‘ಸಿದ್ಲಿಂಗು-2’ ಚಿತ್ರದ ‘ಕಥೆಯೊಂದು ಕಾಡಿದೆ…’ ಹಾಡು ಬಿಡುಗಡೆ

ಮಕ್ಕಳ ಸಮ್ಮುಖದಲ್ಲಿ ‘ಸಿದ್ಲಿಂಗು-2’ ಚಿತ್ರದ ಹಾಡು ಅನಾವರಣ
‘ಪ್ರೇಮಿಗಳ ದಿನ’ದಂದು ಯೋಗಿ – ಸೋನುಗೌಡ ಅಭಿನಯದ ಚಿತ್ರ ಬಿಡುಗಡೆ
ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಗೀತೆ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ‘ಸಿದ್ಲಿಂಗು’, ‘ನೀರ್ ದೋಸೆ’, ‘ತೋತಾಪುರಿ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯಪ್ರಸಾದ್ ಈ ಬಾರಿ ‘ಸಿದ್ಲಿಂಗು-2’ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಹೌದು, ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಸಿದ್ಲಿಂಗು-2’ ಚಿತ್ರವು ಇದೇ ಫೆಬ್ರವರಿ 14ರ ‘ಪ್ರೇಮಿಗಳ ದಿನ’ ದಂದು ಬಿಡುಗಡೆಯಾಗುತ್ತಿದೆ. ಸದ್ಯ ಭರದಿಂದ ‘ಸಿದ್ಲಿಂಗು-2’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇತ್ತೀಚೆಗೆ ಈ ಚಿತ್ರದ ಮೊದಲ ವೀಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ನಾಗದೇವನಹಳ್ಳಿ ಬಳಿಯ ಅನಾಥಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ ಮಕ್ಕಳ ಸಮ್ಮುಖದಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಿತು. ಈ ವೇಳೆ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರತಂಡದ ಬಹುತೇಕ ಸದಸ್ಯರು ಹಾಜರಿದ್ದರು.
ಇನ್ನು ‘ಕಥೆಯೊಂದು ಕಾಡಿದೆ…’ ಎಂಬ ಸಾಲುಗಳಿಂದ ಶುರುವಾಗುವ ಈ ಗೀತೆಗೆ ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸುವುದರ ಜೊತೆಗೆ ಈ ಹಾಡಿಗೆ ಧ್ವನಿ ಕೂಡ ಆಗಿದ್ದಾರೆ. ಮೆಲೋಡಿಯಾಗಿ ಮೂಡಿಬಂದಿರುವ ಈ ಗೀತೆಯಲ್ಲಿ ಚಿತ್ರದ ನಾಯಕ ಯೋಗಿ ಮತ್ತು ನಾಯಕಿ ಸೋನು ಗೌಡ ತೆರೆಮೇಲೆ ಅಭಿನಯಿಸಿದ್ದಾರೆ.
