Eye Plex

‘ನೋಡದವರಿಗೆ’ ಕಾಣದ ನಮ್ಮೊಳಗಿನ ಹುಡುಕಾಟ…

‘ನೋಡಿದವರು ಏನಂತಾರೆ’ ಅಂಥ ನೋಡುವ ಕುತೂಹಲ!

ನವೀನ್‌ ಶಂಕರ್‌ ಚಿತ್ರ ‘ನೋಡಿದವರು ಏನಂತಾರೆ’

ಚಿತ್ರ: ‘ನೋಡಿದವರು ಏನಂತಾರೆ’

ತಾರಾಗಣ: ನವೀನ್‌ ಶಂಕರ್‌, ಅಪೂರ್ವಾ ಭಾರದ್ವಾಜ್‌, ಪದ್ಮಾವತಿ ರಾವ್‌ (ಅಕ್ಷತಾ ರಾವ್‌), ಐರಾ ಕೃಷ್ಣ, ರಾಜೇಶ್‌, ಗುರು ಮತ್ತಿತರರು

ನಿರ್ದೇಶನ: ಕುಲದೀಪ್‌ ಕಾರಿಯಪ್ಪ

ನಿರ್ಮಾಣ: ನಾಗೇಶ್‌ ಗೋಪಾಲ್‌, ಮೋನಿಷಾ ಗೌಡ

ಸಂಗೀತ: ಮಯೂರೇಶ್‌ ಅಧಿಕಾರಿ,

ಛಾಯಾಗ್ರಹಣ: ಅಶ್ವಿನ್‌ ಕೆನಡಿ,

ಸಂಕಲನ: ಮನು ಶೇಡ್ಗಾರ್‌,

ಬಿಡುಗಡೆ: 31 ಜನವರಿ 2025

ರೇಟಿಂಗ್:  3.5/5

——

‘ನೋಡಿದವರು ಏನಂತಾರೆ’ – ಇಂಥದ್ದೊಂದು ಮಾತನ್ನು ಬಾಲ್ಯದಿಂದಲೂ ಕೇಳಿಕೊಂಡು ಬೆಳೆದವರು ನಾವು. ಇಂದಿಗೂ ಈ ಮಾತು ಕೇಳುತ್ತಿದ್ದೇವೆ, ಮುಂದೆಯೂ ಕೂಡ ಖಂಡಿತವಾಗಿಯೂ ಈ ಮಾತು ಕೇಳುತ್ತಲೇ ಇರುತ್ತೇವೆ. ಅದರ ಬಗ್ಗೆ ಕಿಂಚಿತ್ತೂ ಅನುಮಾನ ಬೇಡ! ಯಾಕೆಂದರೆ, ಬಹುತೇಕ ‘ನಾವು’ಗಳು ಸಾಮಾಜಿಕ ವ್ಯವಸ್ಥೆಯೊಳಗೆ ನಾವೇ ಸೃಷ್ಟಿಸಿಕೊಂಡ ಚೌಕಟ್ಟಿನೊಳಗೆ ಬದುಕನ್ನು ಕಟ್ಟಿಕೊಳ್ಳಲು ಬಯಸುವವರು. ಹೀಗಾಗಿ ನಮ್ಮೆಲ್ಲರಿಗೂ, ನಮ್ಮ ಎಲ್ಲಾ ಕೆಲಸ-ಕಾರ್ಯಗಳಿಗೆ, ನಮ್ಮ ಬದುಕಿನ ಆಗು-ಹೋಗುಗಳಿಗೆ ‘ನೋಡಿದವರು ಏನಂತಾರೆ’ ಎಂಬ ಅನಿವಾರ್ಯ ಅಭಿಪ್ರಾಯವೇ ಅಂತಿಮವಾಗಿರುತ್ತದೆ. ಅದರ ಮೇಲೆಯೇ ಬಹುತೇಕರ ಕನಸು, ಭಾವನೆ, ಬದುಕಿನ ಬಂಡಿ ಎಲ್ಲವೂ ಹಾಗೋ-ಹೀಗೋ ನಡೆದುಕೊಂಡು ಹೋಗುತ್ತಿರುತ್ತದೆ.

