‘ಗೇಮ್ ಚೇಂಜರ್’ ಕಟೌಟ್ ರೆಕಾರ್ಡ್!

‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್!
ಪ್ರಭಾಸ್-ಯಶ್-ಸೂರ್ಯ ರೆಕಾರ್ಡ್ ಬ್ರೇಕ್ ಮಾಡಿದ ಚೆರ್ರಿ…
ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಭಿಮಾನಿಗಳ ಸಂಭ್ರಮ
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನೆಮಾ ‘ಗೇಮ್ ಚೇಂಜರ್’ ಬಿಡುಗಡೆಗೆ ಸಜ್ಜಾಗಿದೆ. ಅಮೆರಿಕಾದ ನೆಲದಲ್ಲಿ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯಾವ ಚಿತ್ರತಂಡ ಮಾಡದ ದಾಖಲೆ ಮಾಡಿದೆ. ಇದೀಗ ಚೆರ್ರಿ ಅಭಿಮಾನಿಗಳು ಕೂಡ ‘ಗೇಮ್ ಚೇಂಜರ್’ ಸಿನೆಮಾ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.
ಚೆರ್ರಿ ಕಟೌಟ್ ನಿಲ್ಲಿಸಿ ಕೇಕೇ ಹಾಕೋದಕ್ಕೆ ರೆಡಿ…
ಜನವರಿ ಹತ್ತರಂದು ‘ಗೇಮ್ ಚೇಂಜರ್’ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ‘ಬೃಂದಾವನ ಕಾಲೋನಿ’ಯ ‘ವಜ್ರ ಗ್ರೌಂಡ್ಸ್’ನಲ್ಲಿ ರಾಮ್‌ಚರಣ್ ಅವರ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ‘ನಂದಿ ಲಿಂಕ್ಸ್ ಗ್ರೌಂಡ್’ನಲ್ಲಿ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ 236 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಅವರ ಅಭಿಮಾನಿಗಳು 215 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದರು. ಇನ್ನು ಕಳೆದ ವರ್ಷ ಪ್ರಭಾಸ್ ಅಭಿಮಾನಿಗಳು 230 ಅಡಿ ಕಟೌಟ್ ನಿಲ್ಲಿಸಿದ್ದು ಕೂಡ ದಾಖಲೆಯ ಪುಟಗಳಿಗೆ ಸೇರಿಕೊಂಡಿತ್ತು. ಇದೀಗ ರಾಮ್‌ಚರಣ್ ಅಭಿಮಾನಿಗಳು ಈ ಎಲ್ಲ ದಾಖಲೆಗಳನ್ನು ಮುರಿದಿದು, ಚೆರ್ರಿಯ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಕೇಕೇ ಹಾಕೋದಿಕ್ಕೆ ರೆಡಿಯಾಗಿದ್ದಾರೆ.
‘ಗೇಮ್ ಚೇಂಜರ್’ ದರ್ಶನಕ್ಕೆ ಮೆಗಾ ಫ್ಯಾನ್ಸ್ ಕಾತರ…
‘ಆರ್‌ಆರ್‌ಆರ್’ ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನೆಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ‘ಗೇಮ್ ಚೇಂಜರ್’ ಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಮತ್ತು ‘ಜೀ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಗೇಮ್ ಚೇಂಜರ್’ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್. ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಜ 10, 2025 ಕ್ಕೆ ಅದ್ಧೂರಿ ಬಿಡುಗಡೆ
‘ಗೇಮ್ ಚೇಂಜರ್’ ಸಿನೆಮಾಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್. ಯು. ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್. ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.