‘ಸಿದ್ಲಿಂಗು-2’ ಚಿತ್ರದ ‘ಕಥೆಯೊಂದು ಕಾಡಿದೆ…’ ಎಂಬ ವಿಡಿಯೋ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ದೇವರ ಮುಂದೆ ಮುಹೂರ್ತ, ದೇವರ ಮಕ್ಕಳ ಮುಂದೆ ಹಾಡು ರಿಲೀಸ್
‘ಸಿದ್ಲಿಂಗು-2’ ಚಿತ್ರದ ಈ ಗೀತೆಯ ಬಿಡುಗಡೆಯ ಬಳಿಕ ಮಾತನಾಡಿದ ನಾಯಕ ನಟ ಯೋಗಿ, ‘ಕಳೆದ ವರ್ಷ ಈ ಚಿತ್ರದ ಮುಹೂರ್ತ ದೇವರ ಮುಂದೆ ಆಗಿತ್ತು. ಈಗ ಚಿತ್ರದ ಮೊದಲ ಹಾಡು ದೇವರ ಮಕ್ಕಳ ಮುಂದೆ ಬಿಡುಗಡೆಯಾಗುತ್ತಿದೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾವೆಲ್ಲರೂ ಬಹಳ ಎಕ್ಸೈಟ್ ಆಗಿದ್ದೇವೆ. ತುಂಬಾ ಕಷ್ಟಪಟ್ಟು, ಸಾಕಷ್ಟು ಅವಮಾನಗಳನ್ನು ಎದುರಿಸಿ ಈ ಸಿನೆಮಾ ಮಾಡಿದ್ದೇವೆ. ಆ ದೇವರು ನನಗೆ ಮತ್ತು ವಿಜಯಪ್ರಸಾದ್ ಅವರಿಗೆ ನಿಮ್ಮಿಂದ ಒಳ್ಳೆಯ ಸಿನೆಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ಸೋನು ಹಳೆಯ ಪರಿಚಯ. ಇದೇ ಮೊದಲ ಬಾರಿಗೆ ಒಟ್ಟಿಗೆ ಸಿನೆಮಾ ಮಾಡಿದ್ದೇವೆ. ನನಗೂ, ವಿಜಯಪ್ರಸಾದ್ ಅವರಿಗೂ ಈ ಸಿನೆಮಾದಲ್ಲಿ ಆಗಿರುವ ಜಗಳ, ಇರುಸು-ಮುರುಸು ಈ ಹಿಂದೆ ಆಗಿಲ್ಲ. ಅದು ಸಿನೆಮಾ ವಿಷಯಕ್ಕೆ ಮಾತ್ರ. ಅವರ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಚಾರ. ಒಬ್ಬ ಪರಿಪೂರ್ಣ ನಟ ಆಗಬೇಕು ಅಂದರೆ, ಅವರ ಜೊತೆಗೆ ಕೆಲಸ ಮಾಡಬೇಕು. ಮುಂದೆ ಸಹ ಅವರ ಜೊತೆಗೆ ಇನ್ನಷ್ಟು ಕೆಲಸ ಮಾಡುವ ಆಸೆ ಇದೆ. ಈ ಚಿತ್ರದಲ್ಲಿ ಕೆಲಸ ಮಾಡಿದ, ಸಹಕಾರ ಮತ್ತು ಪ್ರೋತ್ಸಾಹ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದರು.
ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಗೀತೆ ಬಿಡುಗಡೆ…
ನಿರ್ದೇಶಕ ವಿಜಯಪ್ರಸಾದ್ ಮಾತನಾಡಿ, ‘ಐಷಾರಾಮಿ ಹೋಟೆಲ್‍ಗಳಲ್ಲಿ, ಸೆಲೆಬ್ರಿಟಿಗಳ ಮಧ್ಯೆ ಹಾಡುಗಳನ್ನು ಬಿಡುಗಡೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ‘ಸಿದ್ಲಿಂಗು-2’ ಚಿತ್ರತಂಡದವರಿಗೆ ಮನಸುಗಳ ಮಧ್ಯೆ, ಒಳ್ಳೆಯ ಮನಸುಗಳಿರುವ ಮನುಷ್ಯರ ಮಧ್ಯೆ ಹಾಡು ಬಿಡುಗಡೆ ಮಾಡಿದರೆ ಅರ್ಥಪೂರ್ಣ ಎಂಬ ಕಾರಣಕ್ಕೆ ಇಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಹಾಗಾಗಿ, ವಿಶೇಷ ಮಕ್ಕಳ ಆಶ್ರಮದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಯೋಗಿ ಮತ್ತು ಸೋನು ಪಾತ್ರಧಾರಿಗಳಾಗಿ ಇಲ್ಲಿಗೆ ಬಂದಿದ್ದಾರೆ. ಇಡೀ ಸಿನಿಮಾದಲ್ಲಿ ಯೋಗಿ ಇದೇ ವೇಷದಲ್ಲಿರುತ್ತಾರೆ. ಯೋಗಿ ಜೊತೆಗೆ ಇಬ್ಬರು ಹೀರೋಗಳು ಇಲ್ಲಿಗೆ ಬಂದಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಅರಸು ಅಂತಾರೆ ಆ ಇಬ್ಬರು ಹೀರೋಗಳು. ಅನೂಪ್ ಸೀಳಿನ್ ಜೀವಂತವಾಗಿರುವ ಹಾಡೊಂದನ್ನು ಕೊಟ್ಟಿದ್ದಾರೆ. ಅಷ್ಟೇ ಜೀವಂತವಾದ ಸಾಹಿತ್ಯವನ್ನು ಅರಸು ಬರೆದಿದ್ದಾರೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಈ ತಂಡದ ಮೇಲಿರಲಿ’ ಎಂದರು.
