ಏಪ್ರಿಲ್ 10ಕ್ಕೆ ‘ವಿದ್ಯಾಪತಿ’ ತೆರೆಗೆ

‘ವಿದ್ಯಾಪತಿ’ ಆಗಮನಕ್ಕೆ ಮುಹೂರ್ತ ಫಿಕ್ಸ್…
‘ಟಾಕ್ಸಿಕ್’ ಬರಬೇಕಿದ್ದ ದಿನದಂದು ಬರುತ್ತಿದೆ ನಾಗಭೂಷಣ್ ಹೊಸ ಸಿನೆಮಾ
ಏ. 10ಕ್ಕೆ ‘ವಿದ್ಯಾಪತಿ’ ಅವತಾರದಲ್ಲಿ ನಾಗಭೂಷಣ್ ದರ್ಶನ…
ಕಳೆದ ವರ್ಷ ‘ಟಗರುಪಲ್ಯ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಾಗಭೂಷಣ್, ಈ ಬಾರಿ ‘ವಿದ್ಯಾಪತಿ’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡಲು ತಯಾರಾಗಿದ್ದಾರೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ವಿದ್ಯಾಪತಿ’ ಈಗ ಅಧಿಕೃತವಾಗಿ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದ್ದಾನೆ.
ಸಂಕ್ರಾಂತಿಯಂದು ‘ಡಾಲಿ ಪಿಕ್ಚರ್ಸ್’ ಕಡೆಯಿಂದ ಅಪ್ಡೇಟ್…
ಪ್ರತಿವರ್ಷದಂತೆ, ಈ ಬಾರಿಯೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ಸಿನೆಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಳ್ಳುತ್ತಿವೆ. ಅದರಂತೆ, ಈಗ ‘ವಿದ್ಯಾಪತಿ’ ಸಿನೆಮಾ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ. ಕಳೆದ ವರ್ಷ ಸಂಕ್ರಾಂತಿ ಹಬ್ಬಕ್ಕೆ ‘ವಿದ್ಯಾಪತಿ’ ಸಿನೆಮಾವನ್ನು ಅನೌನ್ಸ್ ಮಾಡಿದ್ದ ನಟ ಕಂ ನಿರ್ಮಾಪಕ ಡಾಲಿ ಧನಂಜಯ್, ಈ ಬಾರಿಯ ಸುಗ್ಗಿ ಹಬ್ಬಕ್ಕೆ ‘ವಿದ್ಯಾಪತಿ’ ಆಗಮನದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ವಿಶೇಷವಾದ ವಿಡಿಯೋ ಮೂಲಕ ‘ವಿದ್ಯಾಪತಿ’ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವ ಡಾಲಿ ಧನಂಜಯ್, ಇದೇ ಏಪ್ರಿಲ್ 10ರಂದು ‘ವಿದ್ಯಾಪತಿ’ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
‘ಡಾಲಿ ಪಿಕ್ಚರ್ಸ್’ನ ನಾಲ್ಕನೇ ಚಿತ್ರ ‘ವಿದ್ಯಾಪತಿ’
‘ವಿದ್ಯಾಪತಿ’ ಚಿತ್ರ ನಟ ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಚಿತ್ರವಾಗಿದೆ. ಕಳೆದ ವರ್ಷ ‘ಟಗರು ಪಲ್ಯ’ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದ ನಾಗಭೂಷಣ್ ‘ವಿದ್ಯಾಪತಿ’ ಚಿತ್ರದಲ್ಲಿ ಕರಾಟೆ ಕಿಂಗ್ ಅವತಾರವೆತ್ತಿದ್ದಾರೆ. ಆಕ್ಷನ್-ಕಾಮಿಡಿ ಕಥಾಹಂದರ ಹೊಂದಿರುವ ‘ವಿದ್ಯಾಪತಿ’ ಚಿತ್ರದಲ್ಲಿ ಕರಾಟೆ ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ‘ವಿದ್ಯಾಪತಿ’ ಚಿತ್ರದಲ್ಲಿ ನಾಯಕ ನಟ ನಾಗಭೂಷಣ್ ಅವರಿಗೆ ಮಲೈಕಾ ಟಿ ವಸುಪಾಲ್ ನಾಯಕಿಯಾಗಿ ಜೋಡಿಯಾಗಿದ್ದಾರೆ.
ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನೆಮಾಕ್ಕೆ ಆಕ್ಷನ್-ಕಟ್ ಹೇಳುವುದರ ಜೊತೆಗೆ ಸಿನಿಮಾಗೆ ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ನಿಭಾಯಿಸಿದ್ದಾರೆ. ‘ವಿದ್ಯಾಪತಿ’ ಚಿತ್ರಕ್ಕೆ ಲವಿತ್ ಛಾಯಾಗ್ರಹಣವಿದ್ದು, ಡಾಸ್ಮೋಡ್ ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ‘ವಿದ್ಯಾಪತಿ’ ಸಿನೆಮಾಕ್ಕಿದೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಇದೇ 2025ರ ಏಪ್ರಿಲ್ 10ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನೆಮಾ ಬಿಡುಗಡೆಯಾಗಬೇಕಿತ್ತು. ಆದರೆ ಆ ಸಿನೆಮಾ ಇನ್ನೂ ನಿರ್ಮಾಣ ಹಂತದಲ್ಲಿರುವುದರಿಂದ, ಸಿನೆಮಾದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಇದೀಗ ‘ಟಾಕ್ಸಿಕ್’ ಸಿನೆಮಾ ಬಿಡುಗಡೆಯಾಗಲು ಮೊದಲು ನಿಗದಿಯಾಗಿದ್ದ ದಿನದಂದು ಅಂದರೆ ಏಪ್ರಿಲ್ 10ಕ್ಕೆ ‘ವಿದ್ಯಾಪತಿ’ ಸಿನೆಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.