ಜ. 31ಕ್ಕೆ ಥಿಯೇಟರಿನಲ್ಲಿ ‘ಕಾಡುಮಳೆ’ ರಿಲೀಸ್

ತೆರೆಗೆ ಬರುತ್ತಿದೆ ‘ಬ್ರೈನ್ ಸ್ಕ್ಯಾಮಿಂಗ್’ ಚಿತ್ರ ‘ಕಾಡುಮಳೆ’
ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಪ್ರಯತ್ನವಂತೆ…
‘ಕಾಡುಮಳೆ’ ಎಂಬ ಭ್ರಮೆ-ವಾಸ್ತವಗಳ ನಡುವಿನ ಹೋರಾಟ
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ‘ಬ್ರೈನ್ ಸ್ಕ್ಯಾಮಿಂಗ್’ Brain Scamming ನ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಿರುವ ‘ಕಾಡುಮಳೆ’ ಚಿತ್ರ ಇದೇ ಜ. 31ರಂದು ಬಿಡುಗಡೆಯಾಗಿ ಥಿಯೇಟರಿಗೆ ಬರುತ್ತಿದೆ. ‘ಕಾಸ್ಮೋಸ್ ಮೂವೀಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ಕಾಡುಮಳೆ’ ಚಿತ್ರಕ್ಕೆ ಸಮರ್ಥ ನಿರ್ದೇಶನ ಮಾಡಿದ್ದು, ನಟ ಅರ್ಥ, ನಟಿ ಸಂಗೀತ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ‘ಕಾಡುಮಳೆ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚೆಗೆ ‘ಕಾಡುಮಳೆ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ದಟ್ಟ ಕಾನನದ ನಡುವೆ ಭ್ರಮೆ-ವಾಸ್ತವದ ಚಿತ್ರಣ
ಇನ್ನು ಚಿತ್ರತಂಡ ಹೇಳಿಕೊಂಡಿರುವಂತೆ, ‘ಕಾಡುಮಳೆ’ ಹಚ್ಚ -ಹಸಿರಿನ ವಾತಾವರಣದ ಮಧ್ಯೆ ಭ್ರಮೆ ಮತ್ತು ವಾಸ್ತವದ ಹೋರಾಟದ ಚಿತ್ರವಂತೆ. ಈ ಬಗ್ಗೆ ಮಾತನಾಡುವ ‘ಕಾಡುಮಳೆ’ ಚಿತ್ರದ ನಿರ್ದೇಶಕ ಸಮರ್ಥ, ‘ಸಿನೆಮಾ ಗೆಲ್ಲೋಕೆ ಒಂದೊಳ್ಳೆ ಕಥೆ ಇರ್ಬೇಕು ಅಂತಹದ್ದೆ ಕಥೆಯನ್ನು ಆಯ್ಕೆ ಮಾಡಿಕೊಂಡು ‘ಕಾಡುಮಳೆ’ ಸಿನೆಮಾ ಮಾಡಿದ್ದೀನಿ. ಈ ಪ್ರಕೃತಿಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವೇ ಇರಲ್ಲ, ಅದರಲ್ಲಿ ಒಂದು ಪ್ರಶ್ನೆಯೇ ಈ ‘ಕಾಡುಮಳೆ’. ಈ ಭೂಮಿ ಮೇಲೆ ಖಂಡಗಳು, ಸಮುದ್ರಗಳು, ಸ್ವರಗಳು, ವಾರ, ಎಲ್ಲವೂ 7 (ಏಳು) ಇದನ್ನೆ ಆಧಾರವಾಗಿಟ್ಟುಕೊಂಡು ಮಾಡಿರೋ ‘ಕಾಡುಮಳೆ’. ನಮ್ಮ ಸಿನೆಮಾದ ಸಬ್ ಟೈಟಲ್ ‘ಬ್ರೈನ್ ಸ್ಕ್ಯಾಮಿಂಗ್’ (Brain Scamming), ಯಾಕಂದ್ರೆ ಟೈಟಲ್ ಹೇಳುವಂತೆ ಕಾಡು ಅಂದ್ರೆ ಭ್ರಮೆ, ಮಳೆ ಅಂದ್ರೆ ರಿಯಾಲಿಟಿ. ಭ್ರಮೆ ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳೋಕಾಗದ ಸ್ಥಿತಿಯೇ ಬ್ರೈನ್ ಸ್ಕ್ಯಾಮಿಂಗ್’ ಎಂದು ವಿವರಣೆ ಕೊಡುತ್ತಾರೆ.
‘ಕಾಡುಮಳೆ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಮೊದಲ ಚಿತ್ರದ ಮೇಲೆ ನಟ ಹರ್ಷನ್ ನಿರೀಕ್ಷೆ
ಇನ್ನು ಮೊದಲ ಬಾರಿಗೆ ‘ಕಾಡುಮಳೆ’ ಮೂಲಕ ನಾಯಕನಟನಾಗಿ ಮಿಂಚಲಿರುವ ನಟ ಹರ್ಷನ್ (ಅರ್ಥ), ”ಕಾಡುಮಳೆ’ ನನ್ನ ಮೊದಲನೇ ಸಿನೆಮಾ. ಕಾಡುಮಳೆ ಇದು ಬರೀ ಸಿನೆಮಾವಲ್ಲ ಇದೊಂದು ಅದ್ಭುತ ಅನುಭವ. ನನ್ನ ಪಾತ್ರ ಆಧ್ಯಾತ್ಮ ಮತ್ತು ವಿಜ್ಞಾನ ಎರಡರ ಬಗ್ಗೆಯೂ ತಿಳಿದವನಾಗಿರುತ್ತಾನೆ. ಹಾಗಾಗಿ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆ. ಶೂಟಿಂಗ್ ಸಂದರ್ಭದಲ್ಲಿ ಆ ದಟ್ಟವಾದ ಕಾಡಿನ ವಾತಾವರಣದಲ್ಲಿ ಶೂಟ್ ಮಾಡೋದೆ ದೊಡ್ಡ ಚಾಲೆಂಜಿಂಗ್ ಆಗಿತ್ತು. ಕನ್ನಡದಲ್ಲಿ ಈ ರೀತಿ ಪ್ರಯತ್ನಗಳು ಮೊದಲು. ಈ ಸಿನೆಮಾದ ಭಾಗವಾಗಿದ್ದೇನೆ ಅನ್ನೋದೆ ಖುಷಿ. ನಮ್ಮ ಜನ ನಮ್ಮ ಕೈ ಹಿಡಿತಾರೆ ಅನ್ನೋ ನಂಬಿಕೆ ನನ್ನಲ್ಲಿ ಹೆಚ್ಚಾಗಿದೆ’ ಎಂದಿದ್ದಾರೆ.
‘ಕಾಡುಮಳೆ’ ಚಿತ್ರಕ್ಕೆ ರಾಜು ಎನ್. ಎಂ ಛಾಯಾಗ್ರಹಣ, ಮಹಾರಾಜ ಸಂಗೀತ ಸಂಯೋಜನೆಯಿದೆ. ಒಟ್ಟಾರೆ ಒಂದಷ್ಟು ವಿಷಯಗಳಿಗೆ ಸುದ್ದಿಯಾಗುತ್ತಿರುವ ‘ಕಾಡುಮಳೆ’ ಚಿತ್ರ ಹೇಗಿರಲಿದೆ ಎಂಬುದು ಇದೇ ಜನವರಿ 31ರಂದು ಗೊತ್ತಾಗಲಿದೆ.