‘ನೋಡಿದವರು ಏನಂತಾರೆ’ ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ. ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಬಹುತೇಕರ ಬದುಕಿನಲ್ಲಿ ಆಗಾಗ್ಗೆ ಎದುರಾಗಬಹುದಾದ ಒಂದಷ್ಟು ವಿಷಯಗಳು, ಸನ್ನಿವೇಶಗಳ ಸುತ್ತ ನಡೆಯುವ ಚಿತ್ರ. ಇನ್ನು ‘ನೋಡಿದವರು ಏನಂತಾರೆ’ ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಇದು ಇಂದಿನ ಜನರೇಶನ್‌ ಹುಡುಗರ ಜೀವನದ ಅಸಲಿಯತ್ತನ್ನು ತೆರೆಮೇಲೆ ತೆರೆದಿಡುವ ಚಿತ್ರ.

ಬೆಂಗಳೂರಿನಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡುತ್ತ ಕೈತುಂಬ ಸಂಪಾದನೆ ಮಾಡಿಕೊಂಡಿರುವ ಹುಡುಗ ಸಿದ್ದಾರ್ಥ್‌ ಉರೂಫ್‌ ಸಿದ್ದುಗೆ ಎಲ್ಲವೂ ಇದೆ, ಆದರೆ ನೆಮ್ಮದಿ ಒಂದನ್ನು ಬಿಟ್ಟು. ಒಂದೆಡೆ ವೃತ್ತಿ ಜೀವನದಲ್ಲಿ ಕೈತುಂಬ ಸಂಬಳ ತೆಗೆದುಕೊಳ್ಳುತ್ತಿದ್ದರೂ, ಕಂಪೆನಿಯಲ್ಲಿ ಇನ್ನೊಬ್ಬರ ಕೈಕೆಳಗೆ ಬದುಕುತ್ತಿದ್ದೇವೆ ಎಂಬ ಭಾವನೆ. ಮತ್ತೊಂದೆಡೆ, ವೈಯಕ್ತಿಕ ಜೀವನದಲ್ಲಿ ಬಾಲ್ಯದಲ್ಲಿಯೇ ತನ್ನ ಜೀವನವನ್ನು ಮೂರಾಬಟ್ಟೆ ಮಾಡಿ ಹೋದ ತಾಯಿಯ ಬಗ್ಗೆ ಇರುವ ಆಕ್ರೋಶ. ಹೀಗೆ ವೃತ್ತಿ ಬದುಕು, ವೈಯಕ್ತಿಕ ಬದುಕಿನ ಎರಡು ಕವಲುಗಳ ನಡುವೆ ಪಯಣಿಸುವ ಸಿದ್ಧಾರ್ಥ್‌ ಉರೂಫ್‌ ಸಿದ್ದು, ತನ್ನನ್ನು ತಾನು ಹುಡುಕಿಕೊಂಡು ಬೆಂಗಳೂರಿನಿಂದ ವಿಮುಖನಾಗುತ್ತಾನೆ. ಆದರೆ ಈ ಪ್ರಯಾಣ ಎಷ್ಟು ದಿನ? ಎಷ್ಟು ದೂರ? ಇದಕ್ಕೆ ಕೊನೆ ಯಾವಾಗ? ಸಿದ್ದು ಹುಡುಕಾಟದಲ್ಲಿ ಏನೇನು ಸಿಗುತ್ತದೆ? ಅಂತಿಮವಾಗಿ ʼನೋಡುದವರು ಏನಂತಾರೆʼ ಎಂಬ ಮಾತುಗಳಿಂದ ಸಾಮಾನ್ಯನೊಬ್ಬ ತಪ್ಪಿಸಿಕೊಳ್ಳುವುದೋ, ಅಥವಾ ಹೊಂದಿಕೊಂಡು ಹೋಗುವುದಾದರೂ ಹೇಗೆ? ಎಂಬದರ ಸುತ್ತ ಇಡೀ ಚಿತ್ರದ ಕಥಾಹಂದರ ಸಾಗುತ್ತದೆ.

