Straight Talk

ಕಿಚ್ಚನ ಅಭಿಮಾನಿ ‘ಕುಡ್ಲ’ ಹುಡುಗನ ಊರಿನ ಕಥೆ!

ಕಡಲತಡಿಯ ಪ್ರತಿಭೆ ದುರ್ಗಾಪ್ರಸಾದ್‌ (ಅಲೋಕ್‌) ಸಿನಿ ಕಹಾನಿ

ಕರಾವಳಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸಚಿತ್ರ ತೆರೆಗೆ ಸಿದ್ದ

ಸಿನೆಮಾ ಕನಸು, ನನಸು ಮಾಡಿಕೊಂಡ ಖುಷಿಯ ಮಾತು…

ಸಿನೆಮಾವೆಂದರೆ ಹಾಗೆ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆದು ಬಿಡುತ್ತದೆ. ಹೀಗೆ ಸಿನೆಮಾ ಸೆಳೆತಕ್ಕೆ ಸಿಕ್ಕು ಚಿತ್ರರಂಗಕ್ಕೆ ಬಂದವರು, ಬರುತ್ತಿರುವವರು, ಬರುವವರ ಸಂಖ್ಯೆ ಲೆಕ್ಕಕ್ಕೆ ಸಿಗದಂಥದ್ದು. ಹೀಗೆ ಸಿನೆಮಾ ಸೆಳೆತಕ್ಕೆ ಸಿಕ್ಕು ಈಗ ತಾವೇ ‘ಕುಡ್ಲ ನಮ್ದು ಊರು’ ಎಂಬ ಒಂದು ಸಿನೆಮಾ ಮಾಡಿ ಅದನ್ನು ಪ್ರೇಕ್ಷಕರ ಮುಂದೆ ತರುತ್ತಿರಲು ತಯಾರಾಗಿರುವವರು ದುರ್ಗಾಪ್ರಸಾದ್‌ ಉರೂಫ್‌ ಅಲೋಕ್‌.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾಪ್ರಸಾದ್‌ (ಅಲೋಕ್‌) ಚಿಕ್ಕವಯಸ್ಸಿನಿಂದಲೇ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಂಡ ಪ್ರತಿಭೆ. ಸಿನೆಮಾ ಮೇಕಿಂಗ್‌ ಬಗ್ಗೆ ಅವರಿಗಿದ್ದ ಕುತೂಹಲವೇ ಇಂದು ದುರ್ಗಾಪ್ರಸಾದ್‌ (ಅಲೋಕ್‌) ಅವರನ್ನು ‘ಕುಡ್ಲ ನಮ್ದು ಊರು’ ಎಂಬ ಸಿನೆಮಾದ ಮೂಲಕ ನಟ, ನಿರ್ಮಾಪಕ ಮತ್ತು ನಿರ್ದೇಶಕನನ್ನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುವಂತೆ ಮಾಡುತ್ತಿದೆ.

ಕಿಚ್ಚ ಸುದೀಪ್‌ ಅಭಿಮಾನಿಯ ಸಿನೆಮಾ ಕಥೆ…

ಅಂದಹಾಗೆ, ದುರ್ಗಾಪ್ರಸಾದ್‌ (ಅಲೋಕ್‌) ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ಅಪ್ಪಟ ಅಭಿಮಾನಿ. ಬಾಲ್ಯದಿಂದಲೇ ಸುದೀಪ್‌ ಅವರ ಸಿನೆಮಾಗಳನ್ನು ನೋಡುತ್ತ ಅವರ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಿರುವ ದುರ್ಗಾಪ್ರಸಾದ್‌, ಒಮ್ಮೆ ಮನೆಯಲ್ಲಿ ತಮ್ಮ ತಾಯಿಯ ಜೊತೆ ಜಗಳ ಮಾಡಿಕೊಂಡು, ಕೋಪದಿಂದ ‘ಸುದೀಪ್‌ ಅವರ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡುತ್ತೇನೆ’ ಎಂದು ‘ಕುಡ್ಲ’ (ಮಂಗಳೂರು)ದಿಂದ ಬಸ್‌ ಹತ್ತಿಕೊಂಡು ಬೆಂಗಳೂರಿಗೆ ಬಂದಿದ್ದರಂತೆ!

