ಚಿತ್ರೀಕರಣದತ್ತ ಹೊರಟ ‘ಲಕ್ಷ್ಮೀಪುತ್ರ’

‘ಉಪಾಧ್ಯಕ್ಷ’ ಬಳಿಕ ‘ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣ…
ಸೆಟ್ಟೇರಿತು ಚಿಕ್ಕಣ್ಣ – ಎ. ಪಿ. ಅರ್ಜುನ್ ಹೊಸ ಸಿನೆಮಾ ‘ಲಕ್ಷ್ಮೀಪುತ್ರ’
ಹೀರೋ ಆಗಿ ಚಿಕ್ಕಣ್ಣನ ಹೊಸ ಸಿನೆಮಾ ಆರಂಭ
‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ನಟ ಚಿಕ್ಕಣ್ಣ, ಈ ವರ್ಷ ‘ಲಕ್ಷ್ಮೀಪುತ್ರ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಸಿನೆಮಾಕ್ಕೆ ‘ಲಕ್ಷ್ಮೀಪುತ್ರ’ ಎಂದು ಹೆಸರಿಡಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಈ ಸಿನೆಮಾದ ಟೈಟಲ್ ಅಧಿಕೃತವಾಗಿ ಅನೌನ್ಸ್ ಆಗಿತ್ತು. ಇದೀಗ ‘ಲಕ್ಷ್ಮೀಪುತ್ರ’ ಸಿನೆಮಾದ ಮುಹೂರ್ತ ಕೂಡ ನೆರವೇರಿದ್ದು, ಚಿತ್ರದ ಚಿತ್ರೀಕರಣ ಕೂಡ ಅಧಿಕೃತವಾಗಿ ಆರಂಭವಾಗಿದೆ. ನಿರ್ದೇಶಕ ಮತ್ತು ನಿರ್ಮಾಪಕ ಎ. ಪಿ. ಅರ್ಜುನ್ ತಮ್ಮದೇ ನಿರ್ಮಾಣ ಸಂಸ್ಥೆ ‘ಎ. ಪಿ ಅರ್ಜುನ್ ಫಿಲಂಸ್’ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ‘ಲಕ್ಷ್ಮೀಪುತ್ರ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ನೆರವೇರಿದೆ. ಮೈಸೂರಿನ ಅರ್ಜುನ್ ಗೂರೂಜಿ ‘ಲಕ್ಷ್ಮೀಪುತ್ರ’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಶುಭ ಹಾರೈಸಿದರು.
ತಾಯಿ-ಮಗನ ಎಮೋಶನಲ್ ಕಥೆ
‘ಲಕ್ಷ್ಮೀಪುತ್ರ’ ಚಿತ್ರದ ಮುಹೂರ್ತದ ಬಳಿಕ ಮಾತನಾಡಿದ ನಿರ್ಮಾಪಕ ಎ. ಪಿ. ಅರ್ಜುನ್, ‘ಇದು ಕೋವಿಡ್ ಸಮಯದಲ್ಲಿ ಮಾಡಿದ ಕಥೆ. ‘ಲಕ್ಷ್ಮೀಪುತ್ರ’ ಚಿತ್ರದಲ್ಲಿ ತಾಯಿ-ಮಗನ ನಡುವಿನ ಭಾವನಾತ್ಮಕ ಕಥೆ ಇದೆ. ಪ್ರತಿಯೊಬ್ಬ ನೋಡಬೇಕಾದ ಎಮೋಷನ್ ಕಥೆ ಈ ಚಿತ್ರದಲ್ಲಿದೆ. ಭಾವನೆ-ಸಂಬಂಧ ಇಟ್ಕೊಂಡು ಬರೆದ ಕಥೆಯ ಮೇಲೆ ‘ಲಕ್ಷ್ಮೀಪುತ್ರ’ ಚಿತ್ರ ನಡೆಯುತ್ತದೆ. ಒಮ್ಮೆ ಚಿಕ್ಕಣ್ಣ ಸಿಕ್ಕಾಗ ಈ ಕಥೆ ಹೇಳಿದ್ದೆ. ‘ಉಪಾಧ್ಯಕ್ಷ’ ಆದಮೇಲೆ ಕಥೆ ಹೇಳಿದ್ರಲ್ಲ ಅದು ಮಾಡೋಣ ಎಂದು ಚಿಕ್ಕಣ್ಣ ಕೇಳಿದರು. ಹೀಗೆ ಶುರುವಾಗಿದ್ದು ‘ಲಕ್ಷ್ಮೀಪುತ್ರ’ ಚಿತ್ರಕ್ಕೆ ನಿರ್ಮಾಪಕಿ ನನ್ನ ಪತ್ನಿ. ಕೋ- ಪ್ರೊಡ್ಯೂಸರ್ ರವಿ ಕಿರಣ್. ನನ್ನ ಗೆಳೆಯ ವಿಜಯ್ ಸ್ವಾಮಿ ಚಿತ್ರದ ನಿರ್ದೇಶಕರು’ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ‘ಉಪಾಧ್ಯಕ್ಷ’, ಈ ವರ್ಷ ‘ಲಕ್ಷ್ಮೀಪುತ್ರ’…
