‘ಸಮುದ್ರ ಮಂಥನ’ಕ್ಕೆ ಸಕಲ ಸಿದ್ಧತೆ

‘ಒಂದು ಶಿಕಾರಿಯ ಕಥೆ’ ತಂಡದ ಹೊಸಕಥೆ ‘ಸಮುದ್ರ ಮಂಥನ’
ಯಶವಂತ ಕುಮಾರ್ – ಮಂದಾರ ಬಟ್ಟಲಹಳ್ಳಿ ಜೋಡಿಯ ಹೊಸಚಿತ್ರ
ಪ್ರೀ- ಪ್ರೊಡಕ್ಷನ್ ಹಂತದಲ್ಲಿ ‘ಸಮುದ್ರ ಮಂಥನ’
2020 ರಲ್ಲಿ ಬಿಡುಗಡೆಯಾಗಿ ತೆರೆಗೆ ಬಂದಿದ್ದ ‘ಒಂದು ಶಿಕಾರಿಯ ಕಥೆ’ ಚಿತ್ರ ಹಲವರಿಗೆ ಗೊತ್ತಿರಬಹುದು. ಸಚಿನ್ ಶೆಟ್ಟಿ ಎಂಬ ಯುವ ನಿರ್ದೇಶಕ ಈ ಸಿನೆಮಾವನ್ನು ನಿರ್ದೇಶಿಸಿ ತೆರೆಗೆ ತಂದಿದ್ದರು. ಬಿಡುಗಡೆಯಾಗಿ ತೆರೆಗೆ ಬಂದ ‘ಒಂದು ಶಿಕಾರಿಯ ಕಥೆ’ ಚಿತ್ರಕ್ಕೆ ಸಿನಿಪ್ರಿಯರು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಈ ಸಿನೆಮಾದ ನಿರ್ದೇಶಕ ಸಚಿನ್ ಶೆಟ್ಟಿ ಸದ್ದಿಲ್ಲದೆ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ ‘ಸಮುದ್ರ ಮಂಥನ’ ಎಂಬ ಟೈಟಲ್ ಇಡಲಾಗಿದ್ದು, ಇದೀಗ ಈ ಸಿನೆಮಾದ ಟೈಟಲ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಇನ್ನು ‘ಸಮುದ್ರ ಮಂಥನ’ ಎಂಬ ಕುತೂಹಲಕಾರಿ ಟೈಟಲ್‌ನೊಂದಿಗೆ ತೆರೆಗೆ ಬರುತ್ತಿರುವ ಈ ಸಿನೆಮಾದಲ್ಲಿ ಒಂದು ಸಸ್ಪೆನ್ಸ್- ಥಿಲ್ಲರ್ ಕಥೆಯನ್ನು ತೆರೆಮೇಲೆ ಹೇಳಲಾಗುತ್ತಿದೆಯಂತೆ. ಯುವ ಪ್ರತಿಭೆಗಳಾದ ಯಶವಂತ ಕುಮಾರ್ ಹಾಗೂ ಮಂದಾರ ಬಟ್ಟಲಹಳ್ಳಿ ಜೋಡಿಯಾಗಿ ಈ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಕನ್ನಡದಲ್ಲಿ ‘ಆಚಾರ್ ಆಂಡ್ ಕೋ’, ‘ಓಲ್ಡ್ ಮಾಂಕ್’ ಮುಂತಾದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ಕಳೆದ ವರ್ಷ ಬಿಡುಗಡೆಯಾಗಿ ಯಶಸ್ಸು ಕಂಡ ‘ಬ್ಲಿಂಕ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಂದಾರ ಬಟ್ಟಲಹಳ್ಳಿ ‘ಸಮುದ್ರ ಮಂಥನ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಇನ್ನು ಯುವನಟ ಯಶವಂತ ಕುಮಾರ್, ‘ಸಮುದ್ರ ಮಂಥನ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ವಿಕಿಪೀಡಿಯಾ’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಯಶವಂತ್, ಈಗ ಮತ್ತೊಮ್ಮೆ ನಾಯಕ ನಟನಾಗಿ ‘ಸಮುದ್ರ ಮಂಥನ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಸದ್ಯ ‘ಸಮುದ್ರ ಮಂಥನ’ ಚಿತ್ರದ ಪ್ರೀ- ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಚಿತ್ರತಂಡ ಸಕಲ ಸಿದ್ಧತೆಯೊಂದಿಗೆ ಚಿತ್ರೀಕರಣಕ್ಕೆ ಹೊರಡಲಿದೆ. ‘ರಫ್ ಕಟ್ ಪ್ರೊಡಕ್ಷನ್ಸ್’ ಹಾಗೂ ‘ಎ ಸ್ಕ್ವೇರ್ ಪಿಕ್ಚರ್ಸ್’ ಮತ್ತು ‘ಆರುಷ್ ಪಿಕ್ಚರ್ಸ್’ ಜಂಟಿ ಸಹಭಾಗಿತ್ವದಲ್ಲಿ ‘ಸಮುದ್ರ ಮಂಥನ’ ಚಿತ್ರದ ನಿರ್ಮಾಣ ಕಾರ್ಯ ನಡೆಯಲಿದೆ. ಉಳಿದಂತೆ ‘ಸಮುದ್ರ ಮಂಥನ’ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್-ಮೇ ವೇಳೆಗೆ ಸಿನೆಮಾದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ ಚಿತ್ರತಂಡ.
ಕರಾವಳಿ ಕಥನ ‘ಸಮುದ್ರ ಮಂಥನ’…
‘ಇದೊಂದು ಸಸ್ಪೆನ್ -ಥ್ರಿಲ್ಲರ್ ಸಿನೆಮಾವಾಗಿದ್ದು ಕಥೆಯು ಕರಾವಳಿ ಪ್ರದೇಶದ ಹಿನ್ನೆಲೆಯಲ್ಲಿ ನಡೆಯಲಿದ್ದು ಭಿನ್ನ ನಿರೂಪಣೆಯಲ್ಲಿ ಮೂಡಿ ಬರಲಿದೆ. ಮನರಂಜನೆಯು ಬೇರೆಯದೆ ಮಜಲು ಪಡೆಯುತ್ತಿರುವ ಇಂದಿನ ಯುಗದಲ್ಲಿ ಪ್ರೇಕ್ಷಕರು ಖಂಡಿತ ಗಾಢವಾದ ಕಥೆಯನ್ನು ಚಿತ್ರದಿಂದ ಅಪೇಕ್ಷಿಸುತ್ತಾರೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮೃದ್ಧವಾದ ಕಥೆ, ಚಿತ್ರಕತೆಗಾಗಿ ವರ್ಷಗಳ ಕಾಲ ಶ್ರಮಿಸಿ ಈಗ ಚಿತ್ರ ಮಾಡಲು ಹೊರಟಿದ್ದೇವೆ’ ಎನ್ನುವುದು ಚಿತ್ರದ ನಿರ್ದೇಶಕ, ಬರಹಗಾರ ಸಚಿನ್ ಶೆಟ್ಟಿ ಅಭಿಪ್ರಾಯ.
‘ಸಮುದ್ರ ಮಂಥನ’ ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡುವ ಸಿನೆಮಾವಾಗಲಿದೆ. ಈ ಚಿತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರಿಗೂ ಈ ಚಿತ್ರ ಅವರ ವೃತ್ತಿಜೀವನದ ಪ್ರಮುಖ ಘಟ್ಟವಾಗಲಿದೆ ಎಂಬ ನಂಬಿಕೆ ಇದೆ. ಮನರಂಜನೆ ಜೊತೆಗೆ ನಮ್ಮ ಯೋಚನೆಗೂ ಕೆಲಸ ಕೊಡುವ ಚಿತ್ರ ಇದಾಗಲಿದೆ ಎನ್ನುತ್ತಾರೆ ಸಚಿನ್ ಶೆಟ್ಟಿ.