‘ಸಾಹಸ ಸಿಂಹ’ ವಿಷ್ಣುವರ್ಧನ್ ನೆನಪಿನಲ್ಲಿ ಅರಳಿದ ‘ಸಿಂಹದ ಹಾದಿ’ ಟೆಲಿಚಿತ್ರ

ಜಿ. ಕೆ. ಶಶಿರಾಜ್ ದೊರೆ ನಿರ್ದೇಶನದಲ್ಲಿ ಮೂಡಿಬಂದ ‘ಸಿಂಹದ ಹಾದಿ’ ಟೆಲಿಚಿತ್ರ
ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಮತ್ತು ಪಾತ್ರಗಳಿಂದ ಪ್ರೇರಣೆ…
100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಸಿಂಹದ ಹಾದಿ’ಯ ಟ್ರೇಲರ್ ರಿಲೀಸ್
ಡಿಸೆಂಬರ್ ತಿಂಗಳು ಬಂತೆಂದರೆ, ಕನ್ನಡ ಚಿತ್ರರಂಗದ ‘ಸಾಹಸ ಸಿಂಹ’, ‘ಅಭಿನಯ ಭಾರ್ಗವ’ ವಿಷ್ಣುವರ್ಧನ್ ಅವರ ನೆನಪು ಅಭಿಮಾನಿಗಳನ್ನು ಸಿನಿಪ್ರಿಯರನ್ನು ಇನ್ನಿಲ್ಲದಂತೆ ಕಾಡುತ್ತದೆ. ಅದಕ್ಕೆ ಕಾರಣ, ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಡಿಸೆಂಬರ್ 30 ನಟ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿದ ದಿನ. ಹೌದು, 2009 ಡಿಸೆಂಬರ್ 30ರ ಮುಂಜಾನೆ ಚಂದನವನದ ‘ಸಾಹಸ ಸಿಂಹ’ ವಿಷ್ಣುವರ್ಧನ್ ಇಹಲೋಕವನ್ನು ತ್ಯಜಿಸಿದರು. ಹೀಗಾಗಿ ಪ್ರತಿವರ್ಷದ ಕೊನೆ ಬಂತೆಂದರೆ ವಿಷ್ಣುವರ್ಧನ್ ಅವರ ನೆನಪು ಇನ್ನಿಲ್ಲದಂತೆ, ಅಭಿಮಾನಿಗಳನ್ನು ಕಾಡಲು ಶುರು ಮಾಡುತ್ತದೆ. ಇನ್ನು 2024 ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿ ಬರೋಬ್ಬರಿ 15 ವರ್ಷ. ಕಳೆದ ಈ ಹದಿನೈದು ವರ್ಷಗಳಲ್ಲಿ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ವಿಷ್ಣುವರ್ಧನ್ ಮಾಡಿರುವ ಸಿನೆಮಾಗಳು, ನಿರ್ವಹಿಸಿರುವ ಭಿನ್ನ-ವಿಭಿನ್ನ ಪಾತ್ರಗಳು, ಅಭಿಮಾನಿಗಳನ್ನು ರಂಜಿಸಿರುವ ರೀತಿ, ವಿಷ್ಣುವರ್ಧನ್ ಅವರ ಸಿನೆಮಾಗಳ ಹಾಡು, ವಿಷ್ಣುವರ್ಧನ್ ತೆರೆಮರೆಯಲ್ಲಿ ಮಾಡಿದ್ದ ಅನೇಕ ಸಮಾಜಮುಖೀ ಕಾರ್ಯಗಳು ವಿಷ್ಣುವರ್ಧನ್ ಅವರನ್ನು ಸದಾ ಜೀವಂತವಾಗಿರಿಸಿದೆ.
