‘I Am God’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಯುವ ಪ್ರತಿಭೆ ರವಿ ಗೌಡ ಹೊಸ ಸಿನೆಮಾಗೆ ಸಿಎಂ ಸಾಥ್
‘I Am God’ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದ ಸಿದ್ದು…
ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಹೊಸ ಚಿತ್ರ
ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನೆಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ನಿನ್ನೆ ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಧ್ವಜ ಸಿನೆಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ ‘I am God’ ಸಿನೆಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರವಿ ಗೌಡ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಿಸಿರುವ ‘I am God’ ಸಿನೆಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಅನಾವರಣ ಮಾಡಿದರು.
ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯ…
ಬಳಿಕ ಸಿ. ಎಂ ಸಿದ್ದರಾಮಯ್ಯ ಮಾತನಾಡಿ, ‘ಸಿ. ಬಸವೇಗೌಡ್ರು ಮಗ ರವಿ ಗೌಡ ಮಗ ಹುಟ್ಟುವ ಮುಂಚೆಯೇ ಬಸವೇಗೌಡ ನನಗೆ ಪರಿಚಯ. ನಾನು ಬಸವೇಗೌಡರ ಮಗ ಸಿನೆಮಾದಲ್ಲಿ ನಟಿಸುತ್ತಾನೆ. ನಿರ್ಮಾಪಕ ಆಗುತ್ತಾನೆ. ನಿರ್ದೇಶಕನಾಗುತ್ತಾನೆ ಎಂದುಕೊಂಡಿರಲಿಲ್ಲ. ಸಿನೆಮಾ ಕ್ಷೇತ್ರಗಳಲ್ಲಿ ಒಳ್ಳೆ ನಟನಾಗಿ, ನಿರ್ದೇಶಕನಾಗಿ ಮೂಡಿ ಬರಲಿ. ದುಡ್ಡಿದ್ರೆ ಯಾರು ಬೇಕಾದರೂ ನಿರ್ಮಾಪಕರು ಆಗಬಹುದು. ಆದರೆ ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯವಾಗುವುದು. ಬಸವೇಗೌಡ ಮಗ ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತಸ. ಈ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಬೆಳೆಯಬೇಕು ಎಂದು ಆಶಿಸುತ್ತೇನೆ. ನಾನು ಸಿನೆಮಾ ನೋಡುತ್ತೇನೆ. ಸಿನೆಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆಯಲಿ’ ಎಂದು ಶುಭ ಹಾರೈಸಿದರು.
ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘I am God’
‘I am God’ ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ‘ಸಿಬಿಜಿ ಪ್ರೊಡಕ್ಷನ್ಸ್’ ನಡಿ ಮೂಡಿ ಬರ್ತಿರುವ ‘I am God’ ಚಿತ್ರಕ್ಕೆ ‘ಕಾಂತಾರ’ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ಜಿತಿನ್ ದಾಸ್ ಕ್ಯಾಮೆರಾ ಕೆಲಸ , ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿರಲಿದೆ.