‘ತುಪ್ಪದ ಹುಡ್ಗಿ’ ರಾಗಿಣಿ ದ್ವಿವೇದಿಗೆ ಬಿಗ್ ರಿಲೀಫ್!

ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು
ರಾಗಿಣಿ ವಿರುದ್ದದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ಕೊನೆಗೂ ಆರೋಪ ಮುಕ್ತಳಾದ ರಾಗಿಣಿ…
ಬೆಂಗಳೂರು: ಮಾದಕವಸ್ತು ಸೇವನೆ, ಮಾರಾಟ ಹಾಗೂ ಮೋಜಿನ ಕೂಟ (ರೇವ್ ಪಾರ್ಟಿ) ಆಯೋಜನೆ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಶಾಂತ ರಂಕ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಏಕ ಸದಸ್ಯ ಪೀಠದಿಂದ ಮಹತ್ವದ ತೀರ್ಪು
ತಮ್ಮ ವಿರುದ್ದ ಮಾಡಲಾಗಿರುವ ಆರೋಗಳು ಸತ್ಯಕ್ಕೆ ದೂರವಾಗಿದ್ದು, ಆರೋಪ ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಡಬೇಕು ಮತ್ತು ಈ ಪ್ರಕರಣ ರದ್ದುಪಡಿಸುವಂತೆ ಕೋರಿ ರಾಗಿಣಿ ದ್ವಿವೇದಿ ಹಾಗೂ ಪ್ರಶಾಂತ ರಂಕ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ರಾಗಿಣಿಗೆ ಬಿಗ್ ರಿಲೀಫ್
ಸಹ ಆರೋಪಿಗಳ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಗಳನ್ನು ಹೊರತುಪಡಿಸಿ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ಅವರು ಮೋಜು ಕೂಟಗಳನ್ನು ಆಯೋಜಿಸಿದ್ದರು ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬುದಕ್ಕೆ ಪ್ರಾಸಿಕ್ಯೂಷನ್‌ನಲ್ಲಿ ಯಾವುದೇ ಭೌತಿಕ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂದಿರುವ ನ್ಯಾಯಾಲಯ, ಈ ಸಂಬಂಧ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ಅವರ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿ, ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
‘ತುಪ್ಪದ ಹುಡುಗಿ’ಫುಲ್ ಖುಷ್
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ರಾಗಿಣಿ ದ್ವಿವೇದಿ ಅವರಿಗೆ ಈ ಪ್ರಕರಣದಿಂದ ಮುಕ್ತಿ ಸಿಕ್ಕಿದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಾಗಿಣಿ ದ್ವಿವೇದಿ, ‘ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿತ್ತು. ಅದರಂತೆ ನನಗೆ ಕೊನೆಗೂ ನ್ಯಾಯ ಸಿಕ್ಕಿದೆ. ಈ ಪ್ರಕರಣದಲ್ಲಿ ವಿನಾ ಕಾರಣ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಕೊನೆಗೂ ಸತ್ಯಕ್ಕೆ ಜಯವಾಗಿದೆ. ಸತ್ಯವನ್ನು ಹೆಚ್ಚು ಸಮಯ ಮುಚ್ಚಿಡಲು ಸಾಧ್ಯವಿಲ್ಲ. ನನ್ನ ವಿರುದ್ದ ಮಾಡಲಾಗಿದ್ದ ಎಲ್ಲಾ ಥರದ ಆರೋಪಗಳಿಗೂ ಈಗ ಉತ್ತರ ಸಿಕ್ಕಿದೆ. ಕೊನೆಗೂ ಕಷ್ಟದ ಕಾಲದಿಂದ ಹೊರಬಂದಿದ್ದೇನೆ’ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.