15ನೇ ಪುಣ್ಯತಿಥಿ ಸಂದರ್ಭದಲ್ಲಿ ಟ್ರೇಲರ್‌ನಲ್ಲಿ ‘ಸಾಹಸ ಸಿಂಹ’ನ ನೆನಪು
ಇದೀಗ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿಯೇ ಅವರ ಒಂದಷ್ಟು ಅಭಿಮಾನಿಗಳು ಸೇರಿಕೊಂಡು ‘ಸಿಂಹದ ಹಾದಿ’ ಎಂಬ ಟೆಲಿಫಿಲಂ ಮೂಲಕ ‘ಸಾಹಸ ಸಿಂಹ’ನನ್ನು ಮತ್ತೆ ತೆರೆಮೇಲೆ ನೆನಪು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಜಿ. ಕೆ. ಶಶಿರಾಜ್ ದೊರೆ ಎಂಬ ಯುವ ಪ್ರತಿಭೆ ಇಂಥದ್ದೊಂದು ವಿಭಿನ್ನ ಕಾರ್ಯದ ಮೂಲಕ ‘ಸಾಹಸ ಸಿಂಹ’ನನ್ನು ಮತ್ತೆ ತೆರೆಮೇಲೆ ತರಲು ಶ್ರಮಿಸಿದ್ದಾರೆ. ಹೌದು, ‘ಜಿ. ಕೆ. ಸಿನಿ ಫೈಲ್ಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಜಿ. ಕೆ. ಶಶಿರಾಜ್ ದೊರೆ ‘ಸಿಂಹದ ಹಾದಿ’ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ. ಬಾಲ್ಯದಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ, ಜಿ. ಕೆ. ಶಶಿರಾಜ್ ದೊರೆ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಶಶಿರಾಜ್ ದೊರೆ, ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನದಿಂದ ‘ಸಿಂಹದ ಹಾದಿ’ ಟೆಲಿಚಿತ್ರವನ್ನು ನಿರ್ಮಿಸಿ, ಅದನ್ನು ಅಭಿಮಾನಿಗಳ ಮುಂದೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸುಮಾರು ಮೂರುವರೆ ವರ್ಷಗಳ ಕಾಲ ನಿರ್ದೇಶಕ ಜಿ. ಕೆ. ಶಶಿರಾಜ್ ದೊರೆ ತ್ತು ಅವರ ತಂಡದ ಸತತ ಪರಿಶ್ರಮದ ಫಲವಾಗಿ ‘ಸಿಂಹದ ಹಾದಿ’ ಟೆಲಿಚಿತ್ರ ಅಂತಿಮವಾಗಿ ವಿಷ್ಣುವರ್ಧನ್ ಅಭಿಮಾನಿಗಳ ಮುಂದೆ ಬರುತ್ತಿದೆ.
‘ಸಿಂಹದ ಹಾದಿ’ ಟೆಲಿಚಿತ್ರಕ್ಕೆ ಗಣ್ಯರ ಮೆಚ್ಚುಗೆ
ವಿಷ್ಣುವರ್ಧನ್ ಪುಣ್ಯಸ್ಮರಣೆಗೂ ಎರಡು ದಿನಗಳ ಮುನ್ನ ‘ಸಿಂಹದ ಹಾದಿ’ ಟೆಲಿಚಿತ್ರ ಟ್ರೇಲರ್ ಅನ್ನು ತಂಡ ಬಿಡುಗಡೆ ಮಾಡಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷ ಕೃಷ್ಣೇಗೌಡ, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷ ಭಾ. ಮ. ಹರೀಶ್, ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್ ಸದಸ್ಯ ವೀರಯ್ಯ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಸೇರಿದಂತೆ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಇಂಥದ್ದೊಂದು ಅನೇಕ ಗಣ್ಯರು ಹಾಜರಿದ್ದು, ‘ಸಿಂಹದ ಹಾದಿ’ ಟೆಲಿಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.
‘ಸಾಹಸ ಸಿಂಹ’ನ ಪ್ರೇರಣೆಯ ಚಿತ್ರಣ…
ಇದೇ ವೇಳೆ ಮಾತನಾಡಿದ ‘ಸಿಂಹದ ಹಾದಿ’ ಟೆಲಿಚಿತ್ರದ ನಿರ್ದೇಶಕ ಶಶಿರಾಜ್ ದೊರೆ, ‘ವಿಷ್ಣುವರ್ಧನ್ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿ ಈ ಟೆಲಿಚಿತ್ರವನ್ನು ಮಾಡಿದ್ದೇವೆ. ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್ ಅವರ ಜೀವನ-ಸಾಧನೆಯನ್ನು ಮುಂದಿನ ಜನರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಲ್ಲಿ ಆಗಿದೆ’ ಎಂದು ವಿವರಣೆ ನೀಡಿದರು.
ಇನ್ನು ‘ಸಿಂಹದ ಹಾದಿ’ ಟೆಲಿಫಿಲಂನಲ್ಲಿ ಶಶಿರಾಜ್ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್, ಮಂಜು, ಮಹೇಶ್ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.