ಸ್ಯಾಂಡಲ್ ವುಡ್ ‘ಉಪಾಧ್ಯಕ್ಷ’ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’

ಎ. ಪಿ. ಅರ್ಜುನ್ ನಿರ್ಮಾಣದಲ್ಲಿ ‘ಲಕ್ಷ್ಮೀ ಪುತ್ರ’ನಾದ ಚಿಕ್ಕಣ್ಣ
‘ಉಪಾಧ್ಯಕ್ಷ’ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ಚಿಕ್ಕಣ್ಣ ನಾಯಕ
ಎ. ಪಿ. ಅರ್ಜುನ್ ನಿರ್ಮಾಣದ ಮೂರನೇ ಸಿನೆಮಾಕ್ಕೆ ಚಿಕ್ಕಣ್ಣ ಹೀರೋ
ಕಳೆದ ಬಾರಿ ‘ಉಪಾಧ್ಯಕ್ಷ’ ಸಿನೆಮಾದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಚಿಕ್ಕಣ್ಣ ಈ ಬಾರಿ ‘ಲಕ್ಷ್ಮೀಪುತ್ರ’ನಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ‘ಉಪಾಧ್ಯಕ್ಷ’ ಸಿನೆಮಾದ ಬಳಿಕ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಮತ್ತೊಂದು ಸಿನೆಮಾ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಈ ಸಿನೆಮಾಕ್ಕೆ ‘ಲಕ್ಷ್ಮೀಪುತ್ರ’ ಎಂದು ಟೈಟಲ್ ಇಡಲಾಗಿದ್ದು, ಸಿನೆಮಾದ ಮೊದಲ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ‘ರಾಟೆ’ಯಂತಹ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನೆಮಾಗಳನ್ನು ನಿರ್ದೇಶಿಸಿರುವ ಎ. ಪಿ. ಅರ್ಜುನ್, ತಮ್ಮದೇ ‘ಎ. ಪಿ ಅರ್ಜುನ್ ಫಿಲಂಸ್’ ಬ್ಯಾನರಿನಡಿ ‘ಕಿಸ್’, ‘ಅದ್ಧೂರಿ ಲವರ್ಸ್’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೀಗ ಇದೇ ‘ಎ. ಪಿ ಅರ್ಜುನ್ ಫಿಲಂಸ್’ ಬ್ಯಾನರಿನಡಿ ಮೂರನೇ ಸಿನೆಮಾವಾಗಿ ‘ಲಕ್ಷ್ಮೀಪುತ್ರ’ ನಿರ್ಮಾಣವಾಗುತ್ತಿದೆ.
‘ಲಕ್ಷ್ಮೀಪುತ್ರ’ನಿಗೆ ವಿಜಯ್ ಎಸ್. ಸ್ವಾಮಿ ನಿರ್ದೇಶನ
‘ಎ. ಪಿ ಅರ್ಜುನ್ ಫಿಲಂಸ್’ ಬ್ಯಾನರಿನಡಿ ಬರ್ತಿರುವ ಮೂರನೇ ಸಿನೆಮಾಕ್ಕೆ ‘ಲಕ್ಷ್ಮೀಪುತ್ರ’ ಎಂಬ ಟೈಟಲ್ ಇಡಲಾಗಿದ್ದು, ಈ ಚಿತ್ರಕ್ಕೆ ಎ. ಪಿ. ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ‘ಲಕ್ಷ್ಮೀಪುತ್ರ’ನಾಗಿ ಸ್ಯಾಂಡಲ್ ವುಡ್ ‘ಉಪಾಧ್ಯಕ್ಷ’ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಎ. ಪಿ ಅರ್ಜುನ್ ಅವರ ಜೊತೆ ಹಲವು ಸಿನೆಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಿಜಯ್ ಎಸ್. ಸ್ವಾಮಿ ಈ ಸಿನೆಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
‘ಎ. ಪಿ ಅರ್ಜುನ್ ಫಿಲಂಸ್’ ಬ್ಯಾನರಿನಡಿ ಮೂರನೇ ಸಿನೆಮಾ ‘ಲಕ್ಷ್ಮೀಪುತ್ರ’ನನ್ನು ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ‘ಲಕ್ಷ್ಮೀಪುತ್ರ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಕೆ. ರವಿವರ್ಮಾ ಸಾಹಸ ನಿರ್ದೇಶನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ‘ಲಕ್ಷ್ಮೀಪುತ್ರ’ ಚಿತ್ರಕ್ಕಿದೆ. ‘ಲಕ್ಷ್ಮೀಪುತ್ರ’ ಚಿತ್ರಕ್ಕೆ ಎ. ಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆಯುತ್ತಿದ್ದಾರೆ. ರಾಜೇಶ್ ರಾವ್ ಸಹ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿ ಬರಲಿದೆ.
ಇದೇ ಜ. 24ಕ್ಕೆ ‘ಲಕ್ಷ್ಮೀಪುತ್ರ’ನಿಗೆ ಮುಹೂರ್ತ
ಈಗಾಗಲೇ ‘ಲಕ್ಷ್ಮೀಪುತ್ರ’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಜನವರಿ 2025ರಂದು ‘ಲಕ್ಷ್ಮೀಪುತ್ರ’ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ‘ಲಕ್ಷ್ಮೀಪುತ್ರ’ ಚಿತ್ರದಲ್ಲಿ ಚಿಕ್ಕಣ್ಣ ಅವರೊಂದಿಗೆ ಅಭಿನಯಿಸಲಿರುವ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಮುಹೂರ್ತದ ವೇಳೆಗೆ ‘ಲಕ್ಷ್ಮೀಪುತ್ರ’ನ ಜೊತೆಗಿರುವ ಇತರ ಕಲಾವಿದರು ಮತ್ತು ತಂತ್ರಜ್ಞರ ಪೂರ್ಣ ವಿವರ ಗೊತ್ತಾಗಲಿದೆ.