Straight Talk

‘ಕಿಚ್ಚ’ನ ಗರಡಿಯಿಂದ ಚಂದನವನಕ್ಕೆ ‘ಪ್ರವೀಣ’ ಪ್ರಯಾಣ

ಸುದೀಪ್‌ ಒಡನಾಡಿ ಹುಡುಗನ ಸಿನೆಮಾ ಯಾನ

‘ಸಿಸಿಎಲ್‌ʼ ನಿಂದ ‘ಮ್ಯಾಕ್ಸ್‌’ವರೆಗೆ ಮುಂದುವರೆದ ಜೊತೆಯಾಟ…

ನವ ಪ್ರತಿಭೆ ಪ್ರವೀಣ್‌ ಸಿನಿ(ಮಾ) ಕಥೆ

ಚಂದನವನಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಟರಾಗಿ ಅಡಿಯಿಡುತ್ತಲೇ ಇರುತ್ತಾರೆ. ಹೀಗೆ ಚಂದನವನಕ್ಕೆ ಕಾಲಿಟ್ಟ ಕೆಲವೇ ಕೆಲವು ಪ್ರತಿಭೆಗಳು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಸಿನಿ ಪ್ರಿಯರ ಮನ-ಗಮನ ಎರಡನ್ನೂ ಸೆಳೆದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇತ್ತೀಚೆಗೆ ಹೀಗೆ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಯುವ ನಟನಾಗಿ ಗಮನ ಸೆಳೆಯುತ್ತಿರುವ ನವ ಪ್ರತಿಭೆ ಪ್ರವೀಣ್‌. ಸ್ಯಾಂಡಲ್‌ವುಡ್‌ ‘ಬಾದ್‌ ಷಾ’ ಕಿಚ್ಚ ಸುದೀಪ್‌ ಒಡನಾಡಿಯಾಗಿ ಗುರುತಿಸಿಕೊಂಡಿರುವ ಪ್ರವೀಣ್‌ ಸಿನೆಮಾ ಯಾನದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ಯಾರು ಈ ಪ್ರವೀಣ್‌..? 

ಇತ್ತೀಚೆಗೆ ನೀವೇನಾದರೂ ‘ಕಿಚ್ಚ’ ಸುದೀಪ್‌ ಅಭಿನಯದ ‘ಮ್ಯಾಕ್ಸ್‌’ ಸಿನೆಮಾವನ್ನು ನೋಡಿದ್ದರೆ, ಖಂಡಿತವಾಗಿಯೂ ಈ ಹುಡುಗನನ್ನು ನೋಡಿರುತ್ತೀರಿ. ‘ಮ್ಯಾಕ್ಸ್‌’ ಸಿನೆಮಾದಲ್ಲಿ ಸುದೀಪ್‌ ಅವರ ಜೊತೆಗೆ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಈ ಹುಡುಗನ ಹೆಸರು ಪ್ರವೀಣ್‌. ಅಂದಹಾಗೆ, ಪ್ರವೀಣ್‌ ವೃತ್ತಿಪರ ಕ್ರಿಕೆಟ್‌ ಪಟು. ಇನ್ನು ಬೆಂಗಳೂರು ಮೂಲದ ಪ್ರವೀಣ್‌, ಬಾಲ್ಯದಿಂದಲೇ ಕ್ರಿಕೆಟ್‌ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಹುಡುಗ. ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಸಾಕಷ್ಟು ತರಬೇತಿ ಪಡೆದುಕೊಂಡ ಪ್ರವೀಣ್‌, ರಾಜ್ಯಮಟ್ಟದ ಕ್ರಿಕೆಟ್‌ ಪಟುವಾಗಿ ಗುರುತಿಸಿಕೊಂಡಿದ್ದರು. ‘ಅಂಡರ್‌ 19 ಕ್ರಿಕೆಟ್‌’ ಮತ್ತು ‘ಅಂಡರ್‌ 22 ಕ್ರಿಕೆಟ್‌’ ಪಂದ್ಯಗಳಲ್ಲಿ ಕರ್ನಾಟಕ ತಂಡಗಳನ್ನು ಪ್ರತಿನಿಧಿಸಿದ್ದರು. ಶಿಕ್ಷಣದ ಬಳಿಕ ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಪ್ರವೀಣ್‌ ಅವರಿಗೆ ಕ್ರಿಕೆಟ್‌ ಜೊತೆಗೆ ಸಿನೆಮಾದ ಬಗ್ಗೆಯೂ ಅತ್ಯಾಸಕ್ತಿ. ಅದೇ ಆಸಕ್ತಿ ಅವರನ್ನು ಈಗ ಚಿತ್ರರಂಗಕ್ಕೆ ಕರೆತಂದಿದೆ.

