Pop Corner

‘ತೀರ್ಥರೂಪ ತಂದೆಯವರಿಗೆ’ ರಚನಾ ಇಂದರ್ ಪತ್ರ!

‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ರಚನಾ ಇಂದರ್ ನಾಯಕಿ

‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಹೊಸ ಸಿನೆಮಾ

‘ಅಕ್ಷರ’ ಹೆಸರಿನಲ್ಲಿ ಹೊಸ ಪ(ಪಾ)ತ್ರ

‘ತೀರ್ಥರೂಪ ತಂದೆಯವರಿಗೆ’ – ಹೀಗೊಂದು ಹೆಸರಿನ ಚಿತ್ರ ತೆರೆಗೆ ಬರುತ್ತಿರುವುದು ಕೆಲವರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದೆ ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಟೈಟಲ್‌ ಅನ್ನು ಘೋಷಿಸಿದ್ದ ಚಿತ್ರತಂಡ, ಇದೀಗ ಈ ಸಿನೆಮಾದ ನಾಯಕಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ‘ತೀರ್ಥರೂಪ ತಂದೆಯವರಿಗೆ’ ಸಿನೆಮಾಕ್ಕೆ ನಾಯಕಿಯಾಗಿ ರಚನಾ ಇಂದರ್‌ ಆಯ್ಕೆಯಾಗಿದ್ದಾರೆ.

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾದಲ್ಲಿ ಹಿರಿಯ ನಟ ಸಿತಾರಾ, ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಚಿತ್ರತಂಡ ನಾಯಕಿಯ ಪಾತ್ರವನ್ನು ಪರಿಚಯಿಸುವ ಪೋಸ್ಟರ್‌ ಒಂದನ್ನು ಬಿಡುಗಡೆಗೊಳಿಸಿ ನಾಯಕಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.

‘ಹೆಂಗೆ ನಾವು’ ಅಂತಾನೇ ಖ್ಯಾತಿ ಪಡೆದಿರುವ ಉದಯೋನ್ಮುಖ ನಟಿ ರಚನಾ ಇಂದರ್ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾದಲ್ಲಿ ಅಕ್ಷರ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ‘ಗುಪ್ಪೆಡಂತ ಮನಸು’ ಸೀರಿಯಲ್ ಖ್ಯಾತಿಯ ನಿಹಾರ್ ಮುಖೇಶ್ ಈ ಸಿನೆಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕ ನಿಹಾರ್ ಮುಖೇಶ್ ಅವರಿಗೆ ರಚನಾ ಇಂದರ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಕ್ಷರ ಪಾತ್ರದಲ್ಲಿ ರಚನಾರನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಪಕ್ಕಾ ಫ್ಯಾಮಿಲಿ ಕಥಾಹಂದರದ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಏಕಕಾಲದಲ್ಲಿ ಮೂಡಿ ಬರುತ್ತಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ಪ್ರಿಯಮೈನ ನಾನ್ನಕು’ ಎಂಬ ಶೀರ್ಷಿಕೆ ಇಡಲಾಗಿದೆ.

ನಾಲ್ಕನೇ ಹಂತದ ಚಿತ್ರೀಕರಣಕ್ಕೆ ತಯಾರಿ

ಸದ್ಯ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಮೈಸೂರು, ಕೊಚ್ಚಿ, ಮೂಡಿಗೆರೆ ಸುತ್ತಮುತ್ತ ಶೇಕಡಾ 50ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಂಕ್ರಾಂತಿ ಹಬ್ಬದ ಬಳಿಕ ನಾಲ್ಕನೇ ಹಂತದ ಚಿತ್ರೀಕರಣವನ್ನು ಮೂಡಿಗೆರೆಯಲ್ಲಿ ಮಾಡಲು ಪ್ಲಾನ್‌ ಮಾಡಿಕೊಂಡಿದೆ. ಆ ನಂತರ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಈ ಸಿನೆಮಾದ ಚಿತ್ರೀಕರಣ ನಡೆಯಲಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ.

ಈ ವರ್ಷದಲ್ಲಿ ತೆರೆಗೆ ಬರುವ ಯೋಚನೆ…

‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ನಡಿ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನೆಮಾಸ್’ ಬ್ಯಾನರ್‌ ಈ ಸಿನೆಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನೆಮಾಗೆ ದೀಪಕ್ ಯರಗೇರಾ ಛಾಯಾಗ್ರಹಣವಿದ್ದು, ಜೋ ಕೋಸ್ಟ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯೊಳಗೆ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಹಾಕಿಕೊಂಡಿದೆ ಚಿತ್ರತಂಡ.

Related Posts

error: Content is protected !!