂತಹ ಇಂತಹ ಸಿನೆಮಾಗಳು ಬಹಳ ಮುಖ್ಯವಾಗುತ್ತವೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ರೀತಿ ಸಿನೆಮಾಗಳನ್ನು ಕಮರ್ಷಿಯಲ್‌ ವಿಧಾನದಲ್ಲಿ ಮಾಡುವುದು ಕಷ್ಟ. ಆದರೆ ಅದರ ಉದ್ದೇಶ ಒಳ್ಳೆಯದಿರುವುದರಿಂದ ಇಂಥ ಸಿನೆಮಾಗಳು ಗೆಲ್ಲಬೇಕು. ಇಡೀ ತಂಡಕ್ಕೆ ಒಳ್ಳೆದಾಗಲಿ’ ಎಂದರು.

ಹೊಸ ವರ್ಷದಲ್ಲಿ ‘ತಾಯವ್ವ’ ತೆರೆಗೆ…

‘ತಾಯವ್ವ’ ಸಿನೆಮಾವನ್ನು ‘ನಂದಿ ಪ್ರಶಸ್ತಿ’ ಸಂಸ್ಥಾಪಕಿಯಾಗಿರುವ ಎಸ್. ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಕಂಟೆಂಟ್ ಸಿನಿಮಾವನ್ನು ನಿರ್ಮಿಸಿದ್ದು, ಅದನ್ನು ಕನ್ನಡ ಪ್ರೇಕ್ಷಕರಿಗೆ ಸಮರ್ಪಿಸುವ ಖುಷಿ  ಎಸ್. ಪದ್ಮಾವತಿ ಚಂದ್ರಶೇಖರ್‌ ಅವರದ್ದು. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ‘ತಾಯವ್ವ’ ಸಿನೆಮಾಕ್ಕೆ ಛಾಯಾಗ್ರಹಣ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಪಿ. ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ‘ತಾಯವ್ವ’ನಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ‘ತಾಯವ್ವ’ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗಕ್ಕೆ ಪರಿಯಚವಾಗುತ್ತಿದ್ದು, ಬಂಡೇ ಮಹಾಕಾಳಿ ದೇಗುಲದ ಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕ ಭಾ. ಮ. ಹರೀಶ್ ‘ತಾಯವ್ವ’ ಸಿನೆಮಾವನ್ನು ಅರ್ಪಿಸುತ್ತಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿ ಸೆನ್ಸಾರ್ ಮುಂದಿರುವ ‘ತಾಯವ್ವ’ ಸಿನೆಮಾವನ್ನು ಹೊಸ ವರ್ಷದಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!