ಹೊಸಬರ ‘ರಾವಣಾಪುರ’ ಟ್ರೇಲರ್ ರಿಲೀಸ್

ಹೊರಬಂತು ‘ರಾವಣಾಪುರ’ ಟ್ರೇಲರ್
ಇದೇ ಜನವರಿ 17ಕ್ಕೆ ಸಿನೆಮಾ ಬಿಡುಗಡೆ
ಟ್ರೇಲರ್ ಬಿಡುಗಡೆ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ
2025 ರ ಆರಂಭದಲ್ಲಿಯೇ ಒಂದಷ್ಟು ಹೊಸಬರ ಸಿನೆಮಾಗಳು ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಭರದ ತಯಾರಿ ಮಾಡಿಕೊಳ್ಳುತ್ತಿವೆ. ಇಂಥದ್ದೇ ಒಂದು ಹೊಸ ಸಿನೆಮಾ ‘ರಾವಣಾಪುರ’. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ರಾವಣಾಪುರ’ ಸಿನೆಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರತಂಡ ‘ರಾವಣಾಪುರ’ ಸಿನೆಮಾದ ಮೊದಲ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಬೆಂಗಳೂರಿನ ‘ರೇಣುಕಾಂಬ ಸ್ಟುಡಿಯೋ’ದಲ್ಲಿ ಇತ್ತೀಚಿಗೆ ನೆರವೇರಿದ ‘ರಾವಣಾಪುರ’ ಸಿನೆಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ ಸದಸ್ಯರು ಸಿನೆಮಾದ ಟ್ರೇಲರ್ ಬಿಡುಗಡೆಗೊಳಿಸಿ, ‘ರಾವಣಾಪುರ’ ಸಿನೆಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ನಿಜ ಘಟನೆಯ ಸಿನೆಮಾವಂತೆ..!
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ‘ರಾವಣಾಪುರ’ ಚಿತ್ರದ ನಿರ್ದೇಶಕ ಕುಮಾರ್ ಎಂ. ಬಾವಗಳ್ಳಿ, ‘ಈ ಸಿನೆಮಾ ಟೆಕ್ನಿಕಲ್ ಆಗಿ ತುಂಬಾ ಸ್ಟ್ರಾಂಗ್ ಆಗಿ ಮಾಡಿದ್ದೇವೆ. ಹಳೆ ವಿಷಯವನ್ನು ಇವತ್ತಿನ ಪೀಳಿಗೆಗೆ ಹೋಲುವಂತೆ ಚಿತ್ರ ಮಾಡಿದ್ದೇವೆ. ನನ್ನ ಸ್ನೇಹಿತರೊಬ್ಬರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದನ್ನು ತೆಗೆದುಕೊಂಡು ಈ ಸಿನೆಮಾ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. ಪ್ರತಿಯೊಂದು ಚಿತ್ರವು ಗೆಲ್ಲಬೇಕು ಅಂತಾ ಪ್ರತಿಯೊಬ್ಬ ನಿರ್ದೇಶಕರು ಬರುತ್ತಾರೆ. ನಾನು ಕೂಡ ಅದೇ ಭರವಸೆಯನ್ನು ಇಟ್ಟುಕೊಂಡು ಈ ಸಿನೆಮಾ ಮಾಡಿದ್ದೇನೆ’ ಎಂದರು.
ಹೊಸ ಪ್ರತಿಭೆಗಳ ಸಮಾಗಮ
‘ರಾವಣಾಪುರ’ ಸಿನೆಮಾದಲ್ಲಿ ರತ್ನನ್ ಕಲ್ಯಾಣ್, ರಕ್ಷಾ, ದಿಲೀಪ್ ಕುಮಾರ್ ಎಂ, ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಎ. ಪಿ ಶ್ರೀನಾಥ್, ಸೂರ್ಯ ಆರ್. ಎನ್, ಮಂಜುನಾಥ್ ಎಲ್, ವಿಶಾಲ್ ಸಂಜಯ್ ಮತ್ತು ರಾಜೇಶ್ವರಿ ಸೇರಿದಂತೆ ಹಲವು ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್’ ಬ್ಯಾನರ್ ನಡಿ ಎಲ್. ನಾಗಭೂಷಣ ‘ರಾವಣಾಪುರ’ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ‘ರಾವಣಾಪುರ’ ಸಿನೆಮಾದ ಹಾಡುಗಳಿಗೆ ಪ್ರಭು ಸಂಗೀತ ಸಂಯೋಜಿಸಿದ್ದು, ಸಿನೆಮಾಕ್ಕೆ ಆನಂದ್ ಇಳಯರಾಜ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಅಂದಹಾಗೆ, ನೈಜ ಘಟನೆಯಿಂದ ಸ್ಪೂರ್ತಿ ಪಡೆದಿದೆ ಎನ್ನಲಾಗುತ್ತಿರುವ ‘ರಾವಣಾಪುರ’ ಸಿನೆಮಾ ಇದೇ 2025ರ ಜನವರಿ 17ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.