ಕ್ರಿಕೆಟ್‌ ಗ್ರೌಂಡ್‌ನಿಂದ ಸಿನೆಮಾ ಅಂಗಳಕ್ಕೆ…

ಕ್ರಿಕೆಟ್‌ ಬಳಿಕ ತಮ್ಮ ಆಸಕ್ತಿಯ ಚಿತ್ರರಂಗದತ್ತ ಗಮನ ಹರಿಸಿರುವ ಪ್ರವೀಣ್‌, ಸದ್ಯ ರೈಲ್ವೇ ಇಲಾಖೆಯ ಉದ್ಯೋಗಕ್ಕೆ ಗುಡ್‌ ಬೈ ಹೇಳಿ ತಮ್ಮ ಸಂಪೂರ್ಣ ಗಮನವನ್ನು ಚಿತ್ರರಂಗದತ್ತಲೇ ಕೇಂದ್ರೀಕರಿಸಿದ್ದಾರೆ. ಕ್ರಿಕೆಟ್‌ ಮೂಲಕ ಪರಿಚಯವಾದ ನಟ ಸುದೀಪ್‌ ಅವರೊಂದಿಗಿನ ಒಡನಾಟ ಈಗ ಪ್ರವೀಣ್‌ ಅವರನ್ನು ಚಿತ್ರರಂಗಕ್ಕೆ ಕರೆತಂದಿದೆ. ಈಗಾಗಲೇ ಸುದೀಪ್‌ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಪ್ರವೀಣ್‌, ಚಿತ್ರರಂಗದಲ್ಲಿ ಸುದೀಪ್‌ ಅವರ ಮಾರ್ಗದರ್ಶನದಲ್ಲಿ ಅಡಿಯಿಡುತ್ತಿದ್ದಾರೆ. 2024ರಲ್ಲಿ ಪ್ರವೀಣ್‌ ಅಭಿನಯಿಸಿದ್ದ ‘ಗೌರಿ’ ಮತ್ತು ‘ಮ್ಯಾಕ್ಸ್‌’ ಎರಡು ಸಿನೆಮಾಗಳು ಬಿಡುಗಡೆಯಾಗಿದ್ದು, ಈ ಎರಡೂ ಸಿನೆಮಾಗಳಲ್ಲೂ ಪ್ರವೀಣ್‌ ಅವರ ಅಭಿನಯ ಸಿನಿಪ್ರಿಯರು ಮತ್ತು ಚಿತ್ರರಂಗದ ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿದೆ. ಸದ್ಯ ಪ್ರವೀಣ್‌ ಕನ್ನಡದಲ್ಲಿ ಪ್ರಜ್ವಲ್‌ ದೇವರಾಜ್‌ ಅವರೊಂದಿಗೆ ‘ಕರಾವಳಿ’, ಕಿಚ್ಚ ಸುದೀಪ್‌ ಅವರೊಂದಿಗೆ ‘ಬಿಲ್ಲ ರಂಗ ಬಾಷ’ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಗುರುರಾಜ್‌ ಕುಲಕರ್ಣಿ ಹೊಸಚಿತ್ರದಲ್ಲಿ ಪ್ರವೀಣ್‌