‘ಸಿದ್ಲಿಂಗು’ ಜೊತೆ ಪ್ರತಿದಿನ ಒಂದೊಳ್ಳೆ ಅನುಭವ…
ನಾಯಕಿ ಸೋನು ಮಾತನಾಡಿ, ‘ನಾನು ಈ ತಂಡಕ್ಕೆ ಹೊಸಬಳು. ಆದರೆ, ಹೊಸಬಳು, ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೀನಿ ಅಂತ ಅನಿಸಲಿಲ್ಲ. ನನ್ನ ಮತ್ತು ಯೋಗಿಯ ನಡುವೆ ಒಳ್ಳೆಯ ಸ್ಪರ್ಧೆ ಇತ್ತು. ಪ್ರತಿ ದಿನ ಒಂದೊಳ್ಳೆಯ ಅನುಭವ ಆಯಿತು. ವಿಜಯಪ್ರಸಾದ್ ಅವರಿಂದ ಮೊದಲ ಟೇಕ್‍ನಲ್ಲಿ ಓಕೆ ಅಂತನಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಪ್ರತೀ ದಿನ ಮೊದಲ ಟೇಕ್‍ನಲ್ಲಿ ಓಕೆ ಆಗಬೇಕೆಂದು ತಯಾರಿ ಮಾಡಿಕೊಂಡು ಬರುತ್ತಿದ್ದೆ. ಒಬ್ಬ ವಿದ್ಯಾರ್ಥಿಯಾಗಿ ಅವರಿಂದ ಕಲಿಯುವುದು ಸಾಕಷ್ಟು ಇದೆ. ಅನೂಪ್ ಸೀಳಿನ್ ಹಾಡುಗಳ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದಾರೆ. ಒಂದೊಳ್ಳೆಯ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಖುಷಿ ಇದೆ’ ಎಂದರು.
ತಿಂಗಳಾಂತ್ಯಕ್ಕೆ ‘ಸಿದ್ಲಿಂಗು-2’ ರಿಸಲ್ಟ್!
ಇನ್ನು ‘ಸಿದ್ಲಿಂಗು-2’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಿಸಿದ್ದು, ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಗಿರಿಜಾ ಲೋಕೇಶ್, ಮಹಾಂತೇಶ್, ಆ್ಯಂಟೋನಿ ಕಮಲ್, ಮಂಜುನಾಥ ಹೆಗಡೆ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಸಿದ್ಲಿಂಗು-2’ ಚಿತ್ರಕ್ಕೆ ಪ್ರಸನ್ನ ಗುರ್ಲಕೆರೆ ಛಾಯಾಗ್ರಹಣ ಮತ್ತು ಅಕ್ಷಯ್ ಪಿ. ರಾವ್ ಅವರ ಸಂಕಲನವಿದೆ. ‘ಭೀಮ’ ಚಿತ್ರದ ನಿರ್ಮಾಪಕ ಜಗದೀಶ್, ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಒಟ್ಟಾರೆ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿರುವ ‘ಸಿದ್ಲಿಂಗು-2’ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಲಿದ್ದಾನೆ ಎಂಬ ರಿಸೆಲ್ಟ್ ಈ ತಿಂಗಳ ಕೊನೆಗೆ ಗೊತ್ತಾಗಲಿದೆ.