ಸಿಂಪಲ್ ಸುನಿ-ಕಾರ್ತಿಕ್ ಮಹೇಶ್ ಹೊಸಚಿತ್ರ ‘ರಿಚಿ ರಿಚ್’

ಸಿಂಪಲ್ ಸುನಿ-ಕಾರ್ತಿಕ್ ಹೊಸ ಮಹೇಶ್ ಸಿನೆಮಾ ಘೋಷಣೆ
ಕನ್ನಡ ಚಿತ್ರರಂಗಕ್ಕೆ ‘ಎವಿಆರ್ ಎಂಟರ್ಟೈನರ್’ ನಿರ್ಮಾಣ ಸಂಸ್ಥೆಎಂಟ್ರಿ
ಏಕಕಾಲಕ್ಕೆ ಎರಡು ಸಿನೆಮಾಗಳನ್ನು ಘೋಷಿಸಿದ ‘ಎವಿಆರ್ ಎಂಟರ್ಟೈನರ್’
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ‘ಎವಿಆರ್ ಎಂಟರ್ಟೈನರ್’ ಎಂಬ ತಮ್ಮದೇಯಾದ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದೀಗ ಈ ಹೊಸ ಸಿನೆಮಾ ಸಂಸ್ಥೆಯಡಿ ಏಕಕಾಲಕ್ಕೆ ಎರಡು ಹೊಸ ಸಿನೆಮಾಗಳನ್ನು ಘೋಷಣೆ ಮಾಡಲಾಗಿದೆ. ಸದ್ಯ ‘ಎವಿಆರ್ ಎಂಟರ್ಟೈನರ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದರೆ, ಎರಡನೇ ಚಿತ್ರಕ್ಕೆ ಸುಜಯ್ ಶಾಸ್ತ್ರೀ ನಿರ್ದೇಶನ ಮಾಡಲಿದ್ದಾರೆ.
‘ಬಿಗ್ ಬಾಸ್’ ಕಾರ್ತಿಕ್ ಹೊಸಚಿತ್ರಕ್ಕೆ ಸಿಂಪಲ್ ಸುನಿ ಸಾರಥಿ..
‘ಎವಿಆರ್ ಎಂಟರ್ಟೈನರ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರವನ್ನು ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾಗಿರುವ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನೆಮಾಕ್ಕೆ ‘ರಿಚಿ ರಿಚ್’ ಎಂಬ ಟೈಟಲ್ ಇಡಲಾಗಿದ್ದು, ಇದೀಗ ಈ ಸಿನೆಮಾದ ಟೈಟಲ್ ಅಧಿಕೃತವಾಗಿ ಘೋಷಣೆಯಾಗಿದೆ. ಸುನಿ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕ. ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಫನ್, ಫ್ಯಾಮಿಲಿ ಜೊತೆಗೆ ಎಮೋಷನಲ್ ಅಂಶಗಳನ್ನು ಬ್ಲೆಂಡ್ ಮಾಡಿ ಕಥೆಯನ್ನು ಸುನಿ ಕಟ್ಟಿಕೊಟ್ಟಿದ್ದಾರೆ. ‘ರಿಚಿ ರಿಚ್’ ಸಿನೆಮಾಗೆ ವೀರ್ ಸಮರ್ಥ್ ಸಂಗೀತ ನಿರ್ದೇಶನ, ಅಭಿಲಾಷ್ ಕಳತ್ತಿ ಛಾಯಾಗ್ರಹಣವಿರಲಿದೆ. ಉಳಿದಂತೆ ಈ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಎರಡನೇ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶನ
‘ಎವಿಆರ್ ಎಂಟರ್ಟೈನರ್’ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಎರಡನೇ ಸಿನೆಮಾವನ್ನು ಸುಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರಗಳನ್ನು ನಿರ್ದೇಶಿಸಿರುವ ಸುಜಯ್, ಈ ಬಾರಿ ಈ ಸಿನೆಮಾದಲ್ಲಿ ಕ್ರೀಡಾ ಕಥೆಯನ್ನು ತೆರೆಮೇಲೆ ಹರವಿಡೋದಿಕ್ಕೆ ಹೊರಟಿದ್ದಾರೆ. ಪುಟ್ಬಾಲ್ ಕಥಾಹಂದರಯುಳ್ಳ ಈ ಚಿತ್ರದ ಪೋಸ್ಟರ್ ಮಾತ್ರ ಸದ್ಯಕ್ಕೆ ಬಿಡುಗಡೆಯಾಗಿದೆ. ಉಳಿದಂತೆ ಈ ಚಿತ್ರದ ನಾಯಕ ಯಾರು? ಇತರ ಕಲಾವಿದರು ಮತ್ತು ತಂತ್ರಜ್ಞರು ಯಾರು ಅನ್ನೋದನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಸದ್ಯ ಈ ಸಿನೆಮಾದ ಟೀಂ ರೆಡಿಯಾಗುತ್ತಿದ್ದು, ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳೋದಾಗಿ ಚಿತ್ರತಂಡ ತಿಳಿಸಿದೆ. ಒಟ್ಟಾರೆ ಏಕಕಾಲಕ್ಕೆ ‘ಎವಿಆರ್ ಎಂಟರ್ಟೈನರ್’ ಬ್ಯಾನರ್ ಎರಡು ಸಿನೆಮಾಗಳನ್ನು ಘೋಷಣೆ ಮಾಡಿದ್ದು, ಈ ಎರಡೂ ಸಿನೆಮಾಗಳೂ ಮುಂದಿನ ವರ್ಷದ ಅಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.