ಚೊಚ್ಚಲ ತುಳು ಚಿತ್ರಕ್ಕೆ ‘ಜೈ’ ಎಂದ ಸುನೀಲ್ ಶೆಟ್ಟಿ!

‘ಜೈ’ ತುಳುಚಿತ್ರದ ಚಿತ್ರೀಕರಣಕ್ಕೆ ಸುನೀಲ್ ಶೆಟ್ಟಿ ಎಂಟ್ರಿ
ಸುನೀಲ್ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ
ಮೊದಲ ಬಾರಿಗೆ ತವರು ಭಾಷೆಯ ಚಿತ್ರಕ್ಕೆ ಸೈ ಎಂದ ಬಾಲಿವುಡ್ ನಟ
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ತುಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಇದೀಗ ಆ ಸುದ್ದಿ ಅಧಿಕೃತವಾಗಿ ಖಚಿತವಾಗಿದೆ. ಹೌದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಮೊದಲ ಬಾರಿಗೆ ‘ಜೈ’ ಎಂಬ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದೀಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ಸಿನೆಮಾದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.
ಇನ್ನು ಮೊದಲ ಬಾರಿಗೆ ತುಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರು ಮಂಗಳವಾರ (ಜ.14) ಮಂಗಳೂರಿಗೆ ಆಗಮಿಸಿದರು. ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ತುಳು ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದ ಸುನೀಲ್ ಶೆಟ್ಟಿ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ತುಳು ಚಿತ್ರದಲ್ಲಿ ನಟಿಸಲು ಕಾಲ ಕೂಡಿಬಂತು…
ಈ ವೇಳೆ ಮಾತನಾಡಿದ ಸುನೀಲ್ ಶೆಟ್ಟಿ ಅವರು, ‘ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸಲಿದ್ದೇನೆ. ಒಂದು ಉತ್ತಮ ಚಿತ್ರ ಸಿಕ್ಕಿದರೆ ತುಳುವಿನಲ್ಲಿ ಅಭಿನಯಿಸುತ್ತೇನೆ ಎಂದಿದ್ದೆ. ಇದೀಗ ಕಾಲ ಕೂಡಿ ಬಂದಿದೆ. ರೂಪೇಶ್ ಅವರ ಜೈ ಚಿತ್ರದಲ್ಲಿ ಪಾತ್ರ ವಹಿಸಲಿದ್ದೇನೆ. ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರದ ಬಗ್ಗೆ ನನಗೂ ಸಾಕಷ್ಟು ಖುಷಿಯಿದೆ’ ಎಂದರು.
ರೂಪೇಶ್ ಶೆಟ್ಟಿ ಪ್ರಯತ್ನಕ್ಕೆ ಫಲ ಸಿಕ್ಕಿತು!
ಇನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರನ್ನು ತುಳು ಚಿತ್ರರಂಗಕ್ಕೆ ಕರೆತರಬೇಕು ಎಂಬುದು ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ ಅವರ ಬಹುಕಾಲದ ಕನಸು. ತಮ್ಮ ಕನಸು ನನಸಾದ ಖುಷಿಯಲ್ಲಿದ್ದಾರೆ ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ. ಸುನೀಲ್ ಶೆಟ್ಟಿ ಅವರನ್ನು ತಮ್ಮ’ಜೈ’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಕರೆತಂದಿರುವುದರ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, ‘ಸುನೀಲ್ ಶೆಟ್ಟಿ ಅವರನ್ನು ತುಳುವಿಗೆ ಕರೆತರುವುದು ನಮ್ಮ ಬಹುಕಾಲದ ಕನಸಾಗಿತ್ತು. ನನ್ನ ನಿರ್ದೇಶನದಲ್ಲಿ ಮಾತ್ರ ಎಂದಲ್ಲ, ಅವರು ಬಂದರೆ ತುಳು ಚಿತ್ರರಂಗಕ್ಕೆ ಒಂದು ಉತ್ತಮ ಬೂಸ್ಟ್ ಸಿಕ್ಕಂತೆ ಆಗುತ್ತದೆ ಎಂದುಕೊಳ್ಳುತ್ತಿದ್ದೆ. ಈಗ ನನ್ನದೇ ನಿರ್ದೇಶನದ ‘ಜೈ’ ಸಿನೆಮಾದಲ್ಲಿ ಅವರು ನಟಿಸುತ್ತಿರುವುದು ಮತ್ತಷ್ಟು ಸಂತಸ ತಂದಿದೆ’ ಎಂದು ಹೇಳಿದರು.
‘ಜೈ’ ಚಿತ್ರದ ಮೇಲೆ ಗರಿಗೆದರಿದ ನಿರೀಕ್ಷೆ…
‘ಗಿರ್ಗಿಟ್’ ಮತ್ತು ‘ಸರ್ಕಸ್’ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ‘ಜೈ’ ಚಿತ್ರದ ಮೂಲಕ ತುಳು ಸಿನೆಮಾ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ‘ಆರ್‌ಎಸ್ ಸಿನಿಮಾಸ್’, ‘ಶೂಲಿನ್ ಫಿಲ್ಮ್ಸ್’ ಮತ್ತು ‘ಮುಗ್ರೋಡಿ ಪ್ರೊಡಕ್ಷನ್ಸ್’ ಬ್ಯಾನರ್ ನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಅವರು ನಿರ್ಮಾಣ ಮಾಡುತ್ತಿದ್ದು, ದೀಕ್ಷಿತ್ ಆಳ್ವ ಸಹ ನಿರ್ಮಾಪಕರಾಗಿದ್ದಾರೆ. ‘ಜೈ’ ಸಿನೆಮಾದಲ್ಲಿ ರೂಪೇಶ್ ಶೆಟ್ಟಿ ಅವರೊಂದಿಗೆ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ‘ಜೈ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.