Street Beat

‘ವಿ. ಕೆ. ಸ್ಟುಡಿಯೋಸ್’ ಕನ್ನಡ ಕಿರುಚಿತ್ರೋತ್ಸವ-2025 ಪ್ರಶಸ್ತಿ ಪ್ರಧಾನ

ಪವನ್‌ ಒಡೆಯರ್‌, ಧರ್ಮಣ್ಣ ಕಡೂರು ಸೇರಿದಂತೆ ಅನೇಕರು ಭಾಗಿ

ನವ ಪ್ರತಿಭೆಗಳ ಬೆನ್ನು ತಟ್ಟಿದ ಚಿತ್ರರಂಗದ ಗಣ್ಯರು

ಕನ್ನಡ ಚಿತ್ರರಂಗಕ್ಕೆ ಬರಲು ಹಾತೊರೆಯುತ್ತಿರುವ ರಾಜ್ಯದ ವಿವಿಧ ಭಾಗಗಳ ನವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ. ಕೆ. ಸ್ಟುಡಿಯೋಸ್’ ಆಯೋಜಿಸಿದ್ದ ‘ಕನ್ನಡ ಕಿರುಚಿತ್ರೋತ್ಸವ -2025’ ರ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ಬನಶಂಕರಿಯಲ್ಲಿರುವ ‘ಸುಚಿತ್ರ ಫಿಲ್ಮ್ ಅಂಡ್‌ ಕಲ್ಚರಲ್‌  ಸೊಸೈಟಿ’ಯಲ್ಲಿ ನಡೆದ ‘ವಿ. ಕೆ. ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ -2025’ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್, ನಟ ಧರ್ಮಣ್ಣ ಕಡೂರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ಕಿರು ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ವಿಜೇತರಾದ ಕಿರುಚಿತ್ರಗಳು ಮತ್ತು ಆ ಕಿರುಚಿತ್ರಗಳ ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಕಿರುಚಿತ್ರಗಳು ಸರಿ-ತಪ್ಪು ಪಾಠ ಕಲಿಸುತ್ತವೆ; ಪವನ್‌ ಒಡೆಯರ್‌ 

‘ವಿ. ಕೆ. ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ -2025’ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ ಮಾತನಾಡಿದ ನಿರ್ದೇಶಕ ಪವನ್‌ ಒಡೆಯರ್‌, ‘ಚಿತ್ರರಂಗಕ್ಕೆ ಬರಬೇಕು ಎಂಬುವವರಿಗೆ ಕಿರುಚಿತ್ರಗಳು ಮೊದಲ ಮೆಟ್ಟಿಲುಗಳಿದ್ದಂತೆ. ನಾನೂ ಕೂಡ ಕಿರುಚಿತ್ರದ ಮೂಲಕವೇ ಸಿನೆಮಾದ ಸರಿ-ತಪ್ಪುಗಳನ್ನು ಕಲಿತಿದ್ದು. ನಮ್ಮ ಆಲೋಚನೆಯನ್ನು ಸಿನೆಮಾ ಮಾಡಲು ಹೊರಟ ಕ್ಷಣವೇ ನಾವೆಲ್ಲರೂ ಗೆಲುವು ಪಡೆದಿದ್ದೇವೆ ಎಂದರ್ಥ. ಹಾಗಾಗಿ ಇಲ್ಲಿ ಪ್ರಶಸ್ತಿ ಬರದವರು ಬೇಸರಗೊಳ್ಳುವ ಪ್ರಮೇಯವಿಲ್ಲ. ಭವಿಷ್ಯದ ಅತ್ಯುತ್ತಮ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಇಂಥ ಕಿರುಚಿತ್ರಗಳ ಮೂಲಕ ಚಿತ್ರರಂಗಕ್ಕೆ ಬರಲಿ’ ಎಂದರು.

ಐವರು ಸಾಧಕರಿಗೆ ‘ಕನ್ನಡ ಸ್ಟಾರ್‌ ಐಕಾನ್‌ ಅವಾರ್ಡ್‌’

‘ವಿ. ಕೆ. ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ -2025’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಾಹಿತಿ ಎಸ್. ಶಿಶಿರಂಜನ್ (ಶಿಶಿರ), ಖ್ಯಾತ ಚಲನಚಿತ್ರ ನಟ ಧರ್ಮಣ್ಣ ಕಡೂರು ಸೇರಿದಂತೆ ಕನ್ನಡ ನಾಡು ನುಡಿಯ ಕೀರ್ತಿಪತಾಕೆ ಹಾರಿಸಿದ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ರಾಜ್ಯಮಟ್ಟದ ಪ್ರತಿಷ್ಟಿತ ‘ಕನ್ನಡ ಸ್ಟಾರ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಜೊತೆಗೆ 50ಕ್ಕೂ ಹೆಚ್ಚು ಕಿರುಚಿತ್ರಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 27 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ‘ನಮೋ ವೆಂಕಟೇಶ’ ಚಿತ್ರದ ಮೊದಲ ನೋಟದ ಪೋಸ್ಟರ್ ಅನ್ನು ಧರ್ಮಣ್ಣ ಕಡೂರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ‘ಸಮುದ್ರ ಮಂಥನ’ ಚಲನಚಿತ್ರದ ನಾಯಕ ನಟ ಯಶವಂತ್ ಹಾಗೂ ನಿರ್ದೇಶಕರಾದ ಸಚಿನ್ ಶೆಟ್ಟಿ ಹಾಗೂ ‘ವಿ. ಕೆ. ಸ್ಟುಡಿಯೋಸ್’ ನ ಅಧ್ಯಕ್ಷರಾದ ಜಗನ್ನಾಥ್ ಎಂ. ರಾವ್ ಉಪಸ್ಥಿತರಿದ್ದರು.

Related Posts

error: Content is protected !!