ಬರ್ತ್ ಡೇ ಗೆ ‘ಲ್ಯಾಂಡ್‌ಲಾರ್ಡ್’ ಆದ್ರು ಸ್ಯಾಂಡಲ್‌ವುಡ್ ‘ಸಲಗ’

ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಹೊಸಚಿತ್ರ ಅನೌನ್ಸ್
ನಟ ದುನಿಯಾ ವಿಜಯ್ ಮುಂದಿನ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್
ಗ್ರಾಮೀಣ ಸೊಗಡಿನ, ಮಣ್ಣಿನ ಕಥೆ ‘ಲ್ಯಾಂಡ್‌ಲಾರ್ಡ್’ಗೆ ವಿಜಿಗೆ ನಾಯಕ
ಇದೇ ಜನವರಿ 20 ರಂದು ನಟ ಕಂ ನಿರ್ದೇಶಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಈ ಬಾರಿ ದುನಿಯಾ ವಿಜಯ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ ವಿಜಯ್, ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗದಿರುವ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಜೊತೆಗೆ ಆಚರಿಸಿಕೊಳ್ಳಲಾಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರವಾಗಿದ್ದರೂ, ಅಭಿಮಾನಿಗಳಿಗೆ ಹುಟ್ಟುಹಬ್ಬದ ವೇಳೆ ಖುಷಿ ನೀಡುವ ವಿಷಯವೊಂದನ್ನು ದುನಿಯಾ ವಿಜಯ್ ಹಂಚಿಕೊಂಡಿದ್ದಾರೆ.
ಫ್ಯಾನ್ಸ್‌ಗೆ ಸ್ಪೆಷಲ್ ಗಿಫ್ಟ್..!
ಹೌದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ದುನಿಯಾ ವಿಜಯ್ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ತಮ್ಮ ಮುಂದಿನ ಸಿನೆಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸ್ಯಾಂಡಲ್‌ವುಡ್ ‘ಸಲಗ’ ದುನಿಯಾ ವಿಜಯ್ ಫ್ಯಾನ್ಸ್‌ಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. ’ಭೀಮ’ ಸಿನೆಮಾದ ಹಿಟ್ ಬಳಿಕ ದುನಿಯಾ ವಿಜಯ್ ‘ಸಿಟಿ ಲೈಟ್ಸ್’ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಅವರ ಪುತ್ರಿ ಮೋನಿಷಾ ನಾಯಕಿಯಾಗಿ, ವಿನಯ್ ರಾಜಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದುನಿಯಾ ವಿಜಯ್ ಅಭಿನಯಿಸಲಿರುವ ಮುಂದಿನ ಹೊಸ ಸಿನೆಮಾ ಯಾವುದು ಎಂಬ ಪ್ರಶ್ನೆಗೆ ಇದೀಗ ‘ಲ್ಯಾಂಡ್‌ಲಾರ್ಡ್’ ಮೂಲಕ ಅಧಿಕೃತ ಉತ್ತರ ಸಿಕ್ಕಿದೆ.
ದುನಿಯಾ ವಿಜಿಗೆ ಜಡೇಶ ಹಂಪಿ ಆ್ಯಕ್ಷನ್-ಕಟ್
ಕನ್ನಡದಲ್ಲಿ ಈಗಾಗಲೇ ‘ರಾಜಹಂಸ’ ಸಿನೆಮಾದ ಮೂಲಕ ನಿರ್ದೇಶಕನಾಗಿ ಪರಿಚಯವಾಗಿರುವ ‘ಜಂಟಲ್‌ಮನ್’, ‘ಗುರುಶಿಷ್ಯರು’ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಭರವಸೆಯ ನಿರ್ದೇಶಕ ಜಡೇಶ್ ಕೆ. ಹಂಪಿ ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸುತ್ತಿರುವ ‘ಲ್ಯಾಂಡ್‌ಲಾರ್ಡ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಮತ್ತು ಜಡೇಶ ಕೆ. ಹಂಪಿ ಕಾಂಬಿನೇಶನ್‌ನಲ್ಲಿ ಹೊಸಚಿತ್ರ ಬರಲಿದೆ ಎಂದು ಹೇಳಲಾಗಿತ್ತಾದರೂ, ಈ ಸಿನೆಮಾದ ಕಥಾಹಂದರ, ಟೈಟಲ್ ಮತ್ತಿತರ ಮಾಹಿತಿಗಳು ಹೊರಬಂದಿರಲಿಲ್ಲ.
90ರ ದಶಕದ ಕಥೆಯಲ್ಲಿ ದುನಿಯಾ ವಿಜಿಗೆ ಮಾಸ್ ಲುಕ್
ಇದೀಗ ‘ಲ್ಯಾಂಡ್‌ಲಾರ್ಡ್’ ಸಿನೆಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ಪಂಚೆ ಮೇಲೆ ಕಟ್ಟಿಕೊಂಡು ಎರಡು ಕೈಗಳಲ್ಲಿ ಕೊಡಲಿಗಳನ್ನು ಹಿಡಿದುಕೊಂಡು ರಗಡ್ ಮತ್ತು ರಕ್ತಸಿಕ್ತವಾಗಿ ದುನಿಯಾ ವಿಜಿ ಕಾಣಿಸಿಕೊಂಡಿದ್ದಾರೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಕ್ಯಾಪ್ಷನ್ ಅನ್ನು ಸಿನೆಮಾದ ಟೈಟಲ್ ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್ ನೋಡದರೆ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆಯನ್ನೊಳಗೊಂಡ ಸಿನಿಮಾವೆಂದು ಗೊತ್ತಾಗುತ್ತದೆ. ‘ಕಾಟೇರ’ ಸಿನಿಮಾಕ್ಕೆ ಕಥೆ ಬರೆದಿದ್ದ ಜಡೇಶ್ ಕೆ. ಹಂಪಿ ‘ಲ್ಯಾಂಡ್‌ಲಾರ್ಡ್’ನಲ್ಲೂ ಅದೇ ರೀತಿಯ 90ರ ದಶಕದ ಕಥೆಯನ್ನು ಹೇಳಲಿದ್ದಾರೆ ಎನ್ನಲಾಗಿದೆ. ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಕೆ. ವಿ. ಸತ್ಯಪ್ರಕಾಶ್ ಹಾಗೂ ಪುತ್ರ ಸೂರಜ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ‘ಲ್ಯಾಂಡ್‌ಲಾರ್ಡ್’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಇದೇ ವರ್ಷ ಈ ಚಿತ್ರ ಸೆಟ್ಟೇರಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ‘ಲ್ಯಾಂಡ್‌ಲಾರ್ಡ್’ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.