ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಫಸ್ಟ್ ಸಾಂಗ್ ರಿಲೀಸ್

ಪವರ್‌ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಗುಡ್ ನ್ಯೂಸ್..
‘ಹರಿಹರ ವೀರಮಲ್ಲು-1’ ಫಸ್ಟ್ ಸಾಂಗ್ ರಿಲೀಸ್
ಆಂಧ್ರ ಡಿಸಿಎಂ ಸ್ಥಾನಕ್ಕೇರಿದ ಬಳಿಕ ತೆರೆಗೆ ಬರುತ್ತಿರುವ ಪವನ್ ಮೊದಲ ಚಿತ್ರ
ತೆಲುಗು ನಟ, ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸದ್ಯ ಸಿನೆಮಾಕ್ಕಿಂತ ರಾಜಕೀಯ ಅಂಗಳದಲ್ಲಿಯೇ ಹೆಚ್ಚು ಬಿಝಿಯಾಗಿದ್ದಾರೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ (ಡಿಸಿಎಂ) ಆದ ಮೇಲಂತೂ ಸಿನೆಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಪವನ್ ಕಲ್ಯಾಣ್ ಈಗ ಸಿನೆಮಾ ‘ಹರಿಹರ ವೀರಮಲ್ಲು’ ಎಂಬ ಬಹುನಿರೀಕ್ಷಿತ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ‘ಹರಿಹರ ವೀರಮಲ್ಲು’ ಸಿನೆಮಾ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಸದ್ಯ ‘ಹರಿಹರ ವೀರಮಲ್ಲು’ ಸಿನೆಮಾದ ಮೊದಲ ಭಾಗ ಇದೇ ಮಾರ್ಚ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಿನೆಮಾ ‘ಹರಿಹರ ವೀರಮಲ್ಲು-1’ ಸಿನೆಮಾದ ಪ್ರಚಾರದ ಮೊದಲ ಹಂತವಾಗಿ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.
‘ಹರಿಹರ ವೀರಮಲ್ಲು-1’ ಸಿನೆಮಾದ ಮೊದಲ ಹಾಡಿನ ಲಿರಿಕಲ್ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಪವನ್ ಕಲ್ಯಾಣ್ ಧ್ವನಿಯಲ್ಲಿ ಮೂಡಿಬಂದಿರುವ ಗೀತೆ
ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ‘ಹರಿಹರ ವೀರಮಲ್ಲು-1’ ಸಿನೆಮಾ ಬಿಡುಗಡೆಯಾಗುತ್ತಿದೆ. ಅದರಂತೆ, ‘ಹರಿಹರ ವೀರಮಲ್ಲು-1’ ಸಿನೆಮಾದ ಮೊದಲ ಹಾಡನ್ನು ಕೂಡ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಅನಾವರಣ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ, ಎಲ್ಲಾ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ ಈ ಗೀತೆಯನ್ನು ಸ್ವತಃ ಪವನ್ ಕಲ್ಯಾಣ್ ಅವರೇ ಹಾಡಿದ್ದಾರೆ. ಕನ್ನಡದಲ್ಲಿ ‘ಮಾತು ಕೇಳಯ್ಯ…’ ಎಂಬ ಸಾಲುಗಳಿಂದ ಶುರುವಾಗುವ ಜನಪದ ಶೈಲಿಯಲ್ಲಿ ಮೂಡಿಬಂದಿರುವ ಗೀತೆಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ವಿಜೇತ ಎಂ. ಎಂ. ಕೀರವಾಣಿ ಗೀತೆಗೆ ಟ್ಯೂನ್ ಹಾಕಿದ್ದಾರೆ.
ಮಾರ್ಚ್ 28ಕ್ಕೆ ‘ಹರಿಹರ ವೀರಮಲ್ಲು’ ಮೊದಲ ಭಾಗ ಬಿಡುಗಡೆ
‘ಹರಿಹರ ವೀರಮಲ್ಲು’ವಾಗಿ ಪವನ್ ಕಲ್ಯಾಣ್ ಸಿನೆಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಟ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಮಿಂಚಿದ್ದಾರೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬಂದಿದೆ. ಬಾಬಿ ಡಿಯೋಲ್, ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ ಮತ್ತು ನೋರಾ ಫತೇಹಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಾರ್ಚ್ 28ಕ್ಕೆ ‘ಹರಿಹರ ವೀರಮಲ್ಲು’ ಮೊದಲ ಭಾಗ ವಿಶ್ವಾದ್ಯಂತ ತೆರೆಗೆ ಬರ್ತಿದೆ.