ಕರಾವಳಿ ಪ್ರತಿಭೆಗಳ ‘ಕುಡ್ಲ ನಮ್ದು ಊರುʼ ಚಿತ್ರದ ಟ್ರೇಲರ್ ರಿಲೀಸ್

ಹೊರಬಂತು ‘ಕುಡ್ಲ ನಮ್ದು ಊರುʼ ಚಿತ್ರದ ಟ್ರೇಲರ್
ತೆರೆಗೆ ಬರಲು ಸಿದ್ದವಾಗುತ್ತಿದೆ ‘ಕುಡ್ಲ’ ಹುಡುಗರ ಹೊಸಚಿತ್ರ
ಮಾಸ್ ಎಂಟರ್‌ಟೈನ್ಮೆಂಟ್ ಕಂಟೆಂಟ್ ಹೊತ್ತ ಟ್ರೇಲರ್
ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಕುಡ್ಲ ನಮ್ದು ಊರು’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ‘ಕುಡ್ಲ ನಮ್ದು ಊರು’ ಚಿತ್ರತಂಡ ಇದೀಗ ಸಿನೆಮಾದ ಟ್ರೇಲರ್ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ ಅಧ್ಯಕ್ಷ ಉಮೇಶ್ ಬಣಕಾರ್, ‘ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ನಟ ಚೇತನ್ ರಾಜ್ (ಭಜರಂಗಿ ಚೇತನ್) ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ‘ಕುಡ್ಲ ನಮ್ದು ಊರು’ ಸಿನೆಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿದರು.
ಟ್ರೇಲರಿನಲ್ಲಿ ಕರಾವಳಿ ಸೊಗಡು…
ಇನ್ನು ಬಿಡುಗಡೆಯಾಗಿರುವ ‘ಕುಡ್ಲ ನಮ್ದು ಊರು’ ಸಿನೆಮಾ ಟ್ರೇಲರಿನಲ್ಲಿ ಪ್ರೀತಿ, ಸ್ನೇಹ, ಆಕ್ಷನ್, ಕಾಮಿಡಿ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಕಾಣುತ್ತಿದ್ದು, ಕರಾವಳಿ ಹಿನ್ನೆಲೆಯ ಮತ್ತೊಂದು ಮಾಸ್ ಎಂಟರ್‌ಟೈನ್ಮೆಂಟ್ ಸಿನೆಮಾವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ ಚಿತ್ರತಂಡ. ‘ಕುಡ್ಲ ನಮ್ದು ಊರು’ ಸಿನೆಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್ (ಅಲೋಕ್) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ‘ಕೃತಾರ್ಥ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ದುರ್ಗಾಪ್ರಸಾದ್ ಆರ್. ಕೆ, ಚೈತ್ರಗೌಡ, ಅಂಕಿತಾ ಪದ್ಮ, ನರೇಂದ್ರ ಜೈನ್ ಜಂಟಿಯಾಗಿ ಈ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
‘ಕುಡ್ಲ ನಮ್ದು ಊರು’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಕುಡ್ಲ ನಮ್ದು ಊರು’ ಸಿನೆಮಾದಲ್ಲಿ ಯುವನಟ ದುರ್ಗಾಪ್ರಸಾದ್ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್, ಪ್ರಕಾಶ್ ತುಮ್ಮಿನಾಡು, ಸ್ವರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್, ನಿರೀಕ್ಷಾ ಶೆಟ್ಟಿ, ದಿಲೀಪ್ ಕಾರ್ಕಳ, ಪ್ರಜ್ವಲ್ ಮೊದಲಾದವರು ‘ಕುಡ್ಲ ನಮ್ದು ಊರು’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನೆಮಾದ ಟೈಟಲ್ಲೇ ಹೇಳುವಂತೆ, ಇದೊಂದು ಅಪ್ಪಟ ದಕ್ಷಿಣ ಕನ್ನಡದ ಕರಾವಳಿ ಸೊಗಡಿನ ಸಿನೆಮಾ. ಇಡೀ ಸಿನೆಮಾವನ್ನು ಕರಾವಳಿ ಮತ್ತು ಅಲ್ಲಿನ ಜನ-ಜೀವನವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ತೆರೆಗೆ ತರಲಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಸಿನೆಮಾ ರೂಪದಲ್ಲಿ ತೆರೆಗೆ ತರಲಾಗುತ್ತಿದೆ ಎಂಬುದು ಚಿತ್ರತಂಡದ ಮಾಹಿತಿ.
ಹೊಸವರ್ಷಕ್ಕೆ ‘ಕುಡ್ಲ ನಮ್ದು ಊರು’ ತೆರೆಗೆ
‘ಕುಡ್ಲ ನಮ್ದು ಊರು’ ಸಿನೆಮಾದ ಮೂರು ಹಾಡುಗಳಿಗೆ ನಿತಿನ್ ಶಿವರಾಮ್ ಸಂಗೀತ ಸಂಯೋಜಿಸಿದ್ದಾರೆ. ಸಿನೆಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್ ಆರ್. ಶೆಟ್ಟಿ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್ ಎಸ್. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ’ಕುಡ್ಲ ನಮ್ದು ಊರು’ ಸಿನೆಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಿನೆಮಾವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.