ಸಿದ್ಧಾರ್ಥ್‌ ಉರೂಪ್‌ ಸಿದ್ದು ಎಂಬ ಸಿಲಿಕಾನ್‌ ಸಿಟಿಯಲ್ಲಿ ಕೆಲಸ ಮಾಡುವ ಹುಡುಗನ ಪಾತ್ರವನ್ನು ಇಟ್ಟುಕೊಂಡು, ಇಂದಿನ ಯುವ ಜನರ ಬದುಕು-ಭಾವನೆಗಳನ್ನು ʼನೋಡಿದವರು ಏನಂತಾರೆʼ ಚಿತ್ರದಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕುಲದೀಪ್‌ ಕಾರಿಯಪ್ಪ. ಯಾವುದೇ ಕೆಲಸವನ್ನೂ ಮಾಡಿದರೂ, ನಮಗೆ ಅದರಲ್ಲಿ ತೃಪ್ತಿಗಿಂತ ʼನೋಡಿದವರು ಏನಂತಾರೆʼ ಎಂಬ ಅಭಿಪ್ರಾಯವೇ ಮುಖ್ಯವಾದಾಗ ಬದುಕಿನಲ್ಲಿ ಹೇಗೆಲ್ಲ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾಗುತ್ತದೆ ಎಂಬ ಸಾರವನ್ನು ನೋಡುಗರ ಮನಸ್ಸಿಗೆ ಇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಕಲಾವಿದರ ಅಭಿನಯ ಹೇಗಿದೆ…?

ಇನ್ನು ʼನೋಡಿದವರು ಏನಂತಾರೆʼ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗ ಸಿದ್ಧಾರ್ಥ್‌ ಉರೂಪ್‌ ಸಿದ್ದು ಆಗಿ ನಟ ನವೀನ್‌ ಶಂಕರ್‌ ಕಾಣಿಸಿಕೊಂಡಿದ್ದಾರೆ. ತನ್ನೊಳಗಿನ ಭಾವನೆಗಳ ಸಂಘರ್ಷವನ್ನು ಹಿಡಿದಿಟ್ಟುಕೊಂಡು ಗುರಿ ಇರದ ದಿಕ್ಕಿನೆಡೆಗೆ ಸಾಗುವ ಹುಡುಗನಾಗಿ ನವೀನ್‌ ಶಂಕರ್‌ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಪಾತ್ರ ನಿರ್ವಹಣೆಗಾಗಿ ನವೀನ್‌ ಶಂಕರ್‌ ಹಾಕಿರುವ ಪರಿಶ್ರಮ, ಚಿತ್ರದಲ್ಲಿ ಎದ್ದು ಕಾಣುತ್ತದೆ. ಇನ್ನು ನಾಯಕಿ ಅಪೂರ್ವಾ ಭಾರದ್ವಾಜ್‌ ಸ್ವತಂತ್ರ್ಯವಾಗಿ ಬದುಕಬೇಕೆಂದು ಬಯಸುವ ಇಂದಿನ ಜನರೇಶನ್‌ ಹುಡುಗಿಯಾಗಿ, ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಾವತಿ ರಾವ್‌ (ಅಕ್ಷತಾ ರಾವ್‌), ಐರಾ ಕೃಷ್ಣ, ರಾಜೇಶ್‌ ಮೊದಲಾದ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಭಾವನೆಗಳ ಭಾರದಿಂದ ವೇಗ ಕಡಿಮೆ…

ಇನ್ನು ಮೊದಲೇ ಹೇಳಿದಂತೆ, ʼನೋಡಿದವರು ಏನಂತಾರೆʼ ಭಾವನಾತ್ಕಕ ವಿಷಯವನ್ನು ಆಧಾರವಾಗಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ. ಹೀಗಾಗಿ ಇಡೀ ಚಿತ್ರದ ದೃಶ್ಯಗಳು, ಸನ್ನಿವೇಶಗಳು, ಸಂಭಾಷಣೆಗಳು ಎಲ್ಲವೂ ಭಾವನೆಗಳ ಮೇಲೆಯೇ ಮೇಳೈಸಿರುವುದರಿಂದ, ಚಿತ್ರದ ಕಥೆಯ ನಿರೂಪಣೆಯಲ್ಲಿ ಅತಿಯಾದ ವೇಗವನ್ನು ನಿರೀಕ್ಷಿಸುವಂತಿಲ್ಲ. ಮಾಮೂಲಿ ಕಮರ್ಷಿಯಲ್‌ ಸಿನೆಮಾಗಳಲ್ಲಿ ಕಾಣುವ ವೇಗಕ್ಕಿಂತ, ಉದ್ವೇಗವೇ ಇಲ್ಲಿ ಪ್ರಧಾನವಾಗಿದೆ. ಆದರೂ ಸಾವಧಾನದಿಂದ ಕೂತವರಿಗೆ, ʼನೋಡಿದವರು ಏನಂತಾರೆʼ ಚಿತ್ರ ನಿಧಾನವಾಗಿ ಮನಸ್ಸಿನ ಆಳಗೆ ಇಳಿಯಲಿದೆ ಎಂಬುದನ್ನಂತೂ ಹೇಳಬಹುದು.

