Telewalk

ಕಿರುತೆರೆಯಿಂದ ಬೆಳ್ಳಿತೆರೆಯತ್ತ ಬ್ರೋ ಗೌಡ ಶಮಂತ್…

‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಬ್ರೋ ಗೌಡ ಈಗ ಸಿನಿಮಾ ಹೀರೋ..

ಕನ್ನಡದ ಮೊದಲ ಝಾಂಬಿ ಸಿನೆಮಾಗೆ ಆನಂದ ರಾಜ್ ಸಾರಥಿ

ಕಿರುತೆರೆಯಿಂದ ಹಿರಿತೆರೆಗೆ ಬರಲು ಬ್ರೋ ಗೌಡ ರೆಡಿ

ಕನ್ನಡ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿಯಾಗಿ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದ, ಆ ಬಳಿಕ ಕಲರ್ಸ್‌ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಉರೂಫ್‌ ಶಮಂತ್ ಈಗ ಹೀರೋ ಆಗಿ ಕಿರುತೆರೆಯಿಂದ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ. ಹೌದು, ಸದ್ಯ ಕಿರುತೆರೆಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ  ಬ್ರೋ ಗೌಡ ಶಮಂತ್ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಶಮಂತ್ ಗೆ ಆಕ್ಷನ್-ಕಟ್ ಹೇಳ್ತಿದ್ದಾರೆ ಆನಂದ ರಾಜ್

ಇನ್ನು ಮೊದಲ ಬಾರಿಗೆ ಕಿರುತೆರೆಯಿಂದ ಹಿರಿತೆರೆಗೆ ಬರುತ್ತಿರುವ ಶಮಂತ್‌ ಅವರ ಚೊಚ್ಚಲ ಸಿನೆಮಾಕ್ಕೆ ಎಂ. ಆನಂದ ರಾಜ್‌ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ರಾಘು’, ‘ಶೆಫ್ ಚಿದಂಬರ’ದಂತಹ ವಿಭಿನ್ನ ಸಿನೆಮಾಗಳನ್ನು ನಿರ್ದೇಶನ ಮಾಡಿದ್ದ ಎಂ. ಆನಂದ್ ರಾಜ್ ಈಗ ಬ್ರೋ ಗೌಡ ಶಮಂತ್‌ ಅವರನ್ನು ಹಿರಿತೆರೆಗೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅಂದಹಾಗೆ, ಇನ್ನೂ ಹೆಸರಿಡದ ಇದು ಕನ್ನಡದ ಮೊದಲ ಝಾಂಬಿ ಸಿನೆಮಾ ಎಂದು ಹೇಳಲಾಗುತ್ತಿದೆ. ‘ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್‌ಗಳು ಇರುತ್ತವೆ. ಹಾಲಿವುಡ್‌ ಸಿನೆಮಾಗಳಲ್ಲಿ ಇರುವಂತಹ ಆಕ್ಷನ್ ಅನ್ನು ಈ ಸಿನೆಮಾದಲ್ಲಿ ನೋಡಬಹುದು. ಹಾಗಾಗಿ, ಇದನ್ನು ವೈಲೆಂಟ್ ಆಕ್ಷನ್ ಡ್ರಾಮಾ ಅಂತ ಕರೆಯಬಹುದು’ ಎನ್ನುತ್ತಾರೆ ನಿರ್ದೇಶಕ ಆನಂದ್.

ಏಪ್ರಿಲ್‌ನಿಂದ ಶೂಟಿಂಗ್‌ ಶುರು…

ಇನ್ನು ‘ಬ್ರೋ ಮೀಡಿಯಾ’ ಮತ್ತು ‘ಸನ್ ರೈಸ್ ಕ್ಯಾಮೆರಾಸ್ ಪ್ರೊಡಕ್ಷನ್’ ನಡಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸದ್ಯದ ಮಟ್ಟಿಗೆ ‘ಪ್ರೊಡಕ್ಷನ್-1’ ಅಂತಾ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಕೊಡಗು ಸುತ್ತಮುತ್ತ, ಅದರಲ್ಲೂ ಮುಖ್ಯವಾಗಿ, ಕಾಡುಗಳಲ್ಲಿ ಹೆಚ್ಚು ಶೂಟಿಂಗ್ ಇರಲಿದೆ. ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾ ಹಿಡಿಯುತ್ತಿದ್ದು, ವಿಜೇತ್ ಚಂದ್ರ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಡ್ರಾಮಾ ಕಥೆಗೆ ಎಂ. ಆನಂದ್ ರಾಜ್ ಹಾರರ್ ಟಚ್ ಕೊಟ್ಟಿದ್ದಾರೆ. ಉಳಿದಂತೆ ಈ ಸಿನೆಮಾದ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಒಟ್ಟಾರೆ ಕಿರುತೆರೆಯಿಂದ ಹಿರಿತೆರೆಗೆ ಸಖತ್‌ ಜೋಶ್‌ನಲ್ಲಿ ಬರಲು ರೆಡಿಯಾಗಿರುವ ಬ್ರೋ ಗೌಡ ಶಮಂತ್‌ ಬಿಗ್‌ ಸ್ಕ್ರೀನ್‌ನಲ್ಲಿ ಎಷ್ಟರ ಮಟ್ಟಿಗೆ ಸಿನಿಪ್ರಿಯರ ಮನ ಗೆಲ್ಲಲಿದ್ದಾರೆ ಎಂಬುದು ಈ ಸಿನೆಮಾ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Related Posts

error: Content is protected !!