ಆಗಸ್ಟ್ 1. ಕ್ಕೆ ಬಹುನಿರೀಕ್ಷಿತ ‘ಮಿರಾಯ್’ ರಿಲೀಸ್

ವಿಶ್ವದಾದ್ಯಂತ ಆ. 1ಕ್ಕೆ ಏಕಕಾಲಕ್ಕೆ ‘ಮಿರಾಯ್’ ತೆರೆಗೆ
‘ಹನು-ಮ್ಯಾನ್’ ಖ್ಯಾತಿಯ ತೇಜಾ ಸಜ್ಜಾ ಅಭಿನಯದ ಮುಂದಿನ ಚಿತ್ರ…
ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್
ದಕ್ಷಿಣ ಭಾರತದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾದ ‘ಹನು-ಮ್ಯಾನ್’ ಖ್ಯಾತಿಯ ತೇಜಾ ಸಜ್ಜಾ ಅಭಿನಯದ ಮುಂದಿನ ಚಿತ್ರ ‘ಮಿರಾಯ್’ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, ‘ಮಿರಾಯ್ ಇದೇ ವರ್ಷ ಆಗಸ್ಟ್ 1 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆ ಕಾಣಲಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿ, ಟಿ. ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಮಿರಾಯ್’ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದು, ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
‘ರೈಸಿಂಗ್ ಸ್ಟಾರ್’ ಆಕ್ಷನ್ ಚಿತ್ರ
ಭಾರತೀಯ ಚಿತ್ರರಂಗದ ಉದಯೋನ್ಮುಖ ನಟ, ‘ರೈಸಿಂಗ್ ಸ್ಟಾರ್’ ಎಂದೇ ಖ್ಯಾತರಾಗಿರುವ ತೇಜಾ ಸಜ್ಜಾ ಸೂಪರ್ ಹೀರೋ ಚಿತ್ರಗಳನ್ನು ಭಾರತ ಚಿತ್ರರಂಗಕ್ಕೆ ನೀಡುವ ಗುರಿಯನ್ನು ಹೊಂದಿದ್ದು,ಅದಕ್ಕಾಗಿ ‘ಹನು-ಮ್ಯಾನ್’ ಮುನ್ನುಡಿಯಾಗಿತ್ತು. ಇದೀಗ ಅವರ ‘ಮಿರಾಯ್’ ಚಿತ್ರ ಈ ಸೂಪರ್ ಹೀರೋ ಚಿತ್ರಗಳನ್ನು ಮರು ವ್ಯಾಖ್ಯಾನಿಸಲಿದೆ ಎಂಬುದು ಸಿನಿ ಪ್ರೇಮಿಗಳ ಅಭಿಪ್ರಾಯವಾಗಿದೆ. ‘ಮಿರಾಯ್’ ಒಂದು ಆಕ್ಷನ್- ಸಾಹಸಗಳ ಚಿತ್ರವಾಗಿದ್ದು, ಇದರಲ್ಲಿ ತೇಜಾ ಸಜ್ಜಾ ಒಬ್ಬ ಸೂಪರ್ ಯೋಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಪ್ಯಾನ್ ಇಂಡಿಯಾ ‘ಮಿರಾಯ್’
ಈ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆಗಸ್ಟ್ 1ರಿಂದ 8 ಭಾಷೆಗಳಲ್ಲಿ, 2D ಮತ್ತು 3D ವಿಧಾನಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆ ಮಾಡಿರುವ ರಿಲೀಸ್ ದಿನಾಂಕದ ಪೋಸ್ಟರ್ ಅಲ್ಲಿ, ತೇಜಾ ಸಜ್ಜಾ ಹಿಮ ಪರ್ವತಗಳ ನಡುವೆ ಆಯುಧ ಒಂದನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಚಿತ್ರದ ಭವ್ಯತೆಯನ್ನು ಈ ಪೋಸ್ಟರ್ ಒಂದರಲ್ಲಿ ಕಾಣಬಹುದು. ‘ಮಿರಾಯ್’ ಚಿತ್ರವು ಭವ್ಯ ತಾರಾಗಣವನ್ನೇ ಹೊಂದಿದೆ. ಟಾಲಿವುಡ್ ನ ‘ರಾಕಿಂಗ್ ಸ್ಟಾರ್’ ಮನೋಜ್ ಮಂಚು ಖಳನಾಯಕನ ಪಾತ್ರ ವಹಿಸುತ್ತಿರುವುದು ವಿಶೇಷ ಸಂಗತಿಯಾಗಿದೆ. ರಿತಿಕಾ ನಾಯಕ್ ಚಿತ್ರದ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.
‘ಸೂಪರ್ ಯೋಧ’ನಾದ ತೇಜಾ ಸಜ್ಜಾ
ಚಿತ್ರದ ಮತ್ತೊಂದು ವಿಶೇಷವೆಂದರೆ, ಚಿತ್ರ ತಂಡ ಬಿಡುಗಡೆ ಮಾಡಿರುವ ಪ್ರೋಮೋ ವಿಡಿಯೋಗಳು, ಅದರಲ್ಲಿ ನಟ ತೇಜಾ ಸಜ್ಜಾ ಅವರ ಸಾಹಸ ದೃಶ್ಯಗಳು, ಸಿನೆಮಾ ಮೇಲೆ ಆತನಿಗಿರುವ ಗೌರವ, ಇವೆಲ್ಲವೂ ಪ್ರೇಕ್ಷಕರ ಗಮನ ಸೆಳೆದಿವೆ. ತೇಜಾ ಸಜ್ಜಾ ಸೂಪರ್ ಯೋಧನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನದಲ್ಲಿ ಹಿಂದೆಂದೂ ಕಾಣದಷ್ಟು ಭರ್ಜರಿಯಾಗಿ ‘ಮಿರಾಯ್’ ಚಿತ್ರ ಮೂಡಿಬರಲಿದೆ. ಈ ಚಿತ್ರವು ಆಕ್ಷನ್- ಸಾಹಸ ಚಿತ್ರಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬ ವಿಷಯ ಮತ್ತಷ್ಟು ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ ಎಂಬುದು ಸಿನಿ ತಂಡದ ಅಭಿಪ್ರಾಯವಾಗಿದೆ.
‘ಮಿರಾಯ್’ ಚಿತ್ರದಲ್ಲಿ ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮುಖ್ಯ ಛಾಯಾಗ್ರಹಣವನ್ನು ಕೈಗೊಂಡಿದ್ದು, ಚಿತ್ರದ ಸಂಭಾಷಣೆಯನ್ನು ರಚಿಸಿರುವ ಮಣಿ ಬಾಬು ಕರಣಮ್ ಅವರೊಡನೆ ಚಿತ್ರಕಥೆ ರಚನೆಗೂ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಗೌರಾ ಹರಿ ಸಂಗೀತ ಸಂಯೋಜನೆ ಮಾಡಿದ್ದಾರೆ.