ಕನ್ನಡದ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ

ಬಣ್ಣದ ಬದುಕಿನ ಯಾತ್ರೆ ಮುಗಿಸಿದ ಸರಿಗಮ ವಿಜಿ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
ರಂಗಭೂಮಿ, ಕಿರುತೆರೆ, ಹಿರಿತೆರೆ ಎಲ್ಲದಕ್ಕೂ ಹೊಂದಿಕೊಂಡಿದ್ದ ನಟ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ರಂಗನಿರ್ದೇಶಕ ಸರಿಗಮ ವಿಜಿ ಬುಧವಾರ (ಜ. 15ರಂದು) ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರಿಗಮ ವಿಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಜಿ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸರಿಗಮ ವಿಜಿ ಬುಧವಾರ (ಜ. 15ರಂದು) ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುವಾರ (ಜ.16ರಂದು) ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಿ ಕುಟುಂಬದ ಮೂಲಗಳು ತಿಳಿಸಿದೆ.
ರಂಗಭೂಮಿಯಿಂದ ಚಿತ್ರರಂಗದತ್ತ ವಿಜಿ ಪಯಣ…
ಇನ್ನು ಆರಂಭದಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿಜಿ ತಮ್ಮ ನಿರ್ದೇಶನದ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ನಿರ್ದೇಶಿಸಿದ್ದು, ಅದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಬರೋಬ್ಬರಿ 1,300ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ಅದಾದ ನಂತರ ಇವರು ವಿಜಿ ರಂಗಭೂಮಿ, ಕಿರುತೆರೆ ಮತ್ತು ಸಿನೆಮಾ ಎಲ್ಲೆಡೆ ಸರಿಗಮ ವಿಜಿ ಎಂದೇ ಜನಪ್ರಿಯರಾಗಿದ್ದರು.
ನಾಲ್ಕೂವರೆ ದಶಕಗಳ ಅಭಿನಯ ಯಾನ…
1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳುವಳದ ಮಡಿಲಲ್ಲಿ’ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಜಿ ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿನಯದ ಜೊತೆ ಜೊತೆಗೇ ಸುಮಾರು 80 ಚಿತ್ರಗಳಿಗೆ ವಿಜಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ ಸುಮಾರು 2,400 ಧಾರಾವಾಹಿ ಸಂಚಿಕೆಗಳ ನಿರ್ದೇಶನ ಮಾಡಿದ್ದ ವಿಜಿ ಕಿರುತೆರೆಯಲ್ಲೂ ತೆರೆಮುಂದೆ ಮತ್ತು ತೆರೆಹಿಂದೆ ಕೆಲಸ ಮಾಡಿದ್ದರು. ಹಾಸ್ಯ ಪಾತ್ರಗಳಿಂದ ತೆರೆಮೇಲೆ ಜನಪ್ರಿಯವಾಗಿದ್ದ ವಿಜಿ, ಟೈಗರ್ ಪ್ರಭಾಕರ್ ಜತೆಗಿನ ಸಿನೆಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ‘ಡಕೋಟಾ ಪಿಕ್ಚರ್’ ಚಿತ್ರದಲ್ಲಿ ನಟಿಸಿದ್ದ ವಿಜಿ ಕಳೆದ ಕೆಲ ವರ್ಷಗಳಿಂದ ಯಾವ ಸಿನೆಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ.