ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

ಖ್ಯಾತ ಸಿನೆಮಾ ನಿರ್ದೇಶಕ ಶ್ಯಾಮ್ ಬೆನಗಲ್ (90) ವಿಧಿವಶ
ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆನಗಲ್
ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಭಾರತದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಹಿರಿಯ ಸಿನೆಮಾ ನಿರ್ದೇಶಕ ಶ್ಯಾಮ್ ಬೆನಗಲ್ (90) ಸೋಮವಾರ (ಡಿ. 23) ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದಷ್ಟೇ ಮುಂಬೈನ ‘ವೋಕಾರ್ಡ್’ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ಯಾಮ್ ಬೆನಗಲ್ (ಡಿ. 23) ಸೋಮವಾರ ಸಂಜೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದೇ ಡಿ. 14ರಂದು ಶ್ಯಾಮ್ ಬೆನಗಲ್ ತಮ್ಮ 90ನೇ ಜನ್ಮದಿನವನ್ನು ಕುಟುಂಬದವರ ಜೊತೆ ಆಚರಿಸಿಕೊಂಡಿದ್ದರು. 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕೇವಲ ಹತ್ತು ದಿನಗಳಲ್ಲಿ ಬೆನಗಲ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರಿ ಪಿಯಾ ಬೆನೆಗಲ್ ಹೇಳಿದ್ದಾರೆ.
ಕಾಪಿರೈಟರ್ ಆಗಿದ್ದವರು ಡೈರೆಕ್ಟರ್ ಆದ್ರು…
1934ರಲ್ಲಿ ಅಂದಿನ ಹೈದರಾಬಾದ್ ಪ್ರಾಂತ್ಯದ ತಿರುಮಲಗಿರಿಯಲ್ಲಿ ಜನಿಸಿದ್ದ ಶ್ಯಾಮ್ ಬೆನಗಲ್ ಆರಂಭದಲ್ಲಿ ಕಾಪಿರೈಟರ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಆದರೆ ಚಿತ್ರರಂಗದ ಕಡೆಗಿದ್ದ ಅವರ ಆಸಕ್ತಿಯಿಂದಾಗಿ ಅಲ್ಪ ಸಮಯದಲ್ಲೇ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ ಬೆನಗಲ್ ಆನಂತರ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಹಾಲಿನ ಕ್ರಾಂತಿ ಕುರಿತಾದ ‘ಮಂಥನ’ ಚಿತ್ರ ಮೊದಲು ಸಾಕ್ಷ್ಯ ಚಿತ್ರವಾಗಿತ್ತು. ‘ಗುಜರಾತ್ ಹಾಲು ಉತ್ಪಾದಕರ ಸಂಘ’ದ 5 ಲಕ್ಷ ಮಂದಿ ಸದಸ್ಯರು 2 ರೂಪಾಯಿಯಂತೆ ಹಾಕುವ ಮೂಲಕ ನಿರ್ಮಾಣಕ್ಕೆ ಸಾಥ್ ನೀಡಿದರು. ಗುಜರಾತಿಯಲ್ಲಿ 1962ರಲ್ಲಿ ಮೊದಲ ಸಾಕ್ಷ್ಯಚಿತ್ರ ‘ಘೇರ್ ಬೇತಾ ಗಂಗಾ’ವನ್ನು ನಿರ್ಮಿಸಿದ ಶ್ಯಾಮ್ ಬೆನಗಲ್ ಆನಂತರ ಸಾಲು ಸಾಲು ಸಾಮಾಜಿಕ ಕಥಾಹಂದರದ ಸಿನೆಮಾಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ‘ಮಂಡಿ’, ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಮಮ್ಮೋ’, ‘ಸರ್ದಾರಿ ಬೇಗಂ’, ‘ಜುಬೇದಾ’ ಮುಂತಾದವುಗಳು ಶ್ಯಾಮ್ ಬೆನಗಲ್ ಅವರ ಬತ್ತಳಿಕೆಯಿಂದ ಬಂದ ಜನಪ್ರಿಯ ಸಿನೆಮಾಗಳಿವೆ. 1980ರಿಂದ 1986ರವರೆಗೆ ‘ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ’ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಶ್ಯಾಮ್ ಬೆನಗಲ್ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ನೀಡುವಲ್ಲ ತಮ್ಮದೇ ಆದ ಕೊಡುಗೆ ನೀಡಿದ್ದರು.
ಬೆನಗಲ್ ಮುಡಿಗೆ 18ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳು
ನೈಜವಾಗಿ ಕಥೆ ಹೇಳುವಿಕೆ ಮತ್ತು ಸಾಮಾಜಿಕ ಒಳನೋಟಗಳನ್ನೊಳಗೊಂಡ ಸಿನೆಮಾಗಳನ್ನು ನಿರ್ಮಾಣ ಮಾಡುವಲ್ಲಿ ಶ್ಯಾಮ್ ಬೆನೆಗಲ್ ಹೆಸರುವಾಸಿಯಾಗಿದ್ದರು. ಇಲ್ಲಿಯವರೆಗೆ ಶ್ಯಾಮ್ ಬೆನಗಲ್ ತಮ್ಮ ಸಿನೆಮಾಗಳಿಗಾಗಿ ಸುಮಾರು 18 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ‘ಪದ್ಮಶ್ರೀ’, 1991ರಲ್ಲಿ ‘ಪದ್ಮ ಭೂಷಣ’ ಪ್ರಶಸ್ತಿಗಳನ್ನು ನೀಡಿ ಭಾರತ ಸರ್ಕಾರ ಅವರನ್ನು ಗೌರವಿಸಿದೆ. 2005ರಲ್ಲಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಕೂಡ ಶ್ಯಾಮ್ ಬೆನಗಲ್ ಭಾಜನರಾಗಿದ್ದರು.
ಶ್ಯಾಮ್ ಬೆನಗಲ್ ಅವರಿಗೆ ಉಡುಪಿ ನಂಟು!
ಮೂಲಗಳ ಪ್ರಕಾರ, ಶ್ಯಾಮ್ ಬೆನಗಲ್ ಅವರ ತಂದೆ ಶ್ರೀಧರ ಬಿ. ಬೆನಗಲ್ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಬೆನಗಲ್‌ನವರು. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇವರ ಮೂಲ ನಾಗಬನ ಬೆನಗಲ್‌ನಲ್ಲಿದೆ. ಇಂದಿಗೂ ಶ್ಯಾಮ್ ಬೆನಗಲ್ ಕುಟುಂಬಸ್ಥರು ಮೂಲಸ್ಥಾನಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಶ್ಯಾಮ್ ಬೆನಗಲ್ ಇಲ್ಲಿಗೆ ಆಗಮಿಸಿದ್ದರು ಎಂದು ಸ್ಥಳೀಯರು ನೆನಪಿಸುತ್ತಾರೆ. ಹಲವು ವರ್ಷಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಪ್ರಶ್ನಾಚಿಂತನೆಯಂತೆ ಬೆನಗಲ್ ಅವರು ಕುಟುಂಬದವರ ಜತೆ ತಮ್ಮ ಮೂಲ ನಾಗಬನಕ್ಕೆ ಆಗಮಿಸಿ ಆಶ್ಲೇಷಾ ಬಲಿ ಸೇವೆ ಸಲ್ಲಿಸಿದ್ದರು. ಅನಂತರದಿಂದ ಪ್ರತೀ ವರ್ಷ ಕುಟುಂಬದವರಿಂದ ಸೇವೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅನಂತ್ ನಾಗ್ ಜೊತೆ ಹಿಂದಿ ಸಿನೆಮಾ
ಕನ್ನಡದ ಹಿರಿಯ ನಟ ಅನಂತ್‌ನಾಗ್ ಅಭಿನಯದಲ್ಲಿ ಹಲವು ಚಿತ್ರಗಳ ನಿರ್ದೇಶನ ಮಾಡುವ ಮೂಲಕ ಅನಂತ್‌ನಾಗ್ ಅವರನ್ನು ಹಿಂದಿಯಲ್ಲಿ ಪರಿಚಯಿಸಿದ ಖ್ಯಾತಿ ಕೂಡಾ ಬೆನಗಲ್ ಅವರದ್ದು. ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕೊಂಡೂರಾ’, ‘ಕಲಿಯುಗ್’ ಮುಂತಾದ ಶ್ಯಾಮ್ ಬೆನೆಗಲ್ ನಿರ್ದೇಶನದ ಚಿತ್ರಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ.
ಶ್ಯಾಂ ಬೆನೆಗಲ್ ನಿಧನಕ್ಕೆ ಗಣ್ಯರ ಕಂಬನಿ
ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಹಿರಿಯ ನಟ ಅಮಿತಾಬ್ ಬಚ್ಚನ್, ನಿರ್ದೇಶಕರಾದ ಮಣಿರತ್ನಂ, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.