ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಕಂಪ್ಲೀಟ್!

‘ಗತವೈಭವ’ ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ…
ಕೆಲ ತಿಂಗಳಲ್ಲೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನೆಮಾ
ಸಿಂಪಲ್ ಸುನಿ ಸಾರಥ್ಯದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಲವ್‌ಸ್ಟೋರಿ!
ಸುಮಾರು ಎರಡೂವರೆ ವರ್ಷಗಳ ಹಿಂದೆ ನಿರ್ದೇಶಕ ಸಿಂಪಲ್ ಸುನಿ, ‘ಗತವೈಭವ’ ಎಂಬ ಸಿನೆಮಾದ ಶೂಟಿಂಗ್ ಆರಂಭಿಸಿದ್ದು, ಹಲವರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಹೌದು, ಯುವನಟ ದುಷ್ಯಂತ್ ‘ಗತವೈಭವ’ ಸಿನೆಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದು, ಈ ಸಿನೆಮಾದಲ್ಲಿ ನಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸುಮಾರು 100 ದಿನಗಳ ಕಾಲ ‘ಗತವೈಭವ’ ಚಿತ್ರದ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಪೋರ್ಚುಗಲ್‌ನಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.
ಈ ವರ್ಷದ ಮೊದಲಾರ್ಧದಲ್ಲಿ ‘ಗತವೈಭವ’ ಬಿಡುಗಡೆ
ನಿರ್ದೇಶಕ ಸಿಂಪಲ್ ಸುನಿ ಬತ್ತಳಿಕೆಯಿಂದ ಬರುತ್ತಿರುವ ‘ಗತವೈಭವ’ ಚಿತ್ರದ ಚಿತ್ರೀಕರಣ ಪೋರ್ಚುಗಲ್‌ನಲ್ಲಿ ಮುಕ್ತಾಯಗೊಂಡಿದ್ದು, ಇದೇ ವೇಳೆ ‘ಗತವೈಭವ’ ಚಿತ್ರದ ನಾಯಕ ದುಷ್ಯಂತ್ ಹಾಗೂ ನಾಯಕಿ ಆಶಿಕಾ ರಂಗನಾಥ್ ಚಿತ್ರೀಕರಣ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೇ ವರ್ಷದ ಮೊದಲಾರ್ಧದಲ್ಲಿ ‘ಗತವೈಭವ’ ಸಿನೆಮಾ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಈಗಾಗಲೇ ನಿರ್ದೇಶಕ ಸಿಂಪಲ್ ಸುನಿ ಕಾಮಿಡಿ, ಸಿರೀಯಸ್, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತುತಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸುನಿ ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯಲ್ಲಿ ‘ಗತವೈಭವ’ ಚಿತ್ರದ ಮೂಲಕ ತೆರೆಗೆ ತರುತ್ತಿದ್ದು, ಯುವ ಪ್ರತಿಭೆ ದುಷ್ಯಂತ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಇನ್ನು ಸಿಂಪಲ್ ಸುನಿ ಈ ಸಿನೆಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ, ನಿರ್ಮಾಪಕ ಕೂಡ ಹೌದು. ‘ಗತವೈಭವ’ ಸಿನೆಮಾಕ್ಕೆ ಸಿಂಪಲ್ ಸುನಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ‘ಸುನಿ ಸಿನಿಮಾಸ್’ ಸಂಸ್ಥೆಯಡಿ, ದೀಪಿಕ್ ರವರ ‘ಮಾತಾ ಮೂವಿ ಮೇಕರ್ಸ್’ ಹಾಗೂ ‘ಸುನಿ ಚಿತ್ರ’ ಬ್ಯಾನರಿನಡಿ ಜಂಟಿಯಾಗಿ ಈ ಸಿನೆಮಾ ನಿರ್ಮಾಣವಾಗುತ್ತಿದೆ. ‘ಗತವೈಭವ’ ಸಿನೆಮಾಕ್ಕೆ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಕೊಡಗು, ಮಂಗಳೂರು, ಪೋರ್ಚುಗಲ್ ಹೀಗೆ ಹಲವು ಕಡೆಗಳಲ್ಲಿ ‘ಗತವೈಭವ’ ಸಿನೆಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ‘ಗತವೈಭವ’ ಸಿನೆಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.