ಶಿವರಾತ್ರಿಗೆ ‘ರಾಕ್ಷಸ’ ಹೊರಬರಲಿದ್ದಾನೆ…

ಶಿವರಾತ್ರಿಗೆ ‘ರಾಕ್ಷಸ’ನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದರ್ಶನ
ತೆರೆಗೆ ಬರಲು ಪ್ರಜ್ವಲ್ ದೇವರಾಜ್ ಸಿನೆಮಾ ‘ರಾಕ್ಷಸ’ ರೆಡಿ…
ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ
ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಮತ್ತೊಂದು ಸಿನೆಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಅಂದಹಾಗೆ, ಈ ಸಿನೆಮಾದ ಹೆಸರು ‘ರಾಕ್ಷಸ’. ಈ ಹಿಂದೆ ಕನ್ನಡದಲ್ಲಿ ‘ರಾಕ್ಷಸ’ ಎಂಬ ಹೆಸರಿನ ಸಿನೆಮಾ ಬಂದಿದ್ದು, ಕೆಲವರಿಗೆ ಗೊತ್ತಿರಬಹುದು. ಈ ಬಾರಿ ಅದೇ ‘ರಾಕ್ಷಸ’ ಎಂಬ ಹೆಸರಿನ ಸಿನೆಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಅಂದಹಾಗೆ, ಈ ಹಿಂದೆ ತೆರೆಗೆ ಬಂದಿದ್ದ ‘ರಾಕ್ಷಸ’ ಸಿನೆಮಾಕ್ಕೂ ಈ ಸಿನೆಮಾಕ್ಕೂ ಯಾವುದೇ ಸಂಬಂಧವಿಲ್ಲ. ಸಿನೆಮಾದ ಕಥೆಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಸಿನೆಮಾಕ್ಕೆ ‘ರಾಕ್ಷಸ’ ಎಂಬ ಹೆಸರನ್ನು ಇಟ್ಟುಕೊಂಡು ಟೈಟಲ್ ಮರುಬಳಕೆ ಮಾಡಿಕೊಂಡಿದೆ.
ಯಾರು ಈ ‘ರಾಕ್ಷಸ’..?
ಇನ್ನು ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ‘ರಾಕ್ಷಸ’ ಸಿನೆಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಇಲ್ಲಿಯವರೆಗೂ ಕಾಣಿಸಿಕೊಂಡಿರದ ವಿಭಿನ್ನ ಅವತಾರದಲ್ಲಿ ಅಭಿನಯಿಸಿದ್ದಾರಂತೆ. ಸಾಮಾನ್ಯವಾಗಿ ‘ರಾಕ್ಷಸ’ ಚಿತ್ರದ ಟೈಟಲ್ ಕೇಳಿದ ತಕ್ಷಣ ಇದು ಬರೀ ಹಾರರ್ ಸಿನೆಮಾ ಅಂದುಕೊಳ್ಳುವುದು ಸಹಜ. ಆದರೆ ‘ರಾಕ್ಷಸ’ನಿಗೆ ಭಾವನಾತ್ಮಕ ಕಥೆಯ ಜೊತೆಗೆ ಟೈಮ್ ಲೂಪ್ ಕಾನ್ಸೆಪ್ಟ್ ಟಚ್ ಕೊಟ್ಟಿದ್ದಾರಂತೆ ನಿರ್ದೇಶಕ ಲೋಹಿತ್. ಈ ಹಿಂದೆ ಕನ್ನಡದಲ್ಲಿ ‘ಮಮ್ಮಿ’, ‘ದೇವಕಿ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ಈ ಬಾರಿ ‘ರಾಕ್ಷಸ’ ಸಿನೆಮಾವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಸಿನೆಮಾದ ಹೆಸರು ‘ರಾಕ್ಷಸ’ ಅಂತಿದ್ದರೂ ಈ ಸಿನೆಮಾದಲ್ಲಿ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಇವೆ. ಸಿನೆೆಮಾದ ಕಥೆ, ನಿರೂಪಣೆ ಮತ್ತು ಪಾತ್ರಗಳು ಎಲ್ಲವೂ ನೋಡುಗರ ಗಮನ ಸೆಳೆಯಲಿದೆ ಎಂಬುದು ಚಿತ್ರತಂಡದ ಮಾತು.
