Street Beat

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮುಂದೆ ರಾಗಿಣಿ!

ನಟಿ ರಾಗಿಣಿ ದ್ವಿವೇದಿ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ಧ್ವನಿಮುದ್ರಣ ಆರಂಭ

ಹಳ್ಳಿ ಸೊಗಡಿನ ಪಾತ್ರದಲ್ಲಿ ತುಪ್ಪದ ಹುಡುಗಿ ಮಿಂಚಿಂಗ್‌..!

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಗ್ಲಾಮರಸ್‌ ಪಾತ್ರಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದ ನಟಿ ರಾಗಿಣಿ ದ್ವಿವೇದಿ, ಈ ಬಾರಿ ಔಟ್‌ ಅಂಡ್‌ ಔಟ್‌ ಡಿ-ಗ್ಲಾಮರಸ್‌ ಪಾತ್ರವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ರಾಗಿಣಿ ಸದ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಹೊಸ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ರಾಗಿಣಿ ಅಪ್ಪಟ ಗ್ರಾಮೀಣ ಸೊಗಡಿನ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಈ ಸಿನೆಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಟೈಟಲ್‌ ಅನ್ನು ಚಿತ್ರತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

ಸಾಂಗ್‌ ರೆಕಾರ್ಡಿಂಗ್‌ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ

ಇನ್ನು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಸ್ಕ್ರಿಪ್ಟ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಸಿನೆಮಾದ ಹಾಡುಗಳ ಮುದ್ರಣ ಕಾರ್ಯವನ್ನು ಆರಂಭಿಸುವ ಮೂಲಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಪ್ರೊಡಕ್ಷನ್‌ ಕೆಲಸವನ್ನು ಶುರು ಮಾಡಿದೆ. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದಲ್ಲಿ ಒಟ್ಟು ಎರಡು ಹಾಡುಗಳು ಮತ್ತು ಒಂದು ಬಿಟ್‌ ಸಾಂಗ್‌ ಇರಲಿದ್ದು, ಈ ಹಾಡುಗಳಿಗೆ ಸಂಗೀತ ನಿರ್ದೇಶಕ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಸಮಾರಂಭದಲ್ಲಿ, ಹಾಡುಗಳ ಧ್ವನಿಮುದ್ರಣ ಮಾಡುವುದರ ಮೂಲಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಾಯಕ ನಟಿ ರಾಗಿಣಿ ದ್ವಿವೇದಿ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ’ದ ಅಧ್ಯಕ್ಷ ಕೃಷ್ಣಪ್ಪ, ನಟಿ ಮತ್ತು ನಿರ್ಮಾಪಕಿ ಗೀತಪ್ರಿಯಾ, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ, ನಿರ್ಮಾಪಕರಾದ ಭಾ. ಮ. ಹರೀಶ್‌, ಭಾ. ಮ. ಗಿರೀಶ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ಏನಿದೆ?

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಟೈಟಲ್ಲೇ ಹೇಳುವಂತೆ, ಇದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯನ್ನು ಕೇಂದ್ರೀಕರಿಸಿ ಮಾಡುತ್ತಿರುವ ಸಿನೆಮಾ. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಸರ್ಕಾರಿ ಪಡಿತರ ವ್ಯವಸ್ಥೆ, ಅದು ಕಾರ್ಯ ನಿರ್ವಹಿಸುವ ರೀತಿ, ಜನರ ಆಶಯಗಳು, ಅದರ ಹಿಂದಿನ ರಾಜಕೀಯ ಮತ್ತು ಹೋರಾಟಗಳ ಸುತ್ತ ಈ ಸಿನೆಮಾದ ಕಥಾಹಂದರ ಸಾಗುತ್ತದೆ ಎಂಬುದು ಚಿತ್ರದ ಕಥೆಯ ಎಳೆಯ ಬಗ್ಗೆ ಚಿತ್ರತಂಡ ನೀಡುವ ಮಾಹಿತಿ. ನಮ್ಮ ಸುತ್ತಮುತ್ತ ನಡೆಯುತ್ತಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯ ವ್ಯವಹಾರ, ವ್ಯವಸ್ಥೆಗಳ ಚಿತ್ರಣ ಈ ಸಿನೆಮಾದಲ್ಲೂ ಇರಲಿದೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರಲಿದ್ದೇವೆ ಎಂಬುದು ಚಿತ್ರತಂಡದ ಮಾತು.

ಶೀಘ್ರದಲ್ಲಿಯೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರೀಕರಣ ಶುರು

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾವನ್ನು ‘ಜಯಶಂಕರ ಟಾಕೀಸ್‌’ ಬ್ಯಾನರ್‌ ಅಡಿಯಲ್ಲಿ ತೇಜು ಮೂರ್ತಿ ಮತ್ತು ಎಸ್‌. ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅನಂತ್‌ ಆರ್ಯನ್‌ ಸಿನೆಮಾದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸಾತ್ವಿಕ್ ಪವನ ಕುಮಾರ್‌ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾಕ್ಕೆ ಛಾಯಾಗ್ರಹಣ ಮಾಡುವುದರ ಜೊತೆಗೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಕರುಣಾಕರ್‌ ಚಿತ್ರಕ್ಕೆ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದಂತೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಸದ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾದ ಹಾಡುಗಳ ಧ್ವನಿಮುದ್ರಣ ಕಾರ್ಯವನ್ನು ಪ್ರಾರಂಭಿಸಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರೀಕರಣವನ್ನೂ ಆರಂಭಿಸುವ ಯೋಜನೆಯಲ್ಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನೆಮಾವನ್ನು ಥಿಯೇಟರಿಗೆ ತರಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Related Posts

error: Content is protected !!