ಕಥಾಹಂದರಕ್ಕೆ ತಕ್ಕಂತೆ ತಾಂತ್ರಿಕ ಸ್ಪರ್ಶ

‘ನೋಡಿದವರು ಏನಂತಾರೆ’ ಚಿತ್ರದಲ್ಲಿ ತಾಂತ್ರಿಕವಾಗಿ ಗಮನ ಸೆಳೆಯುವ ಅಂಶಗಳೆಂದರೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಬೆಂಗಳೂರಿನಿಂದ ಹೊರಟು ಉತ್ತರ ಕರ್ನಾಟಕದವರೆಗೂ ಸಾಗುವ ಚಿತ್ರದ ದೃಶ್ಯಗಳನ್ನು ಸಹಜವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ಛಾಯಾಗ್ರಹಕ ಅಶ್ವಿನ್‌ ಕೆನಡಿ ಯಶಸ್ವಿಯಾಗಿದ್ದಾರೆ. ಸಿನೆಮಾದ ಹಾಡುಗಳು ಅಷ್ಟವಾಗಿ ಗುನುಗುವಂತೆ ಇರದಿದ್ದರೂ, ಹಿನ್ನೆಲೆ ಸಂಗೀತ ಚಿತ್ರದ ದೃಶ್ಯಗಳಿಗೆ ಅಲ್ಲಲ್ಲಿ ಜೀವಕಳೆ ತುಂಬುತ್ತದೆ. ಸಂಕಲನಕಾರ ಮನು ಶೇಡ್ಗಾರ್‌ ಚಿತ್ರದ ದೃಶ್ಯಗಳನ್ನು ಮೊನಚು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಉಳಿದಂತೆ ತಾಂತ್ರಿಕವಾಗಿ ಚಿತ್ರದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ಕೊನೆಯ ಮಾತು…

ನಿರ್ದೇಶಕ ಕುಲದೀಪ್‌ ಕಾರಿಯಪ್ಪ ನಮ್ಮ ನಡುವಿನ ಒಂದು ಕಥೆಯನ್ನು ತೆರೆಮೇಲೆ ತಂದಿರುವುದು ನಿಜಕ್ಕೂ ಪ್ರಶಂಸನೀಯ. ಆದರೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಾದ ಕೆಲವು ಸಾಧ್ಯತೆಗಳನ್ನು ಅವರು ಚಿತ್ರದಲ್ಲಿ ಸಮರ್ಥವಾಗಿ ಬಳಸಿಕೊಂಡಂತೆ ಕಾಣುವುದಿಲ್ಲ. ಇಡೀ ಚಿತ್ರದ ಹಲವು ಕಡೆಗಳಲ್ಲಿ ಬರುವ ಅತಿಯಾದ ಇಂಗ್ಲೀಷ್‌ ಸಂಭಾಷಣೆಗಳು ನೋಡುಗರಿಗೆ ಕಿರಿಕಿರಿ ಉಂಟು ಮಾಡಿದರೆ, ಕೆಲವು ಪಾತ್ರಗಳು ಅಸಹಜ ಎಂಬಂತೆ ಕಾಣುತ್ತವೆ. ಭಾವನೆಗಳನ್ನು ಹಿಡಿದಿಡುವ ಭರದಲ್ಲಿ ಚಿತ್ರದ ಮೊದಲಾರ್ಧ ಮುಗಿದಿರುವೇ ಗೊತ್ತಾಗುವುದಿಲ್ಲ. ಒಟ್ಟಾರೆ ಮಾಮೂಲಿ ಕಮರ್ಷಿಯಲ್‌ ಚಿತ್ರಗಳಿಗಿಂತ ಹೊರತಾದ ಕಥೆ, ಚಿತ್ರಕಥೆ, ನಿರೂಪಣೆ ಎಲ್ಲವೂ ʼನೋಡಿದವರು ಏನಂತಾರೆʼ ಚಿತ್ರದಲ್ಲಿ ಇರುವುದರಿಂದ, ಇಂಥ ಸಿನೆಮಾಗಳನ್ನು ನೋಡಲು ಬಯಸುವವರು ಒಮ್ಮೆ ನೋಡಿ ʼಏನಂತೀರಾʼ ಅಂಥ ಹೇಳಬಹುದು.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!