ಶಿವರಾತ್ರಿಗೆ ಥಿಯೇಟರ್‌ನಲ್ಲಿ ‘ರಾಕ್ಷಸ’ನ ಅಬ್ಬರ
ಈಗಾಗಲೇ ಶೂಟಿಂಗ್ ಮುಗಿಸಿ, ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ‘ರಾಕ್ಷಸ’ ಚಿತ್ರತಂಡ, ಇದೀಗ ಅಧಿಕೃತವಾಗಿ ಸಿನೆಮಾದ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಸದ್ಯ ಚಿತ್ರತಂಡ ನೀಡಿರುವ ಮಾಹಿತಿಯಂತೆ, ‘ರಾಕ್ಷಸ’ ಸಿನೆಮಾ ಇದೇ ಶಿವರಾತ್ರಿಯಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ‘ರಾಕ್ಷಸ’ ಸಿನೆಮಾದಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರೊಂದಿಗೆ ಶೋಭಾರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ರಾಕ್ಷಸ’ ಸಿನೆಮಾದ ಶೇಕಡಾ 80ರಷ್ಟು ಶೂಟಿಂಗ್ ಅನ್ನು ‘ರಾಮೋಜಿ ಫಿಲ್ಮಂ ಸಿಟಿ’ ಯಲ್ಲಿ ನಡೆದಿರುವುದು ವಿಶೇಷ. ಉಳಿದಂತೆ ರಾಮೇಶ್ವರಂ, ಗೋವಾ, ಬೆಂಗಳೂರಿನಲ್ಲಿ ‘ರಾಕ್ಷಸ’ ಸಿನೆಮಾದ ಉಳಿದ ಭಾಗದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಕಥೆಗೆ ತಕ್ಕಂತೆ ಸಾಕಷ್ಟು ರಿಚ್ ಆಗಿ ‘ರಾಕ್ಷಸ’ನ ಮೇಕಿಂಗ್ ಮಾಡಲಾಗಿದ್ದು, ‘ರಾಕ್ಷಸ’ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಪ್ರಜ್ವಲ್ ವಿಭಿನ್ನ ಪಾತ್ರದ ಮೇಲೆ ಚಿತ್ರತಂಡದ ನಿರೀಕ್ಷೆ
‘ಶಾನ್ವಿ ಎಂಟರ್‌ಟೈನ್ವೆಂಟ್’ ನಡಿ ದೀಪು ಬಿ. ಎಸ್ ನಿರ್ಮಾಣ ಮಾಡುತ್ತಿದ್ದು, ನವೀನ್ ಹಾಗೂ ಮಾನಸ ಕೆ. ಸಹ ನಿರ್ಮಾಣ ಮಾಡಿದ್ದಾರೆ. ಜೇಬಿನ್ ಪಿ. ಜೋಕಬ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ವರುಣ್ ಉನ್ನಿ ಸಂಗೀತ ನಿರ್ದೇಶಕ, ಅವಿನಾಶ್ ಬಸುತ್ಕರ್ ಹಿನ್ನಲೆ ಸಂಗೀತ, ರವಿಚಂದ್ರನ್ ಸಿ. ಸಂಕಲನ ‘ರಾಕ್ಷಸ’ ಸಿನಿಮಾಕ್ಕಿದೆ. ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಜ್ವಲ್, ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ‘ರಾಕ್ಷಸ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಭರವಸೆಯ ಮಾತು. ಒಟ್ಟಾರೆ ಸದ್ಯ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ‘ರಾಕ್ಷಸ’ ತೆರೆಮೇಲೆ ಹೇಗಿರಲಿದ್ದಾನೆ ಎಂಬುದು ಇದೇ ಶಿವರಾತ್ರಿ ಹಬ್ಬದ ವೇಳೆಗೆ ಗೊತ್ತಾಗಲಿದೆ.