ಸಿನೆಮಾ ಸೆಳೆತ ನಟ, ನಿರ್ಮಾಪಕ, ನಿರ್ದೇಶಕನನ್ನಾಗಿಸಿತು…

ಆರಂಭದಲ್ಲಿ ಕಿಚ್ಚ ಸುದೀಪ್‌ ಅವರನ್ನು ನೋಡಬೇಕು, ಅವರ ಮನೆಯಲ್ಲಾದರೂ ಕೆಲಸ ಮಾಡಬೇಕು ಎಂಬ ಹಠದಿಂದ ಬೆಂಗಳೂರಿಗೆ ಬಂದಿದ್ದ ದುರ್ಗಾಪ್ರಸಾದ್‌ (ಅಲೋಕ್‌) ಅವರಿಗೆ ಇಲ್ಲಿ ಆದಂತಹ ಅನುಭವಗಳು, ಅವರನ್ನು ವಾಪಾಸ್‌ ಕುಡ್ಲ (ಮಂಗಳೂರು)ದತ್ತ ಹೋಗುವಂತೆ ಮಾಡಿತು. ಆ ಬಳಿಕ ಸಿನೆಮಾಕ್ಕೆ ಬರುವ ಮುನ್ನ ಸಾಕಷ್ಟು ಕಲಿತುಕೊಂಡು ಬರಬೇಕು ಎಂಬುದನ್ನು ಅರಿತುಕೊಂಡ ದುರ್ಗಾಪ್ರಸಾದ್‌ (ಅಲೋಕ್‌), ತಮ್ಮ ಇಂಟಿರಿಯರ್‌ ಡಿಸೈನಿಂಗ್‌ ಕೆಲಸದ ನಡುವೆಯೇ ಸಿನೆಮಾ ಮೇಕಿಂಗ್‌ ಬಗ್ಗೆಯೂ ಸಾಕಷ್ಟು ತಿಳಿದುಕೊಂಡರು. ಅಂತಿಮವಾಗಿ ತಾನು ಕೂಡ ಒಂದು ಸಿನೆಮಾ ಮಾಡಬಲ್ಲೆ ಎಂಬ ವಿಶ್ವಾಸ ಬಂದ ನಂತರ ದುರ್ಗಾಪ್ರಸಾದ್‌ (ಅಲೋಕ್‌) ತಾವೇ ಕಥೆ, ಚಿತ್ರಕಥೆ ಬರೆದು ನಟಿಸಿ, ನಿರ್ದೇಶಿಸುವ ‘ಕುಡ್ಲ ನಮ್ದು ಊರು’ ಎಂಬ ಸಿನೆಮಾವನ್ನು ಕೈಗೆತ್ತಿಕೊಂಡರು.

ತೆರೆಗೆ ಬರಲು ತಯಾರಾದ ‘ಕುಡ್ಲ ನಮ್ದು ಊರು’ ಚಿತ್ರ

ಇನ್ನು ದುರ್ಗಾಪ್ರಸಾದ್‌ (ಅಲೋಕ್‌) ಜೊತೆಗೆ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಕುಡ್ಲ ನಮ್ದು ಊರು’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ‘ಕುಡ್ಲ ನಮ್ದು ಊರು’ ಚಿತ್ರತಂಡ ಇದೀಗ ಸಿನೆಮಾದ ಟ್ರೇಲರ್‌ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿದೆ.
‘ಕೃತಾರ್ಥ ಪ್ರೊಡಕ್ಷನ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ಕುಡ್ಲ ನಮ್ದು ಊರು’ ಸಿನೆಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್‌ (ಅಲೋಕ್‌) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಯುವನಟ ದುರ್ಗಾಪ್ರಸಾದ್‌ ‘ಕುಡ್ಲ ನಮ್ದು ಊರು’ ಸಿನೆಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್‌, ಪ್ರಕಾಶ್‌ ತುಮ್ಮಿನಾಡು, ಸ್ವರಾಜ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್‌, ನಿರೀಕ್ಷಾ ಶೆಟ್ಟಿ, ದಿಲೀಪ್‌ ಕಾರ್ಕಳ, ಪ್ರಜ್ವಲ್‌ ಮೊದಲಾದವರು ‘ಕುಡ್ಲ ನಮ್ದು ಊರು’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಕುಡ್ಲ ನಮ್ದು ಊರು’ ಸಿನೆಮಾದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್‌ ಶಿವರಾಮ್‌ ಸಂಗೀತ ಸಂಯೋಜಿಸಿದ್ದಾರೆ. ಸಿನೆಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್‌ ಆರ್‌. ಶೆಟ್ಟಿ ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್‌ ಎಸ್‌. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ.
ಸದ್ಯ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಮಾಡುವ ಮೂಲಕ ‘ಕುಡ್ಲ ನಮ್ದು ಊರು’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಹೊಸವರ್ಷದ ಆರಂಭದಲ್ಲಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಿನೆಮಾವನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

Related Posts

error: Content is protected !!