ಕನ್ನಡದಲ್ಲಿ ಈಗಾಗಲೇ ‘ಅಮೃತ್‌ ಅಪಾರ್ಟ್‌ಮೆಂಟ್‌’, ‘ದಿ ಜಡ್ಜ್‌ಮೆಂಟ್‌’ ಚಿತ್ರಗಳನ್ನು ನಿರ್ದೇಶಿಸಿರುವ ಗುರುರಾಜ್‌ ಕುಲಕರ್ಣಿ ಹೊಸ ಸಿನೆಮಾದ ಕೆಲಸಗಳು ತೆರೆಮರೆಯಲ್ಲಿ ಆರಂಭವಾಗಿದ್ದು, ಈ ಸಿನೆಮಾದಲ್ಲಿ ಪ್ರವೀಣ್‌ ನಾಯಕರಲ್ಲಿ ಒಬ್ಬನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೊಮ್ಯಾಂಟಿಕ್‌, ಕ್ರೈಂ-ಥ್ರಿಲ್ಲರ್‌ ಶೈಲಿಯ ಈ ಸಿನೆಮಾ ಕನ್ನಡದ ಜೊತೆಗೆ ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಇದರಲ್ಲಿ ಪ್ರವೀಣ್‌ ಇಂದಿನ ಜನರೇಶನ್‌ ಹುಡುಗರನ್ನು ಪ್ರತಿನಿಧಿಸುವಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಹೊಸ ಚಿತ್ರಕ್ಕಾಗಿ ಪ್ರವೀಣ್‌ ಭರ್ಜರಿ ತಯಾರಿ!

ಇನ್ನು ಯುವನಟ ಪ್ರವೀಣ್‌ ತಮ್ಮ ಹೊಸ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ‘ಇತ್ತೀಚೆಗಷ್ಟೇ ನಿರ್ದೇಶಕ ಗುರುರಾಜ ಕುಲಕರ್ಣಿ ಅವರು ಹೇಳಿದ ಈ ಸಿನೆಮಾದ ಕಥೆ ಮತ್ತು ನನ್ನ ಪಾತ್ರ ಎರಡೂ ತುಂಬ ಇಷ್ಟವಾಯಿತು. ತುಂಬ ಖುಷಿಯಿಂದ ಈ ಸಿನೆಮಾ ಮಾಡಲು ಒಪ್ಪಿಕೊಂಡಿದ್ದೇನೆ. ತುಂಬ ಸವಾಲಿರುವಂಥ ಮತ್ತು ಅಷ್ಟೇ ಮನಮುಟ್ಟುವಂಥ ಪಾತ್ರ ಈ ಸಿನೆಮಾದಲ್ಲಿದೆ. ಈ ಸಿನೆಮಾದ ಪಾತ್ರಕ್ಕಾಗಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿಯೇ ಈ ಹೊಸ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ಅಧಿಕೃತವಾಗಿ ಅನೌನ್ಸ್‌ ಆಗಲಿದೆ’ ಎಂಬ ಮಾಹಿತಿ ನೀಡುತ್ತಾರೆ.

ನಟನಾಗಬೇಕೆಂಬ ಹಂಬಲಕ್ಕೆ ಕಿಚ್ಚನ ಬೆಂಬಲ…

ಸಿನೆಮಾದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿಯಿದೆ. ಸುದೀಪ್‌ ಅಣ್ಣನ ಜೊತೆಗಿನ ಒಡನಾಟ ಸಿನೆಮಾದ ಬಗ್ಗೆ ನನಗೆ ಹೆಚ್ಚು ತಿಳಿದುಕೊಳ್ಳುವಂತೆ ಮಾಡಿತು. ಚಿತ್ರರಂಗದಲ್ಲಿ ನಾನೊಬ್ಬ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಕನಸು. ಅದೇ ಕನಸನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬಂದಿದ್ದೇನೆ. ಸಿನೆಮಾದಲ್ಲಿ ಹೀರೋ ಆಗಲಿ, ವಿಲನ್‌ ಆಗಲಿ ಅಥವಾ ಇನ್ನಿತರ ಯಾವುದೇ ಪಾತ್ರವಿರಲಿ, ಅದಕ್ಕೆ ಜೀವ-ಭಾವ ತುಂಬಿ ಅಭಿನಯಿಸಬೇಕು ಎಂಬುದಷ್ಟೇ ನನಗೆ ಗೊತ್ತಿರುವುದು. ಸುದೀಪ್‌ ಅಣ್ಣ ನನಗೆ ಹಿರಿಯ ಅಣ್ಣನಾಗಿ ಇಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರಿಂದ ಸಿನೆಮಾದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಈಗಲೂ ಕಲಿಯುತ್ತಿದ್ದೇನೆ’

  • ಪ್ರವೀಣ್‌, ಯುವನಟ

Related Posts

error: Content is protected !!