‘ದೊಡ್ಮನೆ ಹುಡ್ಗ’ ಆಯ್ತು.., ಈಗ ‘ದೊಡ್ಮನೆ ಸೊಸೆ’..!

‘ಸಂಕ್ರಾಂತಿ’ಯಂದು ‘ದೊಡ್ಮನೆ ಸೊಸೆ’ ಚಿತ್ರದ ಶೀರ್ಷಿಕೆ ಅನಾವರಣ
ಆಸ್ಕರ್ ಕೃಷ್ಣ ನಿರ್ದೇಶನದ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್…
ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಸಾ. ರಾ ಗೋವಿಂದು
ಕೆಲ ವರ್ಷಗಳ ಹಿಂದೆ ‘ದೊಡ್ಮನೆ ಹುಡ್ಗ’ ಎಂಬ ಸಿನೆಮಾ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ‘ದೊಡ್ಮನೆ ಸೊಸೆ’ ಎಂಬ ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಈ ಸಿನೆಮಾಕ್ಕೆ ‘ದೊಡ್ಮನೆ ಸೊಸೆ’ ಅಂಥ ಹೆಸರಿದ್ದರೂ, ಈ ಸಿನೆಮಾಕ್ಕೂ ‘ದೊಡ್ಮನೆ ಹುಡ್ಗ’ ಸಿನೆಮಾಕ್ಕೂ ಯಾವುದೇ ಸಂಬಂಧವಿಲ್ಲ. ಸಿನೆಮಾದ ಕಥಾಹಂದರಕ್ಕೆ ಸೂಕ್ತ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನೆಮಾಕ್ಕೆ ‘ದೊಡ್ಮನೆ ಸೊಸೆ’ ಎಂದು ಹೆಸರಿಟ್ಟಿದೆ.
ಕನ್ನಡದಲ್ಲಿ ಈಗಾಗಲೇ ಆರು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ ‘ದೊಡ್ಮನೆ ಸೊಸೆ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ಡಾ. ಸುನಿಲ್ ಕುಮಾರ್ ಆರ್. ಎಂ ಅವರ ಪುತ್ರ ತೇಜ್ ವಿನಯ್. ಎಸ್ ‘ಮಾನ್ಯ ಸಿನಿ ಕ್ರಿಯೇಷನ್ಸ್’ ಲಾಂಚನದಲ್ಲಿ ‘ದೊಡ್ಮನೆ ಸೊಸೆ’ ಚಿತ್ರವನ್ನು ನಿರ್ಮಿಸುತ್ತಿದ್ದು, ಈಗಾಗಲೇ ಸದ್ದಿಲ್ಲದೆ ‘ದೊಡ್ಮನೆ ಸೊಸೆ’ ಸಿನೆಮಾದ ಸ್ಕ್ರಿಪ್ಟ್ ಕೆಲಸಗಳೂ ಪೂರ್ಣಗೊಂಡಿದೆ. ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ‘ದೊಡ್ಮನೆ ಸೊಸೆ’ ಸಿನೆಮಾವನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಸಿನೆಮಾದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ದೊಡ್ಡವರ ಕೈಯಿಂದ ಹೊರಬಂತು ‘ದೊಡ್ಮನೆ ಸೊಸೆ’ ಟೈಟಲ್ ಪೋಸ್ಟರ್
ವರ್ಷದ ಮೊದಲ ಹಬ್ಬ ಸಂಕ್ರಾಂತಿ ಯಂದು ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ. ರಾ. ಗೋವಿಂದು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷರಾದ ಎಂ. ನರಸಿಂಹಲು ಸೇರಿದಂತೆ ಚಿತ್ರರಂಗದ ಹಲವು ಹಿರಿಯರ ಸಮ್ಮುಖದಲ್ಲಿ ‘ದೊಡ್ಮನೆ ಸೊಸೆ’ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಹಿರಿಯ ನಿರ್ಮಾಪಕ ಸಾ. ರಾ. ಗೋವಿಂದು, ‘ಪ್ರತಿ ಹೆಣ್ಣು ಮಗಳೂ ಒಂದು ಮನೆಗೆ ಸೊಸೆಯಾಗಿ ಪ್ರವೇಶ ನೀಡುತ್ತಾಳೆ, ಆ ಮನೆಗೆ ಬರುವ ಸೊಸೆಯ ವ್ಯಕ್ತಿತ್ವ ಮತ್ತು ನಡತೆಯು ಇಡೀ ಮನೆಯ ಗೌರವ ಹಾಗೂ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣು ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು. ಆಸ್ಕರ್ ಕೃಷ್ಣ ಅವರ ಚಿತ್ರದ ಕಥೆಯ ಪಾತ್ರವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ, ಮುರಿದ ಮನೆ, ಮನಗಳ ಪುನಃಶ್ಚೇತನಕ್ಕೆ ಸ್ಪೂರ್ತಿಯಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಫೆಬ್ರವರಿಗೆ ಶೂಟಿಂಗ್… ಏಪ್ರಿಲ್‌ಗೆ ರಿಲೀಸ್..!
‘ದೊಡ್ಮನೆ ಸೊಸೆ’ ಚಿತ್ರಕ್ಕೆ ಆಸ್ಕರ್ ಕೃಷ್ಣ ಅವರೇ ಕಥೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ನಿತೀಶ್. ವಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಮೈಸೂರು ಸೋಮು ಛಾಯಾಗ್ರಹಣ, ಕೌಶಿಕ್ ಕಿರಣ್ ಸಂಕಲನವಿದೆ. ಸದ್ಯ ಚಿತ್ರದ ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದ್ದು, ‘ದೊಡ್ಮನೆ ಸೊಸೆ’ಯ ಪಾತ್ರವನ್ನು ಯಾರು ಮಾಡಲಿದ್ದಾರೆ? ಎಂಬ ಕುತೂಹಲವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು ‘ಇದೇ ಫೆಬ್ರವರಿ ಮೊದಲ ವಾರದಿಂದ ‘ದೊಡ್ಮನೆ ಸೊಸೆ’ ಚಿತ್ರೀಕರಣ ಪ್ರಾರಂಭವಾಗಲಿದ್ದು, ಒಂದೇ ಶೆಡ್ಯೂಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು’ ಎಂದು ನಿರ್ಮಾಪಕ ತೇಜ್ ವಿನಯ್ ತಿಳಿಸಿದ್ದಾರೆ.