‘ಲಕ್ಷ್ಮೀಪುತ್ರ’ ಚಿತ್ರದ ಮುಹೂರ್ತದ ಬಳಿಕ ಮಾತನಾಡಿದ ನಟ ಚಿಕ್ಕಣ್ಣ, ‘ಕಳೆದ ವರ್ಷದ ಜನವರಿಯಲ್ಲಿ ‘ಉಪಾಧ್ಯಕ್ಷ’ ರಿಲೀಸ್ ಆಗಿತ್ತು. ಈ ವರ್ಷದ ಜನವರಿಯಲ್ಲಿ ‘ಲಕ್ಷ್ಮೀಪುತ್ರ’ ಮುಹೂರ್ತ ಆಗಿದೆ. ಒಂದು ವರ್ಷವಾಯ್ತು ಒಂದು ಚಿತ್ರದಿಂದ ಇನ್ನೊಂದು ಚಿತ್ರ ಶುರುವಾಗಲು. ‘ಉಪಾಧ್ಯಕ್ಷ’ ಥಿಯೇಟರ್ ಗೆ ಇಡೀ ಕರ್ನಾಟಕ ಸುತ್ತಿದ ಆ ಸಮಯದಲ್ಲಿ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಸಿನೆಮಾ ನೋಡಲು ಬಂದಿದ್ದರು. ಆಗ ಅಂದುಕೊಂಡಿದ್ದು ನನ್ನ ನೋಡಲು ಫ್ಯಾಮಿಲಿ ಬರುತ್ತದೆ. ಹೀಗಾಗಿ ಮುಂದಿನ ಚಿತ್ರ ಒಳ್ಳೆ ಫ್ಯಾಮಿಲಿ ಕಥೆ ಮಾಡಬೇಕು ಎಂದಾಗ , ಆ ಹುಡುಕಾಟದಲ್ಲಿ ಸಿಕ್ಕಿದ್ದು ‘ಲಕ್ಷ್ಮೀಪುತ್ರ’. ಯೂತ್ಸ್ ಹಾಗೂ ಇಡೀ ಕುಟುಂಬ ನೋಡುವ ಸಿನೆಮಾ ಇದು. ಚಿತ್ರದಲ್ಲಿ ಒಂದು ಮೆಸೇಜ್ ಇದೆ’ ಎಂದು ಹೇಳಿದರು.
ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿರುವ ‘ಲಕ್ಷ್ಮೀಪುತ್ರ’ ಚಿತ್ರಕ್ಕೆ ಎ. ಪಿ. ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಇವರದ್ದೇ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ ಈ ಸಿನೆಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್. ಸ್ವಾಮಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿರುವ ‘ಲಕ್ಷ್ಮೀಪುತ್ರ’ನಿಗೆ ಕೆ. ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎ. ಪಿ. ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆ. ಎ. ಪಿ. ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಾಣ ಹಾಗೂ ರವಿ ಕಿರಣ್ ಕೋ- ಪ್ರೊಡ್ಯೂಸರ್ ಆಗಿ ಸಾಥ್ ಕೊಡುತ್ತಿರುವ ಚಿತ್ರದಲ್ಲಿ ತಾರಮ್ಮ, ಧರ್ಮಣ್ಣ ಕಡೂರ್ ಹಾಗೂ ಕುರಿ ಪ್ರತಾಪ್ ತಾರಾ ಬಳಗದಲ್ಲಿದ್ದಾರೆ.