ಫೆಬ್ರವರಿ 7ಕ್ಕೆ ‘ಗಜರಾಮ’ ರಿಲೀಸ್

ರಾಜವರ್ಧನ್ ನಟನೆಯ ‘ಗಜರಾಮ’ ಬಿಡುಗಡೆಗೆ ರೆಡಿ…
ಫೆ. 7ಕ್ಕೆ ಮಾಸ್ ಆಕ್ಷನ್ ಚಿತ್ರ ತೆರೆಗೆ ಎಂಟ್ರಿ
‘ಗಜರಾಮ’ನ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್
ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈಗಾಗಲೇ ‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ನಾಯಕ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ತಮ್ಮ ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸಿದ್ದಾರೆ. ಕಳೆದ ವರ್ಷ ‘ಹಿರಣ್ಯ’ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ರಾಜವರ್ಧನ್ ಈ ವರ್ಷ ‘ಗಜರಾಮ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
‘ಗಜರಾಮ’ನ ಮೇಲೆ ರಾಜವರ್ಧನ್ ನಿರೀಕ್ಷೆ…
ಹೌದು, ರಾಜವರ್ಧನ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ಗಜರಾಮ’ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, ‘ಗಜರಾಮ’ ಸಿನೆಮಾ ಇದೇ ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಗಜರಾಮ’ ಸಿನೆಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಾಯಕ ನಟ ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಪೊಲೀಸ್ ಪಾತ್ರದಲ್ಲಿ ಶಿಷ್ಯ ದೀಪಕ್ ನಟಿಸಿದರೆ, ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ‘ಗಜರಾಮ’ ಸಿನೆಮಾದಲ್ಲಿ ರಾಗಿಣಿ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ್ದಾರೆ.
‘ಗಜರಾಮ’ ಚಿತ್ರಕ್ಕೆ ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಗಜರಾಮ’ ಸಿನೆಮಾದ ಹಾಡುಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಧನಂಜಯ್ ಈ ಹಾಡುಗಳಿಗೆ ಕೊರಿಯೋಗ್ರಾಫಿ ಮಾಡಿದ್ದು, ಚಿನ್ಮಯ್ ಭಾವಿಕೆರೆ ಈ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
ಮಾಸ್-ಆಕ್ಷನ್ ಎಂಟರ್‌ಟೈನರ್ ‘ಗಜರಾಮ’
ಟೈಟಲ್, ಟೀಸರ್ ಹಾಗೂ ‘ಸಾರಾಯಿ ಶಾಂತಮ್ಮ…’ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಗಜರಾಮ’ ಸಿನೆಮಾವನ್ನು ಈ ಹಿಂದೆ ‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ‘ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್’ ಅಡಿಯಲ್ಲಿ ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಾಸ್-ಆಕ್ಷನ್ ಎಂಟರ್‌ಟೈನರ್ ಆಗಿರುವ ‘ಗಜರಾಮ’ ಚಿತ್ರಕ್ಕೆ ಸುನಿಲ್ ಕುಮಾರ್ ವಿ. ಎ ಆಕ್ಷನ್-ಕಟ್ ಹೇಳಿದ್ದಾರೆ.