‘ಅವನಿರಬೇಕಿತ್ತು’ ಚಿತ್ರದ ‘ಅಂದಕಾಲತ್ತಿಲ್ಲೆ…’ ಹಾಡು ರಿಲೀಸ್

‘ಅವನಿರಬೇಕಿತ್ತು’ ಚಿತ್ರಕ್ಕೆ ರೊರಿಂಗ್ ಸ್ಟಾರ್ ಸಾಥ್
‘ಅಂದಕಾಲತ್ತಿಲ್ಲೆ…’ ಹಾಡು ರಿಲೀಸ್ ಮಾಡಿದ ಶ್ರೀ ಮುರಳಿ
ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ನೋಡಿ ಕೊಂಡಾಡಿದ ‘ಬಘೀರ’
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಅವನಿರಬೇಕಿತ್ತು’ ಚಿತ್ರ ಸದ್ದಿಲ್ಲದೆ ತನ್ನ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ತನ್ನ ಟೈಟಲ್ ನಲ್ಲೆ ಸಿನಿಪ್ರಿಯರ ಗಮನ ಸೆಳೆದಿದ್ದ ‘ಅವನಿರಬೇಕಿತ್ತು’ ಚಿತ್ರತಂಡ ಇದೀಗ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಅದರ ಮೊದಲ ಭಾಗವಾಗಿ ಮೊದಲ ಹಾಡು ಬಿಡುಗಡೆಯಾಗಿದೆ. ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಇತ್ತೀಚೆಗೆ ‘ಅವನಿರಬೇಕಿತ್ತು’ ಚಿತ್ರದ ‘ಅಂದಕಾಲತ್ತಿಲ್ಲೆ…’ ಅನ್ನೋ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ಹಾಡನ್ನ ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಶ್ರೀಮುರಳಿ, ‘ಚಿತ್ರದ ಹಾಡು ವಿಶೇಷವಾಗಿ ಮೂಡಿಬಂದಿದ್ದು, ಕನ್ನಡ ಚಿತ್ರಪ್ರೇಮಿಗಳಿಗೆ ಈ ಹಾಡು ಇಷ್ಟವಾಗುವಂತಿದೆ. ಹೊಸಬರ ಈ ಚಿತ್ರದ ಹಾಡು ಮತ್ತು ಚಿತ್ರ ಎರಡಕ್ಕೂ ಯಶಸ್ಸು ಸಿಗಲಿ’ ಎಂದು ಶುಭ ಹಾರೈಸಿದರು.
ಹಳೆಗನ್ನಡ, ಹೊಸಗನ್ನಡ ಮೇಳೈಸಿ ಬಂದ ಹಾಡು…
ಇನ್ನು ಬಿಡುಗಡೆಯಾಗಿರುವ ‘ಅವನಿರಬೇಕಿತ್ತು’ ಚಿತ್ರದ ‘ಅಂದಕಾಲತ್ತಿಲ್ಲೆ…’ ಹಾಡು ಹಳೆಗನ್ನಡ ಮತ್ತು ಹೊಸಗನ್ನಡ ಎರಡನ್ನೂ ಮೇಳೈಸಿ ಮೂಡಿಬಂದಿದೆ. ನಿರ್ದೇಶಕ ಅಶೋಕ್ ಸಾಮ್ರಾಟ್, ಹಳೆಗನ್ನಡ ಹಾಗೂ ಹೊಸಗನ್ನಡ ಎರಡನ್ನೂ ಹದಗೊಳಿಸಿ ಉತ್ತಮವಾಗಿ ಸಾಹಿತ್ಯ ಬರೆದಿದ್ದಾರೆ. ಲೋಕಿ ತವಸ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಅಂದಕಾಲತ್ತಿಲ್ಲೆ…’ ಹಾಡಿಗೆ ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ‘ಝೇಂಕಾರ್ ಮ್ಯೂಸಿಕ್’ ಆಡಿಯೋ ಸಂಸ್ಥೆ ‘ಅವನಿರಬೇಕಿತ್ತು’ ಚಿತ್ರದ ಆಡಿಯೋ ಹಕ್ಕುಗಳನ್ನು ಕೊಂಡುಕೊಂಡಿದ್ದು, ಇದೀಗ ಈ ಚಿತ್ರದ ‘ಅಂದಕಾಲತ್ತಿಲ್ಲೆ…’ ಹಾಡು ‘ಝೇಂಕಾರ್ ಮ್ಯೂಸಿಕ್’ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
‘ಅವನಿರಬೇಕಿತ್ತು’ ಚಿತ್ರದ ‘ಅಂದಕಾಲತ್ತಿಲ್ಲೆ…’ ಹಾಡಿನ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಶೀಘ್ರದಲ್ಲಿಯೇ ‘ಅವನಿರಬೇಕಿತ್ತು’ ತೆರೆಗೆ…
‘ನೋವಿಕಾ ಸಿನಿ ಕ್ರೀಯೆಶನ್’ ಬ್ಯಾನರಿನಲ್ಲಿ ಮುರಳಿ ಬಿ. ಟಿ ಬಂಡವಾಳ ಹೂಡಿ ನಿರ್ಮಾಣ ಮಾಡಿರುವ ‘ಅವನಿರಬೇಕಿತ್ತು’ ಚಿತ್ರಕ್ಕೆ ಅಶೋಕ್ ಸಾಮ್ರಾಟ್ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದೇವರಾಜ್ ಪೂಜಾರಿ, ಪೃಥ್ವಿ ಮಾಲೂರ್ ‘ಅವನಿರಬೇಕಿತ್ತು’ ಚಿತ್ರಕ್ಕೆ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್, ಅನುರಾಧ ಭಟ್, ನವೀನ್ ಸಜ್ಜು ಮೊದಲಾದ ಗಾಯಕರು ಧ್ವನಿಯಾಗಿದ್ದಾರೆ. ಇನ್ನು ‘ಅವನಿರಬೇಕಿತ್ತು’ ಚಿತ್ರದಲ್ಲಿ ಸೌಮ್ಯ ಜಾನ್, ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್, ಭರತ್, ಲಕ್ಷ್ಮೀ ದೇವಮ್ಮ, ಮಂಜುನಾಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.