‘ಏಳು ಗಿರಿಗಳ ಏಳು ಕಡಲಿನ…’ ಮೇಲೆ ‘ವಿಷ್ಣುಪ್ರಿಯಾ’ ಪ್ರೇಮಗೀತೆ

‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆ ಬಿಡುಗಡೆ
ಶ್ರೇಯಸ್ ಮಂಜು-ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಬಿಡುಗಡೆ ರೆಡಿ
ಪ್ರೇಮಗೀತೆ ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ವಿಷ್ಣುಪ್ರಿಯಾ’ ಚಿತ್ರ ಸುಮಾರು ಆರು ವರ್ಷಗಳ ಹಿಂದೆ ಶುರುವಾಗಿದ್ದು, ಕೆಲವರಿಗೆ ಗೊತ್ತಿರಬಹುದು. ಸುದೀರ್ಘ ಸಮಯ ತೆಗೆದುಕೊಂಡ ‘ವಿಷ್ಣುಪ್ರಿಯಾ’ ಚಿತ್ರ ಕೊನೆಗೂ ತನ್ನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಹೌದು, ಕಳೆದ ಆರು ವರ್ಷಗಳಿಂದ ‘ವಿಷ್ಣುಪ್ರಿಯಾ’ ಸಿನೆಮಾದ ಬಿಡುಗಡೆಯನ್ನು ಒಂದರ ಹಿಂದೊಂದು ಕಾರಣಗಳನ್ನು ನೀಡುತ್ತ ಮುಂದೂಡುತ್ತ ಬಂದಿದ್ದ ನಿರ್ಮಾಪಕ ಕೆ. ಮಂಜು ಕೊನೆಗೂ ಚಿತ್ರವನ್ನು ಇದೇ 2025ರ ಫೆ. 21ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದೀಗ ಮತ್ತೆ ‘ವಿಷ್ಣುಪ್ರಿಯಾ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದೆ. ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ‘ವಿಷ್ಣುಪ್ರಿಯಾ’ ಚಿತ್ರದ ಈ ಪ್ರೇಮಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ವಿಷ್ಣುಪ್ರಿಯಾ’ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಟ ಶ್ರೀಮುರುಳಿ ಅವರೊಂದಿಗೆ ನಟಿ ಸಪ್ತಮಿ ಗೌಡ, ನಿರ್ಮಾಪಕ ರಮೇಶ್ ರೆಡ್ಡಿ, ಗೀತ ಸಾಹಿತಿ ಕವಿರಾಜ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರಕ್ಕೆ ಶುಭ ಕೋರಿದರು.
‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಗೀತೆಯ ಲಿರಿಕಲ್ ವೀಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ವಿಷ್ಣುಪ್ರಿಯಾ’ ಚಿತ್ರದ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ, ‘ಕೆಲವು ಸಿನೆಮಾಗಳು ಇಷ್ಟವಾಗುತ್ತವೆ. ಕೆಲವು ಹತ್ತಿರವಾಗುತ್ತವೆ. ಈ ಸಿನೆಮಾ ಹತ್ತಿರವಾಗುತ್ತದೆ ಎಂದು ನಂಬಿದ್ದೇನೆ. ಶ್ರೇಯಸ್, ಪ್ರಿಯಾ ತೆರೆಮೇಲೆ ತುಂಬ ಅದ್ಭುತವಾಗಿ ಅಭಿನಯಿಸಿದ್ದಾರೆ. ಶ್ರೇಯಸ್ ಅವರಲ್ಲಿ ಬದ್ದತೆ ಇದೆ, ಸಾಧಿಸುವ ಉತ್ಸಾಹವಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದರು.
‘ವಿಷ್ಣುಪ್ರಿಯಾ’ ಪ್ರೇಮಕಹಾನಿ…
‘ವಿಷ್ಣುಪ್ರಿಯಾ’ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ. ಕೆ. ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ವಿ. ಕೆ. ಪ್ರಕಾಶ್ ಅವರಿಗೆ ‘ವಿಷ್ಣುಪ್ರಿಯಾ’ ಕನ್ನಡದಲ್ಲಿ ಎರಡನೇ ಚಿತ್ರ. ಸುಮಾರು ಮೂರು ದಶಕಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ವಿ. ಕೆ. ಪ್ರಕಾಶ್, ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದಾರೆ. ಇನ್ನು ‘ವಿಷ್ಣುಪ್ರಿಯಾ’ ಚಿತ್ರದ ಟೈಟಲ್ಲೇ ಹೇಳುವಂತೆ, ಚಿತ್ರದಲ್ಲಿ ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ ಎಂಬುದು ‘ವಿಷ್ಣುಪ್ರಿಯಾ’ ಚಿತ್ರತಂಡದ ವಿವರಣೆ. ಸಿನೆಮಾದ ಹೆಸರಿನಲ್ಲಿರುವಂತೆ, ಇದೊಂದು ಅಪ್ಪಟ ಪ್ರೇಮಕಥೆಯ ಚಿತ್ರ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂದು ಹೇಳುವ ‘ವಿಷ್ಣುಪ್ರಿಯಾ’ ಚಿತ್ರದಲ್ಲಿ ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ‘ವಿಷ್ಣುಪ್ರಿಯಾ’ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ‘ವಿಷ್ಣುಪ್ರಿಯಾ’ ಚಿತ್ರಕ್ಕೆ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಗೋಪಿಸುಂದರ್ ‘ವಿಷ್ಣುಪ್ರಿಯಾ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಸಾಕಷ್ಟು ಸಮಯ ತೆಗೆದುಕೊಂಡು ಅಮೆನಡಿಗೆಯಂತೆ ಥಿಯೇಟರಿಗೆ ಬರುತ್ತಿರುವ ‘ವಿಷ್ಣುಪ್ರಿಯಾ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ವಾಗಲಿದೆ ಎಂಬುದು ಇದೇ ಫೆಬ್ರವರಿ ವೇಳೆಗೆ ಗೊತ್ತಾಗಲಿದೆ.