ಈ ಬಾರಿ ನಟ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ..!

ಅನಾರೋಗ್ಯದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ
ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳ ಕ್ಷಮೆ; ದರ್ಶನ್
ವೀಡಿಯೋ ಸಂದೇಶ ಹಂಚಿಕೊಂಡ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿರುವ ದರ್ಶನ್, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೆಲವು ಸಮಯವಾಗಿದೆ. ಈಗ ಮೊದಲ ಬಾರಿಗೆ ವೀಡಿಯೋ ಸಂದೇಶವನ್ನು ಅವರು ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 16ರಂದು ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಪ್ರತೀ ವರ್ಷ ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳ ಕ್ಷಮೆ ಕೇಳಿದ ದರ್ಶನ್, ‘ಈ ವರ್ಷ ಬೆನ್ನು ಮತ್ತು ಕಾಲು ನೋವು ಇರುವುದರಿಂದ ಗಂಟೆಗಟ್ಟಲೆ ನಿಂತುಕೊಂಡಿರಲು ಸಾಧ್ಯವಿಲ್ಲ. ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಅದರ ಪವರ್ ಇರುವವರೆಗೆ 10-15 ದಿನ ನೋವು ಕಡಿಮೆ ಇರುತ್ತದೆ. ಮತ್ತೆ ನೋವು ಶುರುವಾಗುತ್ತದೆ. ಅನಾರೋಗ್ಯದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಎಲ್ಲರನ್ನೂ ಭೇಟಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಅಭಿಮಾನಿ ಸೆಲೆಬ್ರಿಟಿಗಳಿಗೆ ಮೋಸ ಮಾಡುವುದಿಲ್ಲ…
ಅಭಿಮಾನಿ ಸೆಲೆಬ್ರಿಟಿಗಳಿಗೆ ಮೋಸ ಮಾಡುವುದಿಲ್ಲ ಎಂದು ಹೇಳಿರುವ ಅವರು, ‘ನನ್ನನ್ನು ನಂಬಿ ಹಣ ಹೂಡಿರುವ ನಿರ್ಮಾಪಕರಿಗೆ ಸಹ ತೊಂದರೆ ಕೊಡುವುದಿಲ್ಲ. ಒಪ್ಪಿಕೊಂಡಿರುವ ಸಿನೆಮಾಗಳನ್ನು ಮಾಡಿ ಮುಗಿಸುತ್ತೇನೆ. ಯಾವುದೇ ಊಹಾಪೋಗಳನ್ನು ನಂಬಬೇಡಿ. ‘ಸೂರಪ್ಪ’ ಬಾಬು ಅವರಿಗೆ ಬೇರೆ ಕಮಿಟ್‍ಮೆಂಟ್‍ಗಳಿದ್ದರಿಂದ ಅವರು ಕೊಟ್ಟ ಅಡ್ವಾನ್ಸ್ ವಾಪಸ್ಸು ಕೊಟ್ಟಿದ್ದೇನೆ. ಮುಂದೊಂದು ದಿನ ಒಳ್ಳೆಯ ಕಥೆ ಸಿಕ್ಕಿದರೆ ಅವರ ಜೊತೆಗೆ ಸಿನೆಮಾ ಮಾಡುತ್ತೇನೆ. ಇನ್ನು, ‘ಜೋಗಿ’ ಪ್ರೇಮ್ ಜೊತೆಗೆ ಸಿನೆಮಾ ಮಾಡುವುದು ನಿಜ. ‘ಕೆ.ವಿ.ಎನ್. ಪ್ರೊಡಕ್ಷನ್ಸ್’ನಲ್ಲಿ ಈಗಾಗಲೇ ದೊಡ್ಡ ಸಿನೆಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನೆಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇನೆ. ಮುಂದೆ ಖಂಡಿತಾ ಮಾಡುತ್ತೇನೆ’ ಎಂದಿದ್ದಾರೆ.
https://x.com/dasadarshan/status/1888090756080091479?s=48
‘ಕೊನೆಯ ಉಸಿರುವ ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂದಿರುವ ದರ್ಶನ್, ‘ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನ್ನಡದ ಜನರು ಕೊಟ್ಟಿರುವ ಪ್ರೀತಿ ಉಳಿಸಿ ಕಾಪಾಡಿಕೊಂಡು ಹೋಗುತ್ತೇನೆ’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಜೊತೆಗೆ ಧನ್ವೀರ್ ಗೌಡ, ರಚಿತಾ ರಾಮ್ ಮತ್ತು ರಕ್ಷಿತಾ ಅವರನ್ನು ಸ್ಮರಿಸಿಕೊಂಡಿದ